Nagaon Bypoll: ಅಸ್ಸಾಂನ ನಾಗಾಂವ್ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವಿನತ್ತ ದಾಪುಗಾಲಿಡುತ್ತಿದ್ದು, ಕಾಂಗ್ರೆಸ್ ಪಕ್ಷವು ಮೂರನೇ ಸ್ಥಾನಕ್ಕೆ ಕುಸಿದಿದೆ. ಈ ವಿಷಯವಾಗಿ ಮಾತನಾಡಿರುವ ಕಾಂಗ್ರೆಸ್ನ ಮಾಜಿ ಮಿತ್ರಪಕ್ಷವಾದ ರೈಜೋರ್ ದಳದ ಮುಖ್ಯಸ್ಥ ಅಖಿಲ್ ಗೊಗೊಯ್, ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಶೇ. 55 ಕ್ಕಿಂತ ಹೆಚ್ಚು ಮುಸ್ಲಿಂ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿರುವುದು ರಾಜ್ಯದ ಬಿಜೆಪಿ ವಿರೋಧಿ ಶಕ್ತಿಗಳ ಪಾಲಿಗೆ ಒಂದು ದುರಂತ ಎಂದು ಅಖಿಲ್ ಆರೋಪಿಸಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಖಿಲ್ ಗೊಗೊಯ್, ಗೌರವ್ ಗೊಗೊಯ್ ಅವರಿಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯುವ ನೈತಿಕ ಹಕ್ಕುಯಿಲ್ಲ ಎಂದು ಹೇಳಿದ್ದು, ಪಕ್ಷದಲ್ಲಿ ದೊಡ್ಡಮಟ್ಟದ ಬದಲಾವಣೆಗಳಾಗಬೇಕೆಂದಿದ್ದಾರೆ. ಬಿಜೆಪಿಯು ಈ ಅಲ್ಪಸಂಖ್ಯಾತ ಪ್ರಾಬಲ್ಯವಿರುವ ಕ್ಷೇತ್ರವನ್ನು ಗೆಲ್ಲಲು ಸಜ್ಜಾಗಿದೆ, ಇದು ಕಾಂಗ್ರೆಸ್‌ಗೆ ಐತಿಹಾಸಿಕ ಸೋಲು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಪಕ್ಷ ಸಂಘಟನೆಯ ವಿಷಯದಲ್ಲಿ ಗೌರವ್ ಗೊಗೊಯ್ ಸಂಪೂರ್ಣವಾಗಿ ವಿಫಲರಾಗಿದ್ದು, ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಖಿಲ್ ಆಗ್ರಹಿಸಿದ್ದಾರೆ.
ಸಿಎಎ ವಿರೋಧಿ ಪ್ರತಿಭಟನೆಗಳ ನಂತರ 2020ರ ಅಕ್ಟೋಬರ್ನಲ್ಲಿ ಅಖಿಲ್ ಗೊಗೊಯ್ ಅವರಿಂದ ಸ್ಥಾಪಿಸಲ್ಪಟ್ಟ ರೈಜೋರ್ ದಳವು, 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಸದ್ಯ ಕೇವಲ ಎರಡು ಸ್ಥಾನಗಳನ್ನು ಹೊಂದಿದೆ. ಇದರಲ್ಲಿ ಅಖಿಲ್ ಗೊಗೊಯ್ ಅವರು ಸಿಬ್ಸಾಗರ್ ಕ್ಷೇತ್ರವನ್ನು ಮತ್ತು ಮೆಹಬೂಬ್ ಮುಕ್ತಾರ್ ಅವರು ಧಿಂಗ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಕಾಂಗ್ರೆಸ್ನ ಸಂಸದರಾಗಿದ್ದ ಪ್ರದ್ಯುತ್ ಬೋರ್ಡೊಲೊಯ್ ಅವರು ಬಿಜೆಪಿಗೆ ಸೇರ್ಪಡೆಗೊಂಡು, ಡಿಸ್ಪೂರ್ ವಿಧಾನಸಭಾ ಕ್ಷೇತ್ರದಿಂದ ಗೆದ್ದ ನಂತರ, ನಾಗಾಂವ್ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಅನಿವಾರ್ಯವಾಗಿತ್ತು. ಕಾಂಗ್ರೆಸ್ ಪಕ್ಷವು 2019 ಮತ್ತು 2024 ಎರಡೂ ಲೋಕಸಭಾ ಚುನಾವಣೆಗಳಲ್ಲಿ ಈ ಕ್ಷೇತ್ರವನ್ನು ಗೆದ್ದುಕೊಂಡಿತ್ತು. ಇದು ಅಸ್ಸಾಂನಲ್ಲಿ ಪಕ್ಷದ ಪ್ರಮುಖ ಭದ್ರಕೋಟೆಗಳಲ್ಲಿ ಒಂದಾಗಿತ್ತು. 2023 ರ ಕ್ಷೇತ್ರ ಪುನರ್ವಿಂಗಡನೆಯ ನಂತರ, ಇಲ್ಲಿ ಮುಸ್ಲಿಮರು ಶೇ. 55 ರಿಂದ 58 ರಷ್ಟು ಮತದಾರರನ್ನು ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ.
ಈ ಸೋಲು ಕೇವಲ ಕಾಂಗ್ರೆಸ್‌ಗೆ ಮಾತ್ರವಲ್ಲ, ಎಲ್ಲಾ ವಿರೋಧ ಪಕ್ಷಗಳಿಗೆ ಮತ್ತು ಎಲ್ಲಾ ಬಿಜೆಪಿ ವಿರೋಧಿ ಶಕ್ತಿಗಳಿಗೆ ದುರದೃಷ್ಟಕರ, ಕಾಂಗ್ರೆಸ್ ಒಳಗೆ ಯಾವ ಮಟ್ಟದ ಬಿಕ್ಕಟ್ಟು ಇದೆ ಎಂಬುದನ್ನು ಈ ಫಲಿತಾಂಶ ಬಹಿರಂಗಪಡಿಸಿದೆ. ಪಕ್ಷವು ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಎರಡೂ ಸಮುದಾಯಗಳ ಬೆಂಬಲವನ್ನು ಕಳೆದುಕೊಳ್ಳುತ್ತಿದೆ. ಗೌರವ್ ಗೊಗೊಯ್ ಅವರು ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದಿರುವ ಅಖಿಲ್, ಪಕ್ಷದ ಹೈಕಮಾಂಡ್ ಗೌರವ್ ಬದಲು ಮತ್ತೊಬ್ಬರನ್ನು ಆ ಸ್ಥಾನಕ್ಕೆ ತಂದು ಕೂಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ತಿಂಗಳು ಸೆಪ್ಟೆಂಬರ್ 3 ರಂದು ಕಾಂಗ್ರೆಸ್ ಪಕ್ಷವು ಅಖಿಲ್ ಗೊಗೊಯ್ ಅವರ ರೈಜೋರ್ ದಳದೊಂದಿಗೆ ತನ್ನ ಮೈತ್ರಿಯನ್ನು ಅಧಿಕೃತವಾಗಿ ಕಡಿದುಕೊಂಡಿದೆ. ರೈಜೋರ್ ದಳದ ನಾಯಕರು ಕಾಂಗ್ರೆಸ್ ನಾಯಕರ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ ಮತ್ತು ತಮ್ಮ ಮೈತ್ರಿಕೂಟದ ತತ್ವಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಅಸ್ಸಾಂ ಕಾಂಗ್ರೆಸ್ ಆರೋಪಿಸಿತ್ತು. ಕೈ ನಾಯಕರು ತಮ್ಮ ಪಕ್ಷವನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಸಿಬ್ಸಾಗರ್ ಶಾಸಕರು ಆಗಿರುವ ಅಖಿಲ್ ಗೊಗೊಯ್, ನಾಗಾಂವ್ ಉಪಚುನಾವಣೆಗೆ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದ್ದರು.(ಏಜೆನ್ಸೀಸ್).