ಸದ್ದಿಲ್ಲದೆ ಬಿಜೆಪಿ ವಾರ್ ರೂಮ್‌ಗೆ ಎಂಟ್ರಿ ಕೊಟ್ಟ ಅಮಿತ್ ಷಾ! ಬಿಜೆಪಿಯ ಮಿಷನ್ ಕ್ಲೀನ್ಗೆ ದೀದಿ ಸಾಮ್ರಾಜ್ಯ ನಡುಗುತ್ತಿದೆಯೇ..? Amit Shah
ಅಮಿತ್ ಷಾ
Published on:
Copied
Follow Us
ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ದಿನದಂದೇ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah), ಅಕ್ರಮ ವಲಸಿಗರ ವಿರುದ್ಧ ಅಕ್ಷರಶಃ ಯುದ್ಧ ಘೋಷಿಸಿದ್ದಾರೆ. ಹೂಗ್ಲಿ ಜಿಲ್ಲೆಯ ಬಾಲಾಘರ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಷಾ, ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದ ಗಡಿಯಲ್ಲಿ ಒಬ್ಬನೇ ಒಬ್ಬ ನುಸುಳುಕೋರನೂ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ರಾಜ್ಯದ ಆರ್ಥಿಕತೆ ಮತ್ತು ಭದ್ರತೆಗೆ ಧಕ್ಕೆ ತರುತ್ತಿರುವ ನುಸುಳುಕೋರರನ್ನು ಹೊರಹಾಕುವ ಪ್ರತಿಜ್ಞೆಯನ್ನು ಷಾ ಈ ಸಂದರ್ಭದಲ್ಲಿ ಮಾಡಿದರು.
ನುಸುಳುಕೋರ ಮುಕ್ತ ಬಂಗಾಳ: ಬಿಜೆಪಿಯ ಸಂಕಲ್ಪ
ಅಮಿತ್ ಷಾ ಭಾಷಣದ ಪ್ರಮುಖ ಗುರಿ ಅಕ್ರಮ ವಲಸೆ ಮತ್ತು ರಾಜ್ಯದ ಭದ್ರತೆಯಾಗಿತ್ತು. ಚುನಾವಣಾ ಫಲಿತಾಂಶದ ನಂತರ, ಬಂಗಾಳದೊಳಗೆ ಯಾರೂ ನುಸುಳಲು ಸಾಧ್ಯವಾಗದಂತೆ ಮಾಡುತ್ತೇವೆ. ಈಗಾಗಲೇ ಇಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಬಿಜೆಪಿ ಸರ್ಕಾರವು ಹೊರಹಾಕಲಿದೆ. ನೀವು ಈ ಬಾರಿ ಮತ ಹಾಕುತ್ತಿರುವುದು ಕೇವಲ ಒಬ್ಬ ಶಾಸಕನನ್ನು ಆರಿಸಲು ಅಥವಾ ಸರ್ಕಾರ ರಚಿಸಲು ಅಲ್ಲ, ಬದಲಿಗೆ ಬಂಗಾಳದ ಮಣ್ಣನ್ನು ನುಸುಳುಕೋರರಿಂದ ಮುಕ್ತಗೊಳಿಸಲು ಎಂದು ಷಾ ಜನರಿಗೆ ಕರೆ ನೀಡಿದ್ದಾರೆ.
ನುಸುಳುಕೋರರಿಂದ ಬಂಗಾಳದ ಸಾಮಾನ್ಯ ಜನರಿಗೆ ಆಗುತ್ತಿರುವ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಗೃಹ ಸಚಿವರು, ನುಸುಳುಕೋರರು ಬಂಗಾಳದ ಯುವಕರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಬಡವರ ಪಾಲಿನ ಪಡಿತರವನ್ನು ಲೂಟಿ ಮಾಡುತ್ತಿದ್ದಾರೆ. ಇದು ಕೇವಲ ಸ್ಥಳೀಯ ಸಮಸ್ಯೆಯಲ್ಲ, ಇದು ದೇಶದ ಭದ್ರತೆಯನ್ನೇ ಬುಡಮೇಲು ಮಾಡುವ ಸಂಚು ಎಂದು ದೀದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೇ 5ಕ್ಕೆ ದೀದಿ ಆಟ ಮುಗಿಯಲಿದೆ
ಮೊದಲ ಹಂತದ ಮತದಾನದ ಪ್ರವೃತ್ತಿಯನ್ನು ಗಮನಿಸಿರುವ ಅಮಿತ್ ಶಾ, ಬಂಗಾಳದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದು ಬಂಗಾಳದಾದ್ಯಂತ ನನ್ನ 30ನೇ ಕಾರ್ಯಕ್ರಮವಾಗಿದ್ದು. ಮತದಾನದ ಟ್ರೆಂಡ್ ನೋಡಿದರೆ ಮೇ 5ರಂದು ದೀದಿ ಆಟ ಮುಗಿಯುವುದು ನಿಶ್ಚಿತವಾಗಿದೆ. ಬಂಗಾಳದಲ್ಲಿ ಕಮಲ ಅರಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಏಪ್ರಿಲ್ 29ರಂದು ನಡೆಯಲಿರುವ ಎರಡನೇ ಹಂತದ ಮತದಾನದಲ್ಲಿ ಜನರು ಕಮಲದ ಗುರುತಿಗೆ ಮತ ನೀಡುವ ಮೂಲಕ ಬಂಗಾಳದ ಪುನರುತ್ಥಾನಕ್ಕೆ ನಾಂದಿ ಹಾಡಬೇಕು ಎಂದು ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಮನವಿ ಮಾಡಿದ್ದಾರೆ.
ಸಾಲ್ಟ್ ಲೇಕ್ ವಾರ್ ರೂಮ್ನಲ್ಲಿ ರಹಸ್ಯ ಸಭೆ
ಈ ರ‍್ಯಾಲಿಗೂ ಮುನ್ನ ಅಮಿತ್ ಷಾ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ಬಿಜೆಪಿಯ ವಾರ್ ರೂಮ್‌ಗೆ ಭೇಟಿ ನೀಡಿ ಹಿರಿಯ ನಾಯಕರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರ ಹಾಗೂ ದಕ್ಷಿಣ ಪ್ರಾಂತಗಳಲ್ಲಿ ನಡೆದ ಮತದಾನದ ಅಂಕಿಅಂಶಗಳನ್ನು ಷಾ ಪರಿಶೀಲಿಸಿದ್ದಾರೆ. ಬೂತ್ ಮಟ್ಟದ ಕಾರ್ಯಕರ್ತರಿಂದ ಬಂದ ಫೀಡ್‌ಬ್ಯಾಕ್ ಆಧಾರದ ಮೇಲೆ ಮುಂದಿನ ಹಂತದ ಪ್ರಚಾರಕ್ಕೆ ತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮತದಾನದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಮನಿಸಲು ವಿಶೇಷ ತಂಡಗಳಿಗೆ ಸೂಚನೆ ನೀಡಿದ್ದು, ಈ ಬೇಟಿ ಅಮಿತ್ ಷಾ ಅವರ ಪ್ರವಾಸ ಪಟ್ಟಿಯಲ್ಲಿ ಇಲ್ಲದಿದ್ದರೂ, ವಾರ್ ರೂಮ್‌ಗೆ ಎಂಟ್ರಿ ನೀಡಿರುವುದು, ರಾಜ್ಯದ ಚುನಾವಣೆ ಮೇಲೆ ಬಿಜೆಪಿ ಹೊಂದಿರುವ ಗಂಭೀರತೆಯನ್ನು ತೋರಿಸುತ್ತದೆ.
ಬಂಗಾಳದ ಭವಿಷ್ಯಕ್ಕೆ ನಿರ್ಣಾಯಕ ಚುನಾವಣೆ
ಪಶ್ಚಿಮ ಬಂಗಾಳದ ಈ ಚುನಾವಣೆ ದೇಶದ ಗಮನ ಸೆಳೆದಿದೆ. ಅಮಿತ್ ಷಾ ಅವರ 'ನುಸುಳುಕೋರ ವಿರೋಧಿ' ಅಜೆಂಡಾ ಬಂಗಾಳದ ಮತದಾರರನ್ನು ಎಷ್ಟರ ಮಟ್ಟಿಗೆ ಪ್ರಭಾವಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಟಿಎಂಸಿಯ ಭದ್ರಕೋಟೆಯಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳಲು ಸಕಲ ಸಿದ್ಧತೆ ನಡೆಸಿದ್ದು, ಅಮಿತ್ ಷಾ ಅವರ ಸತತ ಪ್ರವಾಸಗಳು ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ತುಂಬಿವೆ ಎಂದು ವರದಿಗಳು ಹೇಳುತ್ತಿವೆ,(ಏಜೆನ್ಸೀಸ್).