ಪ್ರಧಾನಿ ಮೋದಿ ಭಯೋತ್ಪಾದಕ ಎಂಬ ಹೇಳಿಕೆ; ಇದು ರಾಷ್ಟ್ರಕ್ಕೆ ಅವಮಾನ: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಮಿತ್ ಶಾ ವಾಗ್ದಾಳಿ | Amit Shah

ಅಮಿತ್ ಶಾ ಮತ್ತು ಮಲ್ಲಿಕಾರ್ಜುನ ಖರ್ಗೆ
ಅಮಿತ್ ಶಾ ಮತ್ತು ಮಲ್ಲಿಕಾರ್ಜುನ ಖರ್ಗೆ
Published on
ಕೋಲ್ಕತ್ತಾ: ಪ್ರಧಾನಿ ಮೋದಿಯನ್ನು ಭಯೋತ್ಪಾದಕ ಎಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಕಿಡಿಕಾರಿದ್ದು, ಅವರು ಸಾರ್ವಜನಿಕ ನಡವಳಿಕೆಯ ಪ್ರತಿಯೊಂದು ಮಾನದಂಡವನ್ನು ಉಲ್ಲಂಘಿಸಿದ್ದಾರೆ ಮತ್ತು ರಾಷ್ಟ್ರಕ್ಕೆ ಅವಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರತಿದಿನ ಕಾಂಗ್ರೆಸ್ ತನ್ನ ವರ್ತನೆಯಲ್ಲಿ ಕೆಳಮಟ್ಟಕ್ಕೆ ಇಳಿಯುತ್ತಿದೆ, ಸಾರ್ವಜನಿಕ ಚರ್ಚೆಯ ಗುಣಮಟ್ಟವನ್ನು ಕಡಿಮೆ ಮಾಡುವಲ್ಲಿ ತನ್ನದೇ ಆದ ದಾಖಲೆಯನ್ನು ಮುರಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಅಗ್ರಗಣ್ಯ ನಾಯಕನಿಗೆ ಮಾಡಿರುವ ಈ ಅವಮಾನ, ಅವರನ್ನು ಬೆಂಬಲಿಸುವ ಲಕ್ಷಾಂತರ ಜನರಿಗೆ ಮಾಡಿದ ಅವಮಾನ. ಕಳೆದ 12 ವರ್ಷಗಳಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಿರುವ ಮೋದಿಯವರನ್ನು ಭಯೋತ್ಪಾದಕ ಎಂದು ಕರೆಯುವುದು ಅತ್ಯಂತ ಖಂಡನೀಯ. ಕಾಂಗ್ರೆಸ್ ಪ್ರತಿ ಬಾರಿ ನಿಂದನೆ ಮಾಡಿದಾಗಲೂ, ಅವರಿಗೆ ಉತ್ತರಿಸುವುದು ಭಾರತದ ಜನರೇ. ಈ ಬಾರಿಯೂ ಜನರು ಇದಕ್ಕೆ ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು? 

ತಮಿಳುನಾಡು ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯದ ದಿನ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಎಐಎಡಿಎಂಕೆ ನಿರ್ಧಾರವನ್ನು ಪ್ರಶ್ನಿಸಿದ್ದರು. ಈ ವೇಳೆ ಅಣ್ಣಾದೊರೈ ಅವರ ಫೋಟೋ ಹಾಕುವ ಎಐಎಡಿಎಂಕೆ ಜನರು ಮೋದಿ ಜೊತೆ ಹೇಗೆ ಸೇರುತ್ತಾರೆ? ಅವರೊಬ್ಬ ಭಯೋತ್ಪಾದಕ ಎಂದು ಕರೆದಿದ್ದರು.
ಮೋದಿಯವರ ಪಕ್ಷ ಸಮಾನತೆ ಮತ್ತು ನ್ಯಾಯದಲ್ಲಿ ನಂಬಿಕೆ ಇಡುವುದಿಲ್ಲ. ಆದರೆ ಎಐಎಡಿಎಂಕೆ ನಾಯಕರು ಅವರೊಂದಿಗೆ ಸೇರುತ್ತಿದ್ದಾರೆ. ಅಂದರೆ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ. ಅಣ್ಣಾದೊರೈ, ಕಾಮರಾಜ್, ಪೆರಿಯಾರ್, ಕಲಿಯಾನರ್, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಶಾಸ್ತ್ರವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಬಳಿಕ ತಕ್ಷಣ ಭಯೋತ್ಪಾದಕ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ಖರ್ಗೆ, ನಾನು ಭಯೋತ್ಪಾದಕ ಎಂದು ಹೇಳಿಲ್ಲ. ಆದರೆ ಮೋದಿ ಜನರನ್ನು ಮತ್ತು ರಾಜಕೀಯ ಪಕ್ಷಗಳನ್ನು ಭಯಭೀತಗೊಳಿಸುತ್ತಿದ್ದಾರೆ. ಇಡಿ, ಐಟಿ ಹಾಗೂ ಸಿಬಿಐನಂತಹ ಸಂಸ್ಥೆಗಳು ಅವರ ಕೈಯಲ್ಲಿವೆ ಎಂದು ತಿಳಿಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net