ಗೋವಾದಲ್ಲಿ ಅಡಗಿದ್ದ ಅಮೆರಿಕನ್ ನೇಪಾಳಕ್ಕೆ ಓಡುವಾಗ ಲಾಕ್: ಅರೆಬೆತ್ತಲೆ ಸ್ಥಿತಿಯಲ್ಲಿ ಅಟ್ಟಾಡಿಸಿ ಹಿಡಿದ ಭದ್ರತಾ ಸಿಬ್ಬಂದಿ; ಮುಂದುವರಿದ ತನಿಖೆ! American Arrested

ಅಮೆರಿಕ ಪ್ರಜೆ ಜೋರ್ಡಾನ್ ಬ್ರೌನ್ ಬಂಧನ!
ಅಮೆರಿಕ ಪ್ರಜೆ ಜೋರ್ಡಾನ್ ಬ್ರೌನ್ ಬಂಧನ!
Published on

ಪ್ರಮುಖ ಮುಖ್ಯಾಂಶಗಳು

  • ವೀಸಾ, ಪಾಸ್‌ಪೋರ್ಟ್ ಇಲ್ಲದೆ ಭಾರತ-ನೇಪಾಳ ಗಡಿ ದಾಟಲು ಯತ್ನ
  • ಅಮೆರಿಕ ಪ್ರಜೆ ಜೋರ್ಡಾನ್ ಬ್ರೌನ್ ಬಂಧನ!
  • SB ಸಿಬ್ಬಂದಿಯಿಂದ ಅರೆಬೆತ್ತಲೆ ಸ್ಥಿತಿಯಲ್ಲಿ ಬಂಧನ
ಉತ್ತರ ಪ್ರದೇಶ: ಭಾರತ ಮತ್ತು ನೇಪಾಳದ ಗಡಿಯಲ್ಲಿ ವೀಸಾ, ಪಾಸ್‌ಪೋರ್ಟ್ ಸೇರಿದಂತೆ ಯಾವುದೇ ದಾಖಲೆಗಳಿಲ್ಲದೆ ನೇಪಾಳಕ್ಕೆ ನುಸಳಲು ಯತ್ನಿಸುತ್ತಿದ್ದ ಅಮೆರಿಕದ ಪ್ರಜೆಯೊಬ್ಬನನ್ನು (American Arrested) ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. 
ಬಂಧಿತ ವ್ಯಕ್ತಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಜೋರ್ಡಾನ್ ಬ್ರೌನ್ (36) ಎಂದು ಗುರುತಿಸಲಾಗಿದೆ. ಈತನ ಬಂಧನದ ದೃಶ್ಯಗಳು ಮತ್ತು ಆತ ಭಾರತಕ್ಕೆ ಬಂದ ಕಥೆ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಅರೆಬೆತ್ತಲೆ ಸ್ಥಿತಿಯಲ್ಲಿ ಓಡಲು ಹೋಗಿ ಸಿಕ್ಕಿಬಿದ್ದ!

ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಸೋನೌಲಿ ಗಡಿಯ ಪಿಲ್ಲರ್ ಸಂಖ್ಯೆ 516 ರ ಬಳಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. 
ಭದ್ರತಾ ಸಿಬ್ಬಂದಿ ಎಂದಿನಂತೆ ಗಸ್ತಿನಲ್ಲಿದ್ದಾಗ, ಈ ವಿದೇಶಿ ಪ್ರಜೆ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಅಧಿಕಾರಿಗಳು ಆತನನ್ನು ನಿಲ್ಲಿಸಿ ವಿಚಾರಿಸಲು ಮುಂದಾದ ತಕ್ಷಣ, ಆತ ಅಲ್ಲಿಂದ ಓಡಲು ಯತ್ನಿಸಿದ್ದಾನೆ. ಆದರೆ ಭದ್ರತಾ ಸಿಬ್ಬಂದಿ ಬೆನ್ನಟ್ಟಿ ಆತನನ್ನು ಹಿಡಿದಿದ್ದಾರೆ. ಭದ್ರತಾ ಸಿಬ್ಬಂದಿ ಆತನನ್ನು ಅರೆಬೆತ್ತಲೆ ಸ್ಥಿತಿಯಲ್ಲೇ ವಶಕ್ಕೆ ಪಡೆದು ಪೊಲೀಸ್​ ಠಾಣೆಗೆ ಕರೆದೊಯ್ಯುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. 

ತಪಾಸಣೆ ವೇಳೆ ಸಿಕ್ಕಿದ್ದೇನು?

ಬಂಧಿತ ಜೋರ್ಡಾನ್ ಬ್ರೌನ್ ನಿಂದ ಸುಮಾರು 31,460 ರೂಪಾಯಿ ನಗದು ಮತ್ತು ಎರಡು ಮೊಬೈಲ್ ಫೋನ್‌ಗಳು ಸಿಕ್ಕಿವೆ. ಆದರೆ ಆತ ಯಾರು? ಎಲ್ಲಿಂದ ಬಂದ? ಎಂಬುದಕ್ಕೆ ಯಾವುದೇ ಅಧಿಕೃತ ದಾಖಲೆಗಳು ಅಥವಾ ವೀಸಾ-ಪಾಸ್‌ಪೋರ್ಟ್‌ಗಳು ಸಿಕ್ಕಿಲ್ಲ. 

ಈತನ ಫ್ಲ್ಯಾಶ್‌ಬ್ಯಾಕ್ ಕತೆ ಏನು?

ಪೊಲೀಸರ ತನಿಖೆ ವೇಳೆ ಈತ ಬಾಯಿಬಿಟ್ಟಿರುವ ಸತ್ಯಗಳು ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ. ಬ್ರೌನ್ ಮೊದಲು ಪ್ರವಾಸಿ ವೀಸಾದಲ್ಲಿ ಥೈಲ್ಯಾಂಡ್‌ಗೆ ಹೋಗಿದ್ದನಂತೆ. ಅಲ್ಲಿ ಆತನ ಪಾಸ್‌ಪೋರ್ಟ್ ಕಳೆದುಹೋಗಿದೆ. ಅಲ್ಲಿಂದ ಕಳ್ಳಮಾರ್ಗದ ಮೂಲಕ ಶ್ರೀಲಂಕಾ ತಲುಪಿದ್ದಾನೆ. ನಂತರ ಶ್ರೀಲಂಕಾದಿಂದಲೂ ಸಮುದ್ರ ಮಾರ್ಗದ ಮೂಲಕವೇ 2025ರ ನವೆಂಬರ್‌ನಲ್ಲಿ ಭಾರತಕ್ಕೆ ಅಕ್ರಮವಾಗಿ ನುಗ್ಗಿದ್ದಾನೆ.
ಅಂದಿನಿಂದ ಈತ ಗೋವಾದಲ್ಲಿ ಅಡಗಿಕೊಂಡು ವಾಸಿಸುತ್ತಿದ್ದ. ಇತ್ತೀಚೆಗೆ ಬೆಂಗಳೂರಿಗೆ ಬಂದು, ಅಲ್ಲಿಂದ ನೇಪಾಳಕ್ಕೆ ತಪ್ಪಿಸಿಕೊಳ್ಳಲು ಸೋನೌಲಿ ಗಡಿಗೆ ಬಂದಾಗ ಲಾಕ್ ಆಗಿದ್ದಾನೆ. ಪ್ರಸ್ತುತ ಈತನ ವಿರುದ್ಧ ವಿದೇಶಿಗರ ಕಾಯ್ದೆ ಮತ್ತು ವಲಸೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಕೇಂದ್ರ ತನಿಖಾ ಸಂಸ್ಥೆಗಳು ಅಲರ್ಟ್ ಆಗಿವೆ.

ಗಡಿಯಲ್ಲಿ ಹೆಚ್ಚಿದ ಆತಂಕ!

ಭಾರತ ಮತ್ತು ನೇಪಾಳದ ನಾಗರಿಕರಿಗೆ ಪರಸ್ಪರ ದೇಶಗಳಿಗೆ ಹೋಗಲು ಮುಕ್ತ ಅವಕಾಶವಿದ್ದು, ಯಾವುದೇ ವೀಸಾದ ಅತಗ್ಯ ಇಲ್ಲ. ಆದರೆ ಬೇರೆ ದೇಶದ ನಾಗರಿಕರಿಗೆ ಇದು ಅನ್ವಯಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಗಡಿಗಳಲ್ಲಿ ಅಕ್ರಮ ನುಸುಳುವಿಕೆ ಹೆಚ್ಚುತ್ತಿರುವುದು ಭದ್ರತಾ ಸಂಸ್ಥೆಗಳಿಗೆ ತಲೆನೋವಾಗಿದೆ.
ಕೆಲವೇ ವಾರಗಳ ಹಿಂದೆ, ಮ್ಯಾನ್ಮಾರ್ ಗಡಿಯ ಮೂಲಕ ಭಾರತ ವಿರೋಧಿ ಸಶಸ್ತ್ರ ಗುಂಪುಗಳಿಗೆ ಡ್ರೋನ್ ಯುದ್ಧ ತರಬೇತಿ ನೀಡುತ್ತಿದ್ದ ಆರೋಪದ ಮೇಲೆ ಒಬ್ಬ ಅಮೆರಿಕನ್ ಮತ್ತು ಆರು ಉಕ್ರೇನಿಯನ್ ಪ್ರಜೆಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿತ್ತು. ಈ ಬೆನ್ನಲ್ಲೇ ಮತ್ತೊಬ್ಬ ಅಮೆರಿಕ ಪ್ರಜೆ ಸಿಕ್ಕಿಬಿದ್ದಿರುವುದು ಗಡಿ ಭದ್ರತೆ ಮತ್ತು ದೇಶದ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net