ಅಮರನಾಥ ಯಾತ್ರೆಗೆ ದಿನಾಂಕ ನಿಗದಿ: ನೋಂದಣಿ ಎಲ್ಲಿ? ವಯೋಮಿತಿ ಎಷ್ಟು? ಪ್ರತಿಯೊಂದು ವಿವರ ಇಲ್ಲಿದೆ... Amarnath Yatra 2026

ಅಮರನಾಥ ಯಾತ್ರೆಗೆ ದಿನಾಂಕ ನಿಗದಿ: ನೋಂದಣಿ ಎಲ್ಲಿ? ವಯೋಮಿತಿ ಎಷ್ಟು? ಪ್ರತಿಯೊಂದು ವಿವರ ಇಲ್ಲಿದೆ... Amarnath Yatra 2026
ಅಮರನಾಥ ಯಾತ್ರೆಗೆ ದಿನಾಂಕ ನಿಗದಿ: ನೋಂದಣಿ ಎಲ್ಲಿ? ವಯೋಮಿತಿ ಎಷ್ಟು? ಪ್ರತಿಯೊಂದು ವಿವರ ಇಲ್ಲಿದೆ... Amarnath Yatra 2026
Published on

ಪ್ರಮುಖ ಮುಖ್ಯಾಂಶಗಳು

  • ಅಮರನಾಥ ಯಾತ್ರೆಯು ಜುಲೈ 3 ರಿಂದ ಆರಂಭವಾಗಿ ಆಗಸ್ಟ್ 28 ರವರೆಗೆ ಒಟ್ಟು 57 ದಿನಗಳ ಕಾಲ ನಡೆಯಲಿದೆ
  • ಏಪ್ರಿಲ್ 15 ರಿಂದ ಅಧಿಕೃತ ವೆಬ್‌ಸೈಟ್ ಅಥವಾ ನಿಗದಿಪಡಿಸಿದ ಬ್ಯಾಂಕ್ ಶಾಖೆಗಳ ಮೂಲಕ ಮುಂಗಡವಾಗಿ ನೋಂದಾಯಿಸಿಕೊಳ್ಳಬಹುದು
  • ಯಾತ್ರೆಯಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಕನಿಷ್ಠ 13 ವರ್ಷ ಹಾಗೂ ಗರಿಷ್ಠ 70 ವರ್ಷ ವಯೋಮಿತಿಯನ್ನು ನಿಗದಿ
  • ಜೂನ್ 19 ರಂದು ಜೇಷ್ಠ ಪೌರ್ಣಮಿಯಂದು ಮೊದಲ ಪೂಜೆಯನ್ನು ನೆರವೇರಿಸುವ ಮೂಲಕ ಯಾತ್ರೆಯ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ
Amarnath Yatra 2026 : ದಕ್ಷಿಣ ಕಾಶ್ಮೀರದಲ್ಲಿರುವ ಪ್ರಸಿದ್ಧ ಆಧ್ಯಾತ್ಮಿಕ ದೇವಾಲಯ ಅಮರನಾಥಕ್ಕೆ ವಾರ್ಷಿಕ ಯಾತ್ರೆಯ ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ. ಈ ವರ್ಷ ಜುಲೈ 3 ರಂದು ಯಾತ್ರೆ ಪ್ರಾರಂಭವಾಗಲಿದ್ದು, ಒಟ್ಟು 57 ದಿನಗಳವರೆಗೆ ನಡೆಯಲಿದೆ. ಆಗಸ್ಟ್ 28 ರಂದು ಈ ಪವಿತ್ರ ಯಾತ್ರೆ ಮುಕ್ತಾಯಗೊಳ್ಳಲಿದೆ.

ಏಪ್ರಿಲ್​ 15ರಿಂದ ನೋಂದಣಿ ಶುರು

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಯಾತ್ರೆಯ ವಿವರಗಳನ್ನು ಇಂದು (ಏಪ್ರಿಲ್ 12) ಪ್ರಕಟಿಸಿದರು. ಯಾತ್ರೆ ಕೈಗೊಳ್ಳಲು ಬಯಸುವ ಭಕ್ತರು ಏಪ್ರಿಲ್ 15 ರಿಂದಲೇ ಆನ್​ಲೈನ್​ನಲ್ಲಿ ನೋಂದಾಯಿಸಿಕೊಳ್ಳಬೇಕು. ಅರ್ಜಿದಾರರು ದೇಶಾದ್ಯಂತ ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೆಸ್ ಬ್ಯಾಂಕ್‌ ಹಾಗೂ ಆ್ಯಕ್ಸಿಸ್​ ಬ್ಯಾಂಕ್​ನ ಸುಮಾರು 554 ಶಾಖೆಗಳಲ್ಲಿ ಮುಂಗಡ ನೋಂದಣಿ ಮಾಡಿಕೊಳ್ಳಬಹುದು.
ಇದಿಷ್ಟೇ ಅಲ್ಲದೆ, ಶ್ರೀ ಅಮರನಾಥ ಜಿ ಪುಣ್ಯಕ್ಷೇತ್ರ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮುಂಚಿತವಾಗಿ ನೋಂದಾಯಿಸಿಕೊಳ್ಳಬಹುದು ಎಂದು ಜಮ್ಮು ಮತ್ತು ಕಾಶ್ಮೀರ ಗವರ್ನರ್​ ಮನೋಜ್ ಸಿನ್ಹಾ ಹೇಳಿದ್ದಾರೆ.

ಎರಡು ಮಾರ್ಗಗಳಲ್ಲಿ ಯಾತ್ರೆ

ಯಾತ್ರೆ ಆರಂಭವಾಗುವ ಮೊದಲು, ಜೂನ್ 19 ರಂದು ಜೇಷ್ಠ ಪೌರ್ಣಮಿಯಂದು ಮೊದಲ ಪೂಜೆಯನ್ನು ನೆರವೇರಿಸಲಾಗುತ್ತದೆ. ಯಾತ್ರೆ ಎರಡು ಪ್ರಮುಖ ಮಾರ್ಗಗಳ ಮೂಲಕ ನಡೆಯಲಿದೆ. ಒಂದು ಅನಂತನಾಗ್ ಜಿಲ್ಲೆಯಲ್ಲಿರುವ 48 ಕಿ.ಮೀ ಉದ್ದದ ನುನ್ವಾನ್-ಪಹಲ್ಗಾಮ್ ಸಾಂಪ್ರದಾಯಿಕ ಮಾರ್ಗವಾದರೆ, ಇನ್ನೊಂದು ಗಂಡೇರ್ಬಾಲ್ ಜಿಲ್ಲೆಯ 14 ಕಿ.ಮೀ. ಉದ್ದದ ಬಾಲ್ಟಾಲ್ ಮಾರ್ಗವಾಗಿದೆ. ಈ ಮಾರ್ಗ ಕಡಿಮೆ ಇದ್ದರು ಕೂಡ ತುಂಬಾ ಕಡಿದಾಗಿದೆ.

ವಯೋಮಿತಿ ನಿಗದಿ

ಯಾತ್ರೆಯಲ್ಲಿ ಭಾಗವಹಿಸುವ ಭಕ್ತರ ಕನಿಷ್ಠ ವಯಸ್ಸನ್ನು 13 ವರ್ಷಗಳು ಮತ್ತು ಗರಿಷ್ಠ ವಯಸ್ಸು 70 ವರ್ಷಗಳು ಎಂದು ನಿಗದಿಪಡಿಸಲಾಗಿದೆ. 13 ವರ್ಷಕ್ಕಿಂತ ಕಡಿಮೆ ಅಥವಾ 70 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.

ಅಮರನಾಥ ಯಾತ್ರೆಯ ಹಿನ್ನೆಲೆ ಏನು?

ಅಂದಹಾಗೆ, ಅಮರನಾಥ ಯಾತ್ರೆಯು ಭಾರತದ ಅತ್ಯಂತ ಪವಿತ್ರ ಮತ್ತು ಪುರಾತನ ಯಾತ್ರೆಗಳಲ್ಲಿ ಒಂದಾಗಿದೆ. ಇದರ ಇತಿಹಾಸವು ಪುರಾಣ ಕಾಲದಷ್ಟು ಹಳೆಯದು. ದಂತಕಥೆಯ ಪ್ರಕಾರ, ಶಿವನು ಪಾರ್ವತಿ ದೇವಿಗೆ ಅಮರತ್ವದ ರಹಸ್ಯವನ್ನು (ಅಮರ ಕಥೆ) ವಿವರಿಸಲು ಈ ಏಕಾಂತ ಗುಹೆಯನ್ನು ಆರಿಸಿಕೊಂಡಿದ್ದನು. ಈ ರಹಸ್ಯವನ್ನು ಯಾರೂ ಕೇಳಬಾರದೆಂಬ ಉದ್ದೇಶದಿಂದ ಶಿವನು ತನ್ನ ವಾಹನ ನಂದಿ, ಚಂದ್ರ ಮತ್ತು ಸರ್ಪಗಳನ್ನು ದಾರಿಯುದ್ದಕ್ಕೂ ವಿವಿಧ ಸ್ಥಳಗಳಲ್ಲಿ ಬಿಟ್ಟು ಬಂದನೆಂದು ನಂಬಲಾಗಿದೆ. 15ನೇ ಶತಮಾನದಲ್ಲಿ ಬೂಟಾ ಮಲಿಕ್ ಎಂಬ ಮುಸ್ಲಿಂ ಕುರುಬನು ಈ ಗುಹೆಯನ್ನು ಪುನಃ ಪತ್ತೆಹಚ್ಚಿದನು ಎಂಬ ಜನಪದ ಕಥೆಯೂ ಪ್ರಚಲಿತದಲ್ಲಿದೆ.

ಬಾಬಾ ಬರ್ಫಾನಿಯ ದರ್ಶನ

ಹಿಮಾಲಯದ ಸುಮಾರು 3,888 ಮೀಟರ್ ಎತ್ತರದಲ್ಲಿರುವ ಈ ಗುಹೆಯಲ್ಲಿ ಪ್ರಕೃತಿ ಸಹಜವಾಗಿ ಮಂಜಿನಿಂದ ನಿರ್ಮಾಣವಾಗುವ ಶಿವಲಿಂಗವು ಈ ಯಾತ್ರೆಯ ಪ್ರಮುಖ ಆಕರ್ಷಣೆ. ಚಂದ್ರನ ಕಲೆಗಳಿಗೆ ಅನುಗುಣವಾಗಿ ಈ ಲಿಂಗದ ಗಾತ್ರವು ಏರಿಳಿತವಾಗುವುದು ಇಲ್ಲಿನ ವಿಶೇಷ. ಪ್ರತಿ ವರ್ಷ ಜುಲೈ ಮತ್ತು ಆಗಸ್ಟ್ ತಿಂಗಳ ಶ್ರಾವಣ ಮಾಸದಲ್ಲಿ ಸಾವಿರಾರು ಭಕ್ತರು ಅತ್ಯಂತ ಕಠಿಣವಾದ ಹಿಮಪದರ ಹಾಗೂ ಪರ್ವತದ ಹಾದಿಗಳನ್ನು ಕ್ರಮಿಸಿ 'ಬಾಬಾ ಬರ್ಫಾನಿ'ಯ ದರ್ಶನ ಪಡೆಯುತ್ತಾರೆ. ಈ ಯಾತ್ರೆಯು ಕೇವಲ ಧಾರ್ಮಿಕ ನಂಬಿಕೆಯಷ್ಟೇ ಅಲ್ಲದೆ, ಪ್ರಕೃತಿಯ ವಿಸ್ಮಯ ಮತ್ತು ಭಾರತೀಯರ ಅಚಲ ಶ್ರದ್ಧೆಯ ಪ್ರತೀಕವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net