ಹಿಂದೂಗಳು ಟೀ ಕುಡಿಯಬೇಡಿ ಎಂದು ಕರೆಕೊಟ್ಟ ಸಾಧ್ವಿ ಶ್ರದ್ಧಾ ಗೋಪಾಲ್! ಅಚ್ಚರಿಯ ಕಾರಣ ಇಲ್ಲಿದೆ ನೋಡಿ... Sadhvi Shraddha Gopal :

ಹಿಂದೂಗಳು ಟೀ ಕುಡಿಯಬೇಡಿ ಎಂದು ಕರೆಕೊಟ್ಟ ಸಾಧ್ವಿ ಶ್ರದ್ಧಾ ಗೋಪಾಲ್! ಅಚ್ಚರಿಯ ಕಾರಣ ಇಲ್ಲಿದೆ ನೋಡಿ... Sadhvi Shraddha Gopal
ಹಿಂದೂಗಳು ಟೀ ಕುಡಿಯಬೇಡಿ ಎಂದು ಕರೆಕೊಟ್ಟ ಸಾಧ್ವಿ ಶ್ರದ್ಧಾ ಗೋಪಾಲ್! ಅಚ್ಚರಿಯ ಕಾರಣ ಇಲ್ಲಿದೆ ನೋಡಿ... Sadhvi Shraddha Gopal
Published on

ಪ್ರಮುಖ ಮುಖ್ಯಾಂಶಗಳು

  • ಚಹಾ ಸೇವಿಸುವವರು ಮತ್ತು ಗೋಹತ್ಯೆ ಮಾಡುವವರು ಸಮಾನರು ಎಂದ ಸಾಧ್ವಿ ಶ್ರದ್ಧಾ ಗೋಪಾಲ್​
  • ಚಹಾ ಭಾರತೀಯ ಮೂಲದ್ದಲ್ಲ, ಬ್ರಿಟಿಷರು ತಂದ ಈ ಹವ್ಯಾಸದಿಂದ ಸಂಸ್ಕೃತಿ ಹಾಳಾಗುತ್ತಿದೆ ಎಂದು ಅಭಿಪ್ರಾಯ
  • ತಲೆನೋವಿನ ನೆಪ ಬಿಟ್ಟು, ಪೂರ್ವಜರಂತೆ ಆರೋಗ್ಯ ಕಾಪಾಡಿಕೊಳ್ಳಲು ಚಹಾ ತ್ಯಜಿಸುವಂತೆ ಕರೆ ನೀಡಿದ್ದಾರೆ
  • ಚಹಾವನ್ನು ಮಹಾಪಾಪಕ್ಕೆ ಹೋಲಿಸಿರುವ ಸಾಧ್ವಿಯವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ
Sadhvi Shraddha Gopal : ದೀದಿ ಎಂದೇ ಜನಪ್ರಿಯರಾಗಿರುವ ಸಾಧ್ವಿ ಶ್ರದ್ಧಾ ಗೋಪಾಲ್, ಹಿಂದೂಗಳು ಚಹಾ ಕುಡಿಯಬೇಡಿ ಎಂದು ಮನವಿ ಮಾಡಿದ್ದಾರೆ. ಚಹಾ ಕುಡಿಯುವವರು ಮತ್ತು ಗೋವುಗಳನ್ನು ಕೊಲ್ಲುವವರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಸಾಧ್ವಿ ಹೇಳಿದ್ದಾರೆ.
ವ್ಯಾಸ ಪೀಠದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡುವಾಗ ಸಾಧ್ವಿ ಶ್ರದ್ಧಾ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಬಯಸುವ ಹಿಂದೂಗಳು ಚಹಾ ಕುಡಿಯಬೇಡಿ ಎಂದು ಸಾಧ್ವಿ ಒತ್ತಾಯಿಸಿದ್ದಾರೆ. ಸ್ವಾಧಿ ಅವರ ಭಾಷಣದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ನಾಂದಿ ಆಡಿದೆ.

ವಿಡಿಯೋದಲ್ಲಿ ಏನಿದೆ?

ಚಹಾ ಕುಡಿಯುವವರು ಗೋಹತ್ಯೆ ಮಾಡುವವರಿಗೆ ಸಮಾನರು ಮತ್ತು ಅವರಿಗೂ ಕಸಾಯಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಸಾಧ್ವಿ ಅವರು ಹೇಳಿದ್ದಾರೆ. ತಮಗೆ ಈ ಮಾತನ್ನು ಹೇಳಲು ಯಾವುದೇ ಭಯ ಅಥವಾ ಸಂಕೋಚವಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಚಹಾ ಕುಡಿಯುವುದನ್ನು ಬಿಡದಿದ್ದರೆ ಅದು ಪಾಪಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅನೇಕ ಜನರು ಚಹಾ ಬಿಟ್ಟರೆ ತಲೆನೋವು ಬರುತ್ತದೆ ಎಂದು ನೆಪ ಹೇಳುತ್ತಾರೆ. ಆದರೆ, ನಮ್ಮ ಪೂರ್ವಜರು ಚಹಾ ಕುಡಿಯದಿದ್ದರೂ ಆರೋಗ್ಯವಾಗಿ ದೀರ್ಘಕಾಲ ಬದುಕಿದ್ದರು ಮತ್ತು ಚಹಾ ಕುಡಿಯದ ಎಷ್ಟೋ ಜನರು ಇಂದಿಗೂ ಹೆಚ್ಚು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಉದಾಹರಿಸಿದ್ದಾರೆ. ಕೇವಲ ಎರಡು ದಿನದ ತಲೆನೋವಿಗಾಗಿ ಗೋಹತ್ಯೆಯಂತಹ ಮಹಾಪಾಪಕ್ಕೆ ಭಾಗಿಯಾಗಬಾರದು, ಆದ್ದರಿಂದ ಪ್ರತಿಯೊಬ್ಬರೂ ತಕ್ಷಣವೇ ಚಹಾ ಕುಡಿಯುವ ಅಭ್ಯಾಸವನ್ನು ತ್ಯಜಿಸಬೇಕು ಎಂದು ಸಾಧ್ವಿ ಅವರು ಮನವಿ ಮಾಡಿದ್ದಾರೆ.
ಟೀ ಕುಡಿಯಬೇಡಿ ಎಂದು ಹೇಳಲು ಕಾರಣವೇನು?
ಸಾಧ್ವಿ ಶ್ರದ್ಧಾ ಗೋಪಾಲ್ ಅವರು ಹಿಂದೂಗಳು ಚಹಾ ಕುಡಿಯಬಾರದು ಎಂದು ಹೇಳಲು ಮುಖ್ಯ ಕಾರಣ ಆಧ್ಯಾತ್ಮಿಕ ಮತ್ತು ಶಾರೀರಿಕ ಶುದ್ಧತೆ. ಅವರ ಪ್ರಕಾರ, ಚಹಾದಲ್ಲಿ 'ಕೆಫೀನ್' ಮತ್ತು 'ಟ್ಯಾನಿನ್' ನಂತಹ ಅಂಶಗಳಿದ್ದು, ಇವು ಮನುಷ್ಯನ ಮನಸ್ಸನ್ನು ಚಂಚಲಗೊಳಿಸುತ್ತವೆ ಮತ್ತು ರಜೋಗುಣ ಹಾಗೂ ತಮೋಗುಣಗಳನ್ನು ಹೆಚ್ಚಿಸುತ್ತವೆ. ಸಾತ್ವಿಕ ಜೀವನ ನಡೆಸುವವರಿಗೆ ಮತ್ತು ಭಗವಂತನ ಧ್ಯಾನ ಮಾಡುವವರಿಗೆ ಇಂತಹ ಪೇಯಗಳು ಅಡ್ಡಿಯಾಗುತ್ತವೆ ಎಂಬುದು ಅವರ ವಾದ. ಜೊತೆಗೆ, ಚಹಾ ಭಾರತೀಯ ಮೂಲದ ಪಾನೀಯವಲ್ಲ, ಇದು ಬ್ರಿಟಿಷರ ಕಾಲದಲ್ಲಿ ಬಂದ ಹವ್ಯಾಸವಾಗಿದ್ದು, ಆರೋಗ್ಯದ ದೃಷ್ಟಿಯಿಂದ ಇದು ಜೀರ್ಣಕ್ರಿಯೆಗೆ ಪೂರಕವಲ್ಲ ಮತ್ತು ದೇಹದ ನೈಸರ್ಗಿಕ ಶಕ್ತಿಯನ್ನು ಕುಂದಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ, ರಾಜಸ್ಥಾನ ಮೂಲದ ಸಾಧ್ವಿ ಶ್ರದ್ಧಾ ಅವರು ಗೋಸಂರಕ್ಷಣಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅವರ ಉಪನ್ಯಾಸಗಳನ್ನು ಕೇಳಲು ಅನೇಕ ಜನರು ಬರುತ್ತಾರೆ. ಆದರೆ, ಇಂದು ಟೀ ಕುಡಿಯಬೇಡಿ ಎಂದು ಹೇಳುವ ಮೂಲಕ ಹೊಸ ವಿವಾದಕ್ಕೆ ನಾಂದಿಯಾಡಿದ್ದಾರೆ. ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದೆ. ಟೀ ಬದಲು ಗೋಮೂತ್ರ ಕುಡಿಯಬೇಕೇ? ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಚಹಾದೊಂದಿಗಿನ ಪ್ರಧಾನಿ ಮೋದಿ ಸಂಬಂಧವನ್ನು ಸಾದ್ವಿಗೆ ನೆನಪಿಸುತ್ತಿದ್ದಾರೆ.
ಹಿಂದೂಗಳು ಟೀ ಕುಡಿಯಬೇಡಿ ಎಂಬ ಸಾಧ್ವಿ ಶ್ರದ್ಧಾ ಗೋಪಾಲ್​ ಅವರ ಹೇಳಿಕೆಗೆ ನಿಮ್ಮ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net