

ಚೆನ್ನೈ: ಭವಿಷ್ಯದಲ್ಲಿ ನಡೆಯಬಹುದಾದ ಅವಿಶ್ವಾಸಮತ ಪರೀಕ್ಷೆಯ ವೇಳೆ ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ಟಿವಿಕೆ ಶಾಸಕರೊಬ್ಬರಿಗೆ ಕೋಟಿಗಟ್ಟಲೇ ಹಣದ ಆಮಿಷವೊಡ್ಡಿದ ಆರೋಪದ ಮೇಲೆ ಎಐಎಡಿಎಂಕೆ ಪ್ರಚಾರ ಕಾರ್ಯದರ್ಶಿ ಪಿ.ಎಂ. ಮನ್ನನ್ ಅವರನ್ನು ಮಧುರೈ ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿಧಾನಸಭೆಯಲ್ಲಿ ಬಹುಮತ ಸಾಬೀತು ಪರೀಕ್ಷೆ ನಡೆದಾಗ ಸರ್ಕಾರದ ವಿರುದ್ಧ ಮತ ಚಲಾಯಿಸಲು, ಎಐಎಡಿಎಂಕೆ ಪದಾಧಿಕಾರಿಯೊಬ್ಬರು ತಮಗೆ 15 ಕೋಟಿ ರೂಪಾಯಿಗಳ ಆಮಿಷವೊಡ್ಡಿದ್ದಾರೆ ಎಂದು ಟಿವಿಕೆಯ ಮಧುರೈ ಸೆಂಟ್ರಲ್ ಶಾಸಕ ಮಧಾರ್ ಬದ್ರುದ್ದೀನ್ ಬುಧವಾರ ಆರೋಪಿಸಿದ್ದರು.
ಇನ್ನೂ ತಮಗೆ ಲಂಚ ಆಮಿಷವೊಡ್ಡಲಾಗಿದೆ ಎಂದು ಆರೋಪಿಸಿರುವ ಶಾಸಕ ಬದ್ರುದ್ದೀನ್ ಅವರು, ಯಾರು ತಮ್ಮನ್ನು ಸಂಪರ್ಕಿಸಿದ್ದರು ಎಂಬುದನ್ನು ಬಹಿರಂಗಪಡಿಸಿಲ್ಲ. ಈ ವಿಷಯದ ಬಗ್ಗೆ ತಾವು ಟಿವಿಕೆ ಹೈಕಮಾಂಡ್‌ಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದರು. ಮತ್ತು ಈ ಹಿಂದೆ ಡಿಎಂಕೆ ಇಂತಹ ಪ್ರಯತ್ನ ನಡೆಸಿತ್ತು, ಈಗ ಎಐಎಡಿಎಂಕೆ ಕೂಡ ಅದರಲ್ಲಿ ಕೈಜೋಡಿಸಿದೆ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ ಸೇರಿದಂತೆ ಮೂರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ವಿಶೇಷ ತನಿಖಾ ಘಟಕವು, ಮನ್ನನ್ ಅವರಿಗೆ ಶುಕ್ರವಾರ ಬೆಳಿಗ್ಗೆ ಸುಮಾರು 6ಗಂಟೆಗೆ ಪೊಲೀಸರ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ಅವರು ಹಾಜರಾದ ನಂತರ, ಸಿಸಿಬಿ ಕಚೇರಿಯಲ್ಲಿ ಅವರನ್ನು ಐದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿದೆ.
ಮಧುರೈ ಕಾರ್ಪೊರೇಶನ್‌ನ ಮಾಜಿ ಉಪ ಮೇಯರ್ ಆಗಿರುವ ಮನ್ನನ್, ಹಿಂದೆ ಡಿಎಂಕೆಯೊಂದಿಗೆ ಗುರುತಿಸಿಕೊಂಡಿದ್ದರು. ಮತ್ತು ಎಂ.ಕೆ. ಅಳಗಿರಿ ಅವರ ನಿಷ್ಠಾವಂತರಾಗಿದ್ದರು. ಬಳಿಕ ಎಐಎಡಿಎಂಕೆ ಸೇರಿ ಪಕ್ಷದ ಪ್ರಚಾರ ಸಮಿತಿ ಕಾರ್ಯದರ್ಶಿಯಾಗಿದ್ದಾರೆ (ಏಜೆನ್ಸೀಸ್).