ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಇದೆಂತಾ ಗಿಫ್ಟ್!...ಆಲಿಯಾ-ರಣಬೀರ್ ಹೃದಯವೈಶಾಲ್ಯತೆಗೆ ತಲೆಬಾಗಿದ ನೆಟ್ಟಿಗರು! | Alia Bhatt-Ranbir Kapoor

 Alia Bhatt-Ranbir Kapoor
Alia Bhatt-Ranbir Kapoor
Published on
ಮುಂಬೈ: ನಟಿ ಅಲಿಯಾ ಭಟ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಗುರುವಾರ ಅವರಿಗೆ ಶುಭಾಶಯ ಕೋರಿದ್ದಾರೆ. ತಮ್ಮ ಪತಿ, ನಟ ರಣಬೀರ್ ಕಪೂರ್ (Alia Bhatt-Ranbir Kapoor) ಅವರೊಂದಿಗೆ ಸೇರಿ ಸೇವಾ ಸಂಕಲ್ಪ ಅಭಿಯಾನದ ಅಡಿಯಲ್ಲಿ 20 ಶಾಲೆಗಳನ್ನು ನವೀಕರಿಸುವುದಾಗಿ ಘೋಷಿಸಿದ್ದಾರೆ. ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ವಜನಿಕ ಸೇವೆಯ ಸ್ಮರಣಾರ್ಥ ಬಿಜೆಪಿ ಅಕ್ಟೋಬರ್‌ನಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಚಲನಚಿತ್ರ ಗಣ್ಯರು ಪ್ರಧಾನ ಮಂತ್ರಿಯವರಿಗೆ ಜನ್ಮದಿನದ ಸಂದೇಶಗಳ ನಡುವೆ ಈ ಪೋಸ್ಟ್ ಭಾರೀ ವೈರಲ್ ಆಗಿದೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡ ಅಲಿಯಾ, ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರಿಗೆ ಜನ್ಮದಿನದ ಶುಭಾಶಯಗಳು. ಮುಂಬರುವ ವರ್ಷದಲ್ಲಿ ನಿಮಗೆ ಉತ್ತಮ ಆರೋಗ್ಯ ಮತ್ತು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಸೇವಾ ಸಂಕಲ್ಪದ ಆಶಯವು ಸಾಮೂಹಿಕ ಕಾರ್ಯ ಮತ್ತು ಸಮಾಜಕ್ಕೆ ಮರಳಿಕೊಡುವ ಅದ್ಭುತ ಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ. ಈ ದಿನವನ್ನು ಸ್ಮರಿಸಲು ಮತ್ತು ಈ ಉದ್ದೇಶವನ್ನು ಬೆಂಬಲಿಸಲು, ಬೃಹನ್ಮುಂಬೈ ಶಿಫಾರಸುಗಳಂತೆ 20 ಶಾಲೆಗಳನ್ನು ನವೀಕರಿಸಲು ರಣಬೀರ್ ಮತ್ತು ನಾನು ಶಪಥ ಮಾಡುತ್ತಿದ್ದೇವೆ. ಇದು ನಮ್ಮ ಮಕ್ಕಳು ಕಲಿಯಲು ಮತ್ತು ಬೆಳೆಯಲು ಹೆಚ್ಚು ಪ್ರಕಾಶಮಾನವಾದ, ಉತ್ತಮ ಸೌಲಭ್ಯವುಳ್ಳ ಸ್ಥಳಗಳನ್ನು ನಿರ್ಮಿಸಲು ನೆರವಾಗಲಿದೆ ಎಂದು ಬರೆದುಕೊಂಡಿದ್ದಾರೆ.
ನಟ ಸಲ್ಮಾನ್ ಖಾನ್ ಕೂಡ ಪ್ರಧಾನಿಯವರಿಗೆ ಶುಭ ಹಾರೈಸಿದ್ದು, ಗೌರವಾನ್ವಿತ ಪ್ರಧಾನಿ ಸಾಹೇಬರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಜೈ ಹಿಂದ್, ಎಂದು ಬರೆದಿದ್ದಾರೆ. ಶಾರುಖ್ ಖಾನ್ ಸಹ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಮುಂಬರುವ ವರ್ಷಗಳಲ್ಲಿ ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ತೃಪ್ತಿ ಸಿಗಲಿ. ದೇಶಕ್ಕೆ ಸ್ಫೂರ್ತಿ ನೀಡಲು ನೀವು ಯಾವಾಗಲೂ ಶಕ್ತಿ ಮತ್ತು ಧನಾತ್ಮಕತೆಯನ್ನು ಹೊಂದಿರಲಿ ಎಂದು ಶುಭ ಹಾರೈಸಿದ್ದಾರೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು, ಪ್ರಧಾನಿಯವರು ಅಕ್ಟೋಬರ್ 7 ಕ್ಕೆ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಪೂರ್ಣಗೊಳಿಸಲಿದ್ದು, ಈ ಸಂದರ್ಭವನ್ನು ಗುರುತಿಸಲು ಪಕ್ಷವು ಒಂದು ತಿಂಗಳ ಕಾಲ ವಿಶೇಷ ಸೇವಾ ಸಂಕಲ್ಪ ಅಭಿಯಾನವನ್ನು ಆಯೋಜಿಸಲಿದೆ ಎಂದು ತಿಳಿಸಿದ್ದರು.

ಪ್ರಧಾನಿ ಮೋದಿ 76ನೇ ಜನ್ಮದಿನ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ದೇಶಾದ್ಯಂತ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17 ರವರೆಗೆ ಸೇವಾ ಸಂಕಲ್ಪ ಅಭಿಯಾನವನ್ನು ಆಯೋಜಿಸುತ್ತಿದ್ದು, ಸರಣಿ ಸೇವಾ ಆಧಾರಿತ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಂಪರ್ಕ ಉಪಕ್ರಮಗಳನ್ನು ಹಮ್ಮಿಕೊಂಡಿದೆ. ಸಾರ್ವಜನಿಕ ಸೇವೆಯಲ್ಲಿ ಪ್ರಧಾನಿ ಮೋದಿ ಕಾರ್ಯವನ್ನು ಗುರುತಿಸುವ ಅಂಗವಾಗಿ ಮನೆಗಳಲ್ಲಿ ದೀಪಗಳನ್ನು ಬೆಳಗಿಸಲಾಗುವುದು ಎಂದು ಬಿಜೆಪಿ ಘೋಷಿಸಿದೆ.
ಬಿಜೆಪಿಯ ಈ ಅಭಿಯಾನವು ಒಂದು ತಿಂಗಳ ಕಾಲ ಮುಂದುವರಿಯಲು ಯೋಜಿಸಲಾಗಿದ್ದು, ಸೇವಾ ಆಧಾರಿತ ಚಟುವಟಿಕೆಗಳು ಮತ್ತು ಸಾರ್ವಜನಿಕ ಸಂಪರ್ಕವನ್ನು ಒಳಗೊಂಡಿದೆ. ರಕ್ತದಾನ ಶಿಬಿರಗಳು, ಪ್ರದರ್ಶನಗಳು, ವಿಚಾರ ಸಂಕಿರಣಗಳು, ಸ್ವಚ್ಛತಾ ಅಭಿಯಾನಗಳು, ಯುವಜನ ಕಾರ್ಯಕ್ರಮಗಳು ಮತ್ತು ಇತರ ಉಪಕ್ರಮಗಳನ್ನು ಯೋಜಿತ ಚಟುವಟಿಕೆಗಳಲ್ಲಿ ಸೇರಿಸಲಾಗಿದೆ.
1950ರ ಸೆಪ್ಟೆಂಬರ್ 17 ರಂದು ಗುಜರಾತ್‌ನ ವಡ್‌ನಗರದಲ್ಲಿ ಜನಿಸಿದ ಪ್ರಧಾನಿ ಮೋದಿ ಅವರು ಗುರುವಾರ 76ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು ಅಕ್ಟೋಬರ್ 7 ರಂದು ಸಾರ್ವಜನಿಕ ಅಧಿಕಾರದಲ್ಲಿ ಸತತ 25 ವರ್ಷಗಳನ್ನು ಪೂರೈಸಲಿದ್ದಾರೆ. 2001 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಪ್ರಾರಂಭವಾದ ಅವರ ರಾಜಕೀಯ ಪಯಣ, 2014 ರಲ್ಲಿ ಪ್ರಧಾನಿಯಾಗುವ ಮೂಲಕ ಮುಂದುವರಿಯಿತು. ಅವರು 2014 ರಲ್ಲಿ ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net