ಅಂದು ನಾನು ನೀಡಿದ ಆ ಸಲಹೆಯೇ ಕೊನೆಯಾಗುತ್ತೆ ಅಂದುಕೊಂಡಿರಲಿಲ್ಲ; ಪ್ರತೀಕ್ ಅಗಲಿಕೆಗೆ ಅಖಿಲೇಶ್ ಯಾದವ್ ಭಾವುಕ ನುಡಿ! | Prateek Yadav

Prateek Yadav | ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್​ರ ಮಲಸಹೋದರ ಪ್ರತೀಕ್ ಯಾದವ್
Prateek Yadav | ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್​ರ ಮಲಸಹೋದರ ಪ್ರತೀಕ್ ಯಾದವ್
Published on
ಲಖನೌ: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್​ರ ಕಿರಿಯ ಪುತ್ರ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್​ರ ಮಲಸಹೋದರ ಪ್ರತೀಕ್ ಯಾದವ್ (Prateek Yadav) ಬುಧವಾರ ನಿಧನರಾಗಿದ್ದು, ಈ ಅಕಾಲಿಕ ಮರಣವು ಇಡೀ ಯಾದವ್ ಕುಟುಂಬ ಮತ್ತು ಸಮಾಜವಾದಿ ಪಕ್ಷದ ಬೆಂಬಲಿಗರಿಗೆ ದೊಡ್ಡ ಆಘಾತ ತಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿದ ಅಖಿಲೇಶ್ ಯಾದವ್, ಸಹೋದರನ ಸಾವಿನ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತೀಕ್ ನಮ್ಮನ್ನು ಅಗಲಿರುವುದು ಅತ್ಯಂತ ನೋವಿನ ಸಂಗತಿ. ಸಣ್ಣ ವಯಸ್ಸಿನಿಂದಲೂ ನಾನು ಅವರನ್ನು ನೋಡಿದ್ದೇನೆ. ಯಾವಾಗಲೂ ತಮ್ಮ ಫಿಟ್‌ನೆಸ್ ಬಗ್ಗೆ ಹೆಚ್ಚು ಜಾಗರೂಕರಾಗಿದ್ದರು ಮತ್ತು ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ಹೊಂದಿದ್ದರು ಎಂದು ತಮ್ಮನ್ನ ಜೊತೆಗಿನ ಘಟನೆಗಳನ್ನು ಮೆಲುಕು ಹಾಕಿದರು.

ಎರಡು ತಿಂಗಳ ಹಿಂದಿನ ಕೊನೆಯ ಭೇಟಿ

ತಮ್ಮ ಕೊನೆಯ ಭೇಟಿಯ ಬಗ್ಗೆ ಮಾತನಾಡಿರುವ ಅಖಿಲೇಶ್, ಸುಮಾರು ಎರಡು ತಿಂಗಳ ಹಿಂದೆ ನಾವು ಭೇಟಿಯಾಗಿದ್ದೆವು. ಆಗ ನಾನು ಅವರಿಗೆ ಆರೋಗ್ಯದ ಬಗ್ಗೆ ಗಮನಹರಿಸಲು ಮತ್ತು ವ್ಯವಹಾರವನ್ನು ವಿಸ್ತರಿಸುವಂತೆ ಸಲಹೆ ನೀಡಿದ್ದೆ. ಕೆಲವೊಮ್ಮೆ ಉದ್ಯಮದಲ್ಲಿನ ನಷ್ಟಗಳು ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುತ್ತವೆ. ಅವರು ಈಗ ನಮ್ಮೊಂದಿಗೆ ಇಲ್ಲ ಎಂಬುದು ನಂಬಲಾಗುತ್ತಿಲ್ಲ ಎಂದರು.
ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಎರಡನೇ ಪತ್ನಿ ಸಾಧನಾ ಗುಪ್ತಾ ಪುತ್ರನಾಗಿರುವ ಪ್ರತೀಕ್, ಯಾದವ್ ಕುಟುಂಬದ ಇತರ ಸದಸ್ಯರಂತೆ ರಾಜಕೀಯಕ್ಕೆ ಪ್ರವೇಶಿಸಿರಲಿಲ್ಲ. ಬದಲಾಗಿ ಅವರು ಉದ್ಯಮ ಮತ್ತು ಬಾಡಿಬಿಲ್ಡಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫಿಟ್‌ನೆಸ್ ವೀಡಿಯೊಗಳ ಮೂಲಕವೇ ಗುರುತಿಸಿಕೊಂಡಿದ್ದರು. ಪ್ರತೀಕ್​ ಪತ್ನಿ ಅಪರ್ಣಾ ಯಾದವ್ ಬಿಜೆಪಿಯ ಪ್ರಮುಖ ನಾಯಕಿಯಾಗಿದ್ದು, ಸದ್ಯ ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net