ಟೇಕಾಫ್​ಗೂ ಮುನ್ನವೇ ಏರ್ ಇಂಡಿಯಾ ವಿಮಾನಕ್ಕೆ ಹೈಜಾಕ್ ಬೆದರಿಕೆ! ಕೋಲ್ಕತ ಏರ್​ಪೋರ್ಟ್​ನಲ್ಲಿ ಹೈಅಲರ್ಟ್​ | Hijack Alert

Hijack Alert
ಟೇಕಾಫ್​ಗೂ ಮುನ್ನವೇ ಏರ್ ಇಂಡಿಯಾ ವಿಮಾನಕ್ಕೆ ಹೈಜಾಕ್ ಬೆದರಿಕೆ! ಕೋಲ್ಕತ್ತಾ ಏರ್​ಪೋರ್ಟ್​ನಲ್ಲಿ ಹೈಅಲರ್ಟ್​ | Hijack Alert
Published on: 

ಪಶ್ಚಿಮ ಬಂಗಾಳ: ಕೋಲ್ಕತ ವಿಮಾನ ನಿಲ್ದಾಣದಿಂದ ಇನ್ನೇನು ಟೇಕಾಫ್​ಗೆ ಸಿದ್ಧವಾಗಿದ್ದ ಏರ್​ ಇಂಡಿಯಾ ವಿಮಾನಕ್ಕೆ ಇದೀಗ ಹೈಜಾಕ್ ಬೆದರಿಕೆ ಮಾಹಿತಿ ಸಿಕ್ಕಿದ್ದೇ ತಡ ಇಡೀ ಏರ್​ಪೋರ್ಟ್​ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ಕೋಲ್ಕತದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನಕ್ಕೆ ಹೈಜಾಕ್ ಬೆದರಿಕೆ ಬಂದಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ. ವಿಮಾನದ ಟಾಯ್ಲೆಟ್​ ಕನ್ನಡಿಯ ಮೇಲೆ ಬೆದರಿಕೆ ಮೆಸೇಜ್​ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭದ್ರತಾ ತಪಾಸಣೆ ಹಾಗೂ ಏರ್​ಪೋರ್ಟ್​ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಈ ಬೆದರಿಕೆ ಮೆಸೇಜ್ ಕಂಡ ಕೂಡಲೇ ವಿಮಾನದ ಪೈಲಟ್ ತಕ್ಷಣವೇ ಏರ್ ಟ್ರಾಫಿಕ್ ಕಂಟ್ರೋಲ್‌ (ಎಟಿಸಿ)ಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಮಾನವನ್ನು ಪ್ರತ್ಯೇಕ ಐಸೋಲೇಷನ್ ಸ್ಥಳಾಂತರಿಸಲಾಯಿತು. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಹಾಗೂ ವಿಮಾನ ನಿಲ್ದಾಣದ ವಿಶೇಷ ಭದ್ರತಾ ಸಿಬ್ಬಂದಿ ವಿಮಾನದಲ್ಲಿ ತೀವ್ರ ತಪಾಸಣೆ ಆರಂಭಿಸಿದ್ದಾರೆ. ಫ್ಲೈಟ್​ನ ಪ್ರತಿಯೊಂದು ಭಾಗವನ್ನೂ ಪರಿಶೀಲಿಸಲಾಗುತ್ತಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳಿವೆಯೇ ಎಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆದಿದೆ.

Also Read
ತುಟಿ ದೊಡ್ಡದಾದಷ್ಟೂ ವರದಕ್ಷಿಣೆ ಹೆಚ್ಚು! ಈ ಬುಡಕಟ್ಟಿನ ಸಂಪ್ರದಾಯದ ಹಿಂದಿರುವ ವಿಚಿತ್ರ ಕಥೆ ಕೇಳಿದ್ರೆ ನಿಮ್ಮ ಹುಬ್ಬೇರುತ್ತೆ | Lip Plate Tradition
Hijack Alert

ಇತ್ತ ಬೆದರಿಕೆ ಸಂದೇಶ ಬರೆದವರು ಯಾರು? ಇದರ ಹಿಂದೆ ಇರುವವರು ಯಾರು? ಎಂಬ ಬಗ್ಗೆ ಪೊಲೀಸರು ಹಾಗೂ ಭದ್ರತಾ ತನಿಖಾ ಸಂಸ್ಥೆಗಳು ತನಿಖೆ ಆರಂಭಿಸಿದೆ. ವಿಮಾನ ನಿಲ್ದಾಣದ ಆವರಣ ಮತ್ತು ವಿಮಾನದೊಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಬೆದರಿಕೆ ಸಂದೇಶದ ಮೂಲ ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).