ಕ್ಷಮೆ ಕೇಳಿದರೂ ಕರಗಲಿಲ್ಲ ಪ್ರಾಂಶುಪಾಲರ ಮನಸ್ಸು: ಎಐ ಫೋಟೋಗೆ ಬಲಿಯಾಯ್ತು ಬಡ ಯುವಕನ ಜೀವ! Student

Student
ಮೃತ ವಿದ್ಯಾರ್ಥಿ ಕಟ್ಟಾ ಭಾನು ಪ್ರಸಾದ್ ರೆಡ್ಡಿ
Published on: 

ಹೈದರಾಬಾದ್​: ಕಾಲೇಜು ಆಡಳಿತ ಮಂಡಳಿಯಿಂದ ಎದುರಾದ ಮಾನಸಿಕ ಕಿರುಕುಳಕ್ಕೆ ಬೇಸತ್ತ ಬಡ ವಿದ್ಯಾರ್ಥಿಯೊಬ್ಬ ( Student ) ಸಾವಿಗೆ ಶರಣಾಗಿರುವ ಕರುಣಾಜನಕ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಕಟ್ಟಾ ಭಾನು ಪ್ರಸಾದ್ ರೆಡ್ಡಿ (20) ಎಂದು ಗುರುತಿಸಲಾಗಿದೆ. ಈತ ನಲ್ಗೊಂಡ ಜಿಲ್ಲೆಯ ನಾರ್ಕಟ್‌ಪಲ್ಲಿ ಮಂಡಲದ ಚೌಟುಬಾಯಿ ಗ್ರಾಮದ ನಿವಾಸಿ. ಬಲ್ಕಂಪೇಟೆಯಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಹೋಟೆಲ್ ಮ್ಯಾನೇಜ್‌ಮೆಂಟ್ ವ್ಯಾಸಂಗ ಮಾಡುತ್ತಿದ್ದ.

Also Read
ಮತ್ತೆ ಬೋಲ್ಡ್​ ಅವತಾರದಲ್ಲಿ ಬಂದ ಆಮೀರ್ ಖಾನ್ ಸೋದರ ಸೊಸೆ: ಜೈನ್ ಮೇರಿ ಖಾನ್ ಹಾಟ್​ ಫೋಟೋಗಳು ವೈರಲ್​! Zayn Marie Khan
Student

ತನ್ನ ಕುಟುಂಬಕ್ಕೆ ಆಸರೆಯಾಗಲು ಹಾಗೂ ಸ್ವಂತ ಖರ್ಚಿಗಾಗಿ ಈತ ಎಸ್‌ಆರ್ ನಗರದ ಕೊಠಡಿಯಲ್ಲಿದ್ದುಕೊಂಡು 'ಜೆಪ್ಟೋ' ಆನ್‌ಲೈನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಒಂಬತ್ತು ದಿನಗಳ ಹಿಂದೆ ಭಾನು ಪ್ರಸಾದ್ ಎಐ (AI) ತಂತ್ರಜ್ಞಾನವನ್ನು ಬಳಸಿ ತನ್ನ ಕಾಲೇಜಿನ ಉಪನ್ಯಾಸಕ ಭಾಸ್ಕರ್ ಅವರ ಫೋಟೋವನ್ನು ಮಹಿಳೆಯೊಬ್ಬರ ಜತೆ ಎಡಿಟ್ ಮಾಡಿ ಸಹಪಾಠಿಗೆ ತೋರಿಸಿದ್ದ. ಈ ವಿಷಯ ಪ್ರಿನ್ಸಿಪಾಲ್ ಚಂದ್ರಮೋಹನ್ ಅವರಿಗೆ ಗೊತ್ತಾದ ಕೂಡಲೇ, ಅವರು ಭಾನು ಪ್ರಸಾದ್‌ನನ್ನು ತೀವ್ರವಾಗಿ ನಿಂದಿಸಿ, ಸೈಬರ್ ಕ್ರೈಮ್ ಪೋಲೀಸರಿಗೆ ದೂರು ನೀಡುವುದಾಗಿ ಬೆದರಿಸಿ ಆತನ ಮೊಬೈಲ್ ಫೋನ್ ಕಸಿದುಕೊಂಡಿದ್ದರು.

ವಿದ್ಯಾರ್ಥಿಯು ತನ್ನ ತಪ್ಪಿಗಾಗಿ ಪದೇಪದೆ ಕ್ಷಮೆ ಕೇಳಿದರೂ ಪ್ರಿನ್ಸಿಪಾಲ್ ಮತ್ತು ಲೆಕ್ಚರರ್ ಕರುಣೆ ತೋರಲಿಲ್ಲ. ಗಚೀಬೌಲಿಯಲ್ಲಿರುವ ಆತನ ಸಹೋದರ ಪ್ರವೀಣ್ ರೆಡ್ಡಿ ಅವರನ್ನು ಕಾಲೇಜಿಗೆ ಕರೆಯಿಸಿಕೊಂಡು ಮೊಬೈಲ್ ನೀಡದೆ ಕೇವಲ ಸಿಮ್ ಕಾರ್ಡ್ ಮಾತ್ರ ವಾಪಸ್ ನೀಡಿದ್ದರು. ಮೊಬೈಲ್ ಫೋನ್ ಇಲ್ಲದೆ ಇದ್ದುದರಿಂದ ಭಾನು ಪ್ರಸಾದ್‌ಗೆ ಆನ್‌ಲೈನ್ ಡೆಲಿವರಿ ಕೆಲಸಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ಆತನ ಆದಾಯ ಸಂಪೂರ್ಣವಾಗಿ ನಿಂತುಹೋಗಿ ಕೊಠಡಿಯ ಬಾಡಿಗೆ ಪಾವತಿಸಲಾಗದೆ ತೀವ್ರ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ಸಿಲುಕಿದನು. ಪ್ರತಿದಿನ ಫೋನ್ ವಾಪಸ್ ಕೇಳಲು ಕಾಲೇಜಿಗೆ ಹೋದಾಗಲೂ ಪ್ರಿನ್ಸಿಪಾಲ್ ಆತನನ್ನು ಗಂಟೆಗಟ್ಟಲೆ ಕಾಯಿಸಿ ಅಪಮಾನಿಸಿ ಕಳುಹಿಸುತ್ತಿದ್ದರು.

ಶುಕ್ರವಾರ ಬೆಳಗ್ಗೆ ಕೂಡ ಮೊಬೈಲ್ ಕೇಳಲು ಹೋದ ಭಾನು ಪ್ರಸಾದ್‌ನನ್ನು ಸಂಜೆಯವರೆಗೆ ಕಾಯಿಸಿ ಖಾಲಿ ಕೈಯಲ್ಲಿ ವಾಪಸ್ ಕಳುಹಿಸಲಾಗಿತ್ತು. ಇದರಿಂದ ತೀವ್ರ ನೊಂದ ಯುವಕ ಸಂಜೆ 7.30ರ ಸುಮಾರಿಗೆ ರೂಮ್‌ಗೆ ಬಂದು ಸ್ನೇಹಿತನ ಜತೆ ಪಾನಿಪುರಿ ತಿಂದು ವಾಪಸಾಗಿದ್ದನು. ರೂಮ್‌ನಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ರಾತ್ರಿ 9 ಗಂಟೆಗೆ ರೂಮ್‌ಮೇಟ್ ಬಂದು ಬಾಗಿಲು ತಟ್ಟಿದಾಗ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಕಿಟಕಿ ಮೂಲಕ ನೋಡಿದಾಗ ಭಾನು ಪ್ರಸಾದ್ ಶವವಾಗಿ ನೇತಾಡುತ್ತಿರುವುದು ಬೆಳಕಿಗೆ ಬಂದಿದೆ.

Also Read
ಗುಲಾಬ್​ ಜಾಮೂನ್​ಗೆ ಫೇಮಸ್​ ಈ ಹಳ್ಳಿ! ಅಷ್ಟಕ್ಕೂ ಅಂಥ ವಿಶೇಷತೆ ಏನಿದೆ ಇದೊಂದು ಸ್ವೀಟ್​ನಲ್ಲಿ? | Gulab Jamun
Student

ವಿದ್ಯಾರ್ಥಿಯ ಸಾವು ತಿಳಿಯುತ್ತಿದ್ದಂತೆ ಎನ್ಎಸ್ ಯುಐ (NSUI) ನಾಯಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಶನಿವಾರ ಕಾಲೇಜಿನ ಮುಂದೆ ಭಾರಿ ಪ್ರತಿಭಟನೆ ನಡೆಸಿದರು. ಆಕ್ರೋಶಗೊಂಡ ಪ್ರತಿಭಟನಾಕಾರರು ಕಾಲೇಜಿನ ಆವರಣಕ್ಕೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೋಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು ಬಂದೋಬಸ್ತ್ ಏರ್ಪಡಿಸಿದರು.

ಮೃತ ಯುವಕನ ಸಹೋದರ ಪ್ರವೀಣ್ ರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಎಸ್‌ಆರ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಿನ್ಸಿಪಾಲ್ ಚಂದ್ರಮೋಹನ್ ಮತ್ತು ಉಪನ್ಯಾಸಕ ಭಾಸ್ಕರ್ ಅವರನ್ನು ಬಂಧಿಸಿದ್ದಾರೆ, (ಏಜೆನ್ಸೀಸ್​).