ಅಪ್ಪುಗೆ ಸಮರದ ಬೆನ್ನಲ್ಲೇ ನೆಹರೂ ಹಳೆಯ ಫೋಟೋ ಪೋಸ್ಟ್ ಮಾಡಿದ ಸಂಸದ ದುಬೆ: ಅಸಲಿ ಸತ್ಯ ಬಿಚ್ಚಿಟ್ಟ ಕಾಂಗ್ರೆಸ್! | Nishikant Dubey

Nishikant Dubey |ಅಪ್ಪುಗೆ ಸಮರದ ಬೆನ್ನಲ್ಲೇ ನೆಹರೂ ಹಳೆಯ ಫೋಟೋ ಪೋಸ್ಟ್ ಮಾಡಿದ ಸಂಸದ ದುಬೆ
Nishikant Dubey |ಅಪ್ಪುಗೆ ಸಮರದ ಬೆನ್ನಲ್ಲೇ ನೆಹರೂ ಹಳೆಯ ಫೋಟೋ ಪೋಸ್ಟ್ ಮಾಡಿದ ಸಂಸದ ದುಬೆ
Published on

ನವದೆಹಲಿ: ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್​ರನ್ನು ರಾಹುಲ್ ಗಾಂಧಿ ಅಪ್ಪಿಕೊಂಡಿರುವ ಹಾಗೂ ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನು ವ್ಯಂಗ್ಯ ಮಾಡಿರುವ ಘಟನೆ ತೀವ್ರ ರಾಜಕೀಯ ಕಾವು ಪಡೆದುಕೊಂಡಿದೆ. ಇದರ ಬೆನ್ನಲ್ಲೇ, ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ಹಳೆಯ ಭಾವಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಬಿಜೆಪಿ ಸಂಸದ ನಿಶಿಕಾಂತ್ ದುಬೆ (

Nishikant Dubey)

ಈ ಅಪ್ಪುಗೆ ಸಮರಕ್ಕೆ ನೆಹರೂ ಅವರ ಹೆಸರನ್ನೂ ಎಳೆದು ತಂದಿದ್ದಾರೆ.

ನಿಶಿಕಾಂತ್ ದುಬೆ ತಮ್ಮ ಎಕ್ಸ್ ಖಾತೆಯಲ್ಲಿ ನೆಹರೂ ಅವರ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ನನ್ನ ಗ್ರಂಥಾಲಯದಲ್ಲಿರುವ ನೆಹರೂ-ಗಾಂಧಿ ಕುಟುಂಬದ ಪುಸ್ತಕದಿಂದ ಸಂಗ್ರಹಿಸಿದ ಕೆಲವು ಫೋಟೋಗಳು ಎಂದು ಬರೆದುಕೊಂಡಿದ್ದಾರೆ. ದುಬೆ ಅವರು ಈ ಚಿತ್ರಗಳನ್ನು ಚುಂಬನ ಚಿತ್ರಗಳೆಂದು ನೇರವಾಗಿ ಹೇಳದಿದ್ದರೂ, ನೆಹರೂ ಅವರು ಮಹಿಳೆಯರೊಂದಿಗೆ ನಿಕಟ ಕ್ಷಣಗಳಲ್ಲಿದ್ದರು ಎಂಬುದನ್ನು ಬಿಂಬಿಸುವಂತೆ ಈ ಪೋಸ್ಟ್ ಮೂಡಿಬಂದಿದೆ.

ದುಬೆ ಪೋಸ್ಟ್​ ವಿರುದ್ಧ ಕಾಂಗ್ರೆಸ್ ಕಿಡಿ

ದುಬೆ ಪೋಸ್ಟ್​ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ನಾಯಕರು, ನೆಹರೂ ಅವರ ಚಿತ್ರಗಳನ್ನು ಸಂದರ್ಭವನ್ನು ಮರೆಮಾಚಿ ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇಟ್ ಮಾತನಾಡಿ, ಒಂದು ಫೋಟೋದಲ್ಲಿ ನೆಹರೂ ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್ ಅವರು ಸಹೋದರನ ಕೆನ್ನೆಗೆ ಪ್ರೀತಿಯಿಂದ ಮುದ್ದಿಡುತ್ತಿದ್ದರೆ, ಮತ್ತೊಂದರಲ್ಲಿ ಅವರ ಸೋದರಸೊಸೆ ನಯನತಾರಾ ಸೆಹಗಲ್ ಇದ್ದಾರೆ. ಮಾರ್ಚ್ 1962 ರ ಇನ್ನೊಂದು ಫೋಟೋದಲ್ಲಿ ನೆಹರೂ ಅವರು ಹೊಳಿ ಹಬ್ಬದ ಸಂದರ್ಭದಲ್ಲಿ ಜಾಕ್ವೆಲಿನ್ ಕೆನಡಿ ಅವರಿಗೆ ಬಣ್ಣ ಬಳಿಯುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ದುಬೆ ಅವರಿಗೆ ಖಾರವಾಗಿ ಪ್ರತಿಕ್ರಿಯಿಸಿದ ಸುಪ್ರಿಯಾ, ನಿಮ್ಮ ಮನೆಯ ಮಹಿಳೆಯರೂ ನಿಮ್ಮಂತಹ ಕ್ರೂರ ವ್ಯಕ್ತಿಯಿಂದ ಸುರಕ್ಷಿತವಾಗಿರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಕೂಡ ದುಬೆ ಅವರ ಪೋಸ್ಟ್ ಬಗ್ಗೆ ಟೀಕಿಸಿದ್ದು, ನೆಹರೂ-ಗಾಂಧಿ ಕುಟುಂಬವನ್ನು ಗುರಿಯಾಗಿಸಲು ಆಯ್ದ ಫೋಟೋಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ದಶಕಗಳಿಂದಲೂ ಜವಾಹರ್‌ಲಾಲ್ ನೆಹರೂ ಮತ್ತು ಅವರ ಕುಟುಂಬದ ವಿರುದ್ಧ ರಾಜಕೀಯ ಲಾಭಕ್ಕಾಗಿ ಆಯ್ದ ಫೋಟೋಗಳು, ಅಪಪ್ರಚಾರ ಮತ್ತು ಉದ್ದೇಶಪೂರ್ವಕ ತಿರಿಚುವಿಕೆಗಳ ಮೂಲಕ ಪ್ರಚಾರ ನಡೆಸಲಾಗುತ್ತಿದೆ. ನಿಶಿಕಾಂತ್ ದುಬೆ ಅವರ ಈ ಪ್ರಯತ್ನವು ಅಪಪ್ರಚಾರದ ರಾಜಕೀಯಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಕುಟುಂಬದ ಪ್ರೀತಿಯ ಶುಭಾಶಯವು ಹಗರಣವಲ್ಲ, ಮತ್ತು ಹಳೆಯ ಫೋಟೋ ತಪ್ಪು ಕೆಲಸಕ್ಕೆ ಸಾಕ್ಷಿಯಲ್ಲ ಎಂದು ಸಿಂಘ್ವಿ ಟ್ವೀಟ್ ಮಾಡಿದ್ದಾರೆ.

ಫೋಟೋ ರಾಜಕೀಯ!..

ರಾಹುಲ್ ಗಾಂಧಿ ಅವರು ಸಂದೀಪ್ ದೀಕ್ಷಿತ್​ರನ್ನು ಅಪ್ಪಿಕೊಂಡು, ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನು ಗೇಲಿ ಮಾಡಿದ ನಂತರ ಈ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ. ಶುಕ್ರವಾರವೂ ಸಹ ದುಬೆ ಅವರು ರಾಹುಲ್ ಗಾಂಧಿಗೆ ತಿರುಗೇಟು ನೀಡಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಕ್ಯೂಬಾದ ಕ್ರಾಂತಿಕಾರಿ ಫಿಡೆಲ್ ಕ್ಯಾಸ್ಟ್ರೋ ಮತ್ತು ಪ್ಯಾಲೆಸ್ಟೈನ್ ನಾಯಕ ಯಾಸಿರ್ ಅರಾಫತ್ ಅವರೊಂದಿಗೆ ಇದ್ದ ಫೋಟೋಗಳನ್ನು ಹಂಚಿಕೊಂಡಿದ್ದರು.

ಅಲ್ಲದೆ, ಎಂಟು ವರ್ಷಗಳ ಹಿಂದೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರನ್ನು ಅಪ್ಪಿಕೊಂಡಿದ್ದ ವೈರಲ್ ಚಿತ್ರವನ್ನು ಹಂಚಿಕೊಂಡಿದ್ದ ದುಬೆ, ರಾಹುಲ್ ಗಾಂಧಿ ಅವರೇ, ಇದನ್ನು ಗ್ಯಾಸ್ಟ್ರಿಕ್ ಉರಿ ಎಂದು ಕರೆಯುತ್ತೀರಾ ಅಥವಾ ಇದು ಕಾಮದ ಉರಿಯೇ? ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು. ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಳೆಯ ಫೋಟೋಗಳನ್ನು ಇಟ್ಟುಕೊಂಡು ಪರಸ್ಪರ ಕೆಸರೆರಚಾಟ ನಡೆಸುವ ಸಾಮಾಜಿಕ ಜಾಲತಾಣದ ಸಮರ ಮತ್ತೆ ಮುಂಚೂಣಿಗೆ ಬಂದಿದೆ.

ಪ್ರಧಾನಿ ಮೋದಿಯವರ ಅಪ್ಪುಗೆಯನ್ನು ಗೇಲಿ ಮಾಡಿದ್ದ ರಾಹುಲ್ ಗಾಂಧಿ

ಗುರುವಾರ ಸಾಯಂಕಾಲ ನಡೆದ ರಚನಾತ್ಮಕ ಕಾಂಗ್ರೆಸ್ ರಾಷ್ಟ್ರೀಯ ಸಮಾವೇಶದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನು ವ್ಯಂಗ್ಯವಾಡಿದ ಕೆಲವೇ ಗಂಟೆಗಳಲ್ಲಿ ದುಬೆ ಈ ವಾಗ್ದಾಳಿ ನಡೆಸಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ವಿದೇಶಾಂಗ ನೀತಿ ಎಂದರೆ ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವುದು ಎಂಬ ಕಲ್ಪನೆ ಪ್ರಧಾನಿ ಮೋದಿಯವರಿಗೆ ಎಲ್ಲಿಂದ ಬಂತೋ ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದರು. ತಮ್ಮ ಮಾತನ್ನು ಸಾಬೀತುಪಡಿಸಲು ವೇದಿಕೆಯಲ್ಲಿದ್ದ ಸಂದೀಪ್ ದೀಕ್ಷಿತ್ ಅವರನ್ನು ಅಪ್ಪಿಕೊಂಡಿದ್ದರು.

ಆಗ ದೀಕ್ಷಿತ್ ತಮಾಷೆಯಾಗಿ, ನೀವು ನನ್ನನ್ನು ಮೆಲೋನಿ ಎಂದು ತಪ್ಪಾಗಿ ಭಾವಿಸಲಿಲ್ಲ ತಾನೇ..? ಎಂದು ರಾಹುಲ್ ಅವರನ್ನು ಕೇಳಿದ್ದರು. ಅದಕ್ಕೆ ರಾಹುಲ್ ಗಾಂಧಿ ನಗುತ್ತಾ, ನಾನು ಇನ್ನು ಆ ಹಂತಕ್ಕೆ ತಲುಪಿಲ್ಲ ಎಂದು ಉತ್ತರಿಸಿದ್ದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net