

New Species Of Fish : ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ. ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ. ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ. ವಿಶಾಲ ಸಮುದ್ರದ ಆಳದಲ್ಲಿ ಅದೆಷ್ಟೋ ಬಗೆಯ ಅಪರೂಪದ ಹಾಗೂ ವಿಸ್ಮಯಕಾರಿ ಜೀವಿಗಳು ಆವಾಸಸ್ಥಾನ ಕಂಡುಕೊಂಡಿವೆ. ಇನ್ನೂ ಮಾನವರ ಕಣ್ಣಿಗೆ ಬೀಳದ ಸಹಸ್ರಾರು ಜೀವಿಗಳಿವೆ. ಆಗಾಗ ಒಂದೊಂದೆ ಹೊಸ ಜೀವಿಗಳು ಹೊರಜಗತ್ತಿಗೆ ಪರಿಚಯವಾಗುತ್ತಲೇ ಇರುತ್ತವೆ. ಅದೇ ರೀತಿ ಇದೀಗ ಹೊಸ ಪ್ರಭೇದದ ಮೀನೊಂದು ಪತ್ತೆಯಾಗಿದೆ.
ಹೊಸದಾಗಿ ಪತ್ತೆಯಾಗಿರುವ ಮೀನು ನೋಡಲು ತೀರಾ ಸಾಧಾರಣ ಹಾಗೂ ಮುಗ್ಧ ಜೀವಿಯಂತೆ ಕಂಡರೂ ಯಾರಾದರೂ ಅದನ್ನು ಮುಟ್ಟಿದರೆ ಬರೋಬ್ಬರಿ 220 ವೋಲ್ಟ್‌ನಷ್ಟು ತೀವ್ರ ವಿದ್ಯುತ್ ಶಾಕ್ ನೀಡುವ ಭೀಕರ ಸಾಮರ್ಥ್ಯ ಹೊಂದಿದೆ ಎಂದರೆ ನೀವು ನಂಬಲೇಬೇಕು! ಹೌದು, ಭಾರತೀಯ ಭೂವಿಜ್ಞಾನ ಸಚಿವಾಲಯದ 'ಡೀಪ್ ಓಷನ್ ಮಿಷನ್' (Deep Ocean Mission) ಯೋಜನೆಯ ಸಂಶೋಧನೆಯ ಭಾಗವಾಗಿ ಆಗ್ನೇಯ ಅರೇಬಿಯನ್ ಸಮುದ್ರದ ಆಳದಲ್ಲಿ ಇಂತಹದ್ದೊಂದು ಅಪಾಯಕಾರಿ ಮತ್ತು ವಿಸ್ಮಯಕಾರಿ 'ಎಲೆಕ್ಟ್ರಿಕ್ ರೇ' ಜಾತಿಯ ಹೊಸ ಮೀನನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಭಾರತೀಯ ಪ್ರಾಣಿಶಾಸ್ತ್ರ ಸರ್ವೇಕ್ಷಣಾ ಸಂಸ್ಥೆಯ ವಿಜ್ಞಾನಿಗಳು ಈ ಹೊಸ ತಳಿಯ ಮೀನನ್ನು ಗುರುತಿಸಿದ್ದು, ಇದಕ್ಕೆ 'ಟೆಟ್ರೋನಾರ್ಸಿ ರಮಣಮೂರ್ತಿ' (Tetronarce ramanamurthy) ಎಂದು ನಾಮಕರಣ ಮಾಡಿದ್ದಾರೆ. ಭಾರತದ ಭೂವಿಜ್ಞಾನ ಸಚಿವಾಲಯದ 'ಡೀಪ್ ಓಷನ್ ಮಿಷನ್' ಯೋಜನೆಯ ನಿರ್ದೇಶಕರಾದ ಡಾ. ಎಂ. ವಿ. ರಮಣಮೂರ್ತಿ ಅವರ ಅಪಾರ ಕೊಡುಗೆಯನ್ನು ಗೌರವಿಸುವ ಸಲುವಾಗಿ ಅವರ ಹೆಸರನ್ನೇ ಈ ಜೀವಿಗೆ ಇಡಲಾಗಿದೆ. ಪ್ರಸಿದ್ಧ ಅಂತಾರಾಷ್ಟ್ರೀಯ ವರ್ಗೀಕರಣ ವಿಜ್ಞಾನ ನಿಯತಕಾಲಿಕೆ 'ಝೂಟಾಕ್ಸಾ' ನಲ್ಲಿ ಈ ಮಹತ್ವದ ಸಂಶೋಧನಾ ವರದಿಯು ಅಧಿಕೃತವಾಗಿ ಪ್ರಕಟಗೊಂಡಿದೆ.
ಇಂಡಿಯನ್ ಉಪಖಂಡದ ಮಹಾಸಾಗರಗಳಲ್ಲಿ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿರುವ 'ಟೆಟ್ರೋನಾರ್ಸಿ' (Tetronarce) ಕುಲಕ್ಕೆ ಸೇರಿದ ಮೀನೊಂದು ಪತ್ತೆಯಾಗಿರುವುದು ಇತಿಹಾಸದಲ್ಲೇ ಇದೇ ಮೊದಲ ಬಾರಿಯಾಗಿದೆ. ಪ್ರಾಣಿಶಾಸ್ತ್ರ ಸರ್ವೇಕ್ಷಣಾ ಸಂಸ್ಥೆಯ ಅಧಿಕಾರಿಗಳ ಪ್ರಕಾರ, ಈ ಅಪರೂಪದ ಶೋಧನೆಯು ಭಾರತದ ಆಳಸಮುದ್ರದ ಪರಿಸರ ವ್ಯವಸ್ಥೆಯಲ್ಲಿ ಇದುವರೆಗೆ ಜಗತ್ತಿಗೆ ತಿಳಿಯದಿದ್ದ ಅಗಾಧ ಜೀವವೈವಿಧ್ಯತೆಯ ಮೇಲೆ ಬೆಳಕು ಚೆಲ್ಲಿದೆ. ಸಮುದ್ರದಾಳದ ರಹಸ್ಯಗಳನ್ನು ಭೇದಿಸುವಲ್ಲಿ ಈ ಸಂಶೋಧನೆಯು ಭಾರತೀಯ ವಿಜ್ಞಾನಿಗಳಿಗೆ ಅತ್ಯಂತ ದೊಡ್ಡ ಮೈಲಿಗಲ್ಲಾಗಿ ಪರಿಣಮಿಸಿದೆ.
ಈ 'ಟೆಟ್ರೋನಾರ್ಸಿ ರಮಣಮೂರ್ತಿ' ಮೀನಿನ ದೇಹ ರಚನೆಯು ಮೃದ್ವಸ್ಥಿಗಳಿಂದ ಕೂಡಿದ್ದು, ಮಂಟಾ ರೇ (Manta Ray) ಮೀನುಗಳಂತೆ ವಿಶಾಲವಾದ ಮತ್ತು ವೃತ್ತಾಕಾರದ ದಪ್ಪ ದೇಹವನ್ನು ಹೊಂದಿದೆ. ಇವುಗಳ ಬಾಲವು ತೀರಾ ಸಣ್ಣದಾಗಿದ್ದು, ಸಮುದ್ರದ ತಳಭಾಗದ ಮರಳು ಅಥವಾ ಕೆಸರು ತುಂಬಿದ ಪ್ರದೇಶಗಳಲ್ಲಿ ಅತ್ಯಂತ ನಿಧಾನವಾಗಿ ಈಜಾಡುತ್ತವೆ. ಇವು ನೀಲಿ-ಕಪ್ಪು ಹಾಗೂ ಕಡು ಕಂದು ಬಣ್ಣಗಳಲ್ಲಿ ಕಂಡುಬರುತ್ತವೆ. ಇವುಗಳ ಚರ್ಮ ಮತ್ತು ವೃತ್ತಾಕಾರದ ದಪ್ಪನೆಯ ದೇಹದ ವಿನ್ಯಾಸವು ತಮ್ಮ ಶರೀರದಲ್ಲೇ ವಿದ್ಯುತ್ ಪ್ರವಾಹವನ್ನು ಉತ್ಪಾದಿಸಲು ಹಾಗೂ ಅದನ್ನು ಸುಲಭವಾಗಿ ಹರಿಸಲು ನೆರವಾಗುತ್ತದೆ.
ಈ ಎಲೆಕ್ಟ್ರಿಕ್ ರೇ ಮೀನುಗಳು ತಮ್ಮ ಆಹಾರಕ್ಕಾಗಿ ಬೇಟೆಯಾಡುವಾಗ ಅಥವಾ ಶತ್ರುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವಾಗ ಬರೋಬ್ಬರಿ 8 ವೋಲ್ಟ್‌ನಿಂದ 220 ವೋಲ್ಟ್‌ವರೆಗಿನ ಅತ್ಯಂತ ತೀವ್ರ ವಿದ್ಯುತ್ ಪ್ರವಾಹವನ್ನು ಹೊರಸೂಸುವ ಸಾಮರ್ಥ್ಯ ಹೊಂದಿವೆ. ಇವುಗಳು ನೀಡುವ ಈ ಶಾಕ್‌ನಿಂದಾಗಿ ಎದುರಾಳಿ ಜೀವಿಗಳು ಅಥವಾ ಬೇಟೆಗಳು ಕ್ಷಣಮಾತ್ರದಲ್ಲಿ ಪಾರ್ಶ್ವವಾಯುವಿಗೆ ಈಡಾದಂತೆ ಕದಲಲಾಗದೆ ನಿಶ್ಚೇಷ್ಟಿತಗೊಳ್ಳುತ್ತವೆ. ಅತ್ಯಂತ ತೀವ್ರ ವೋಲ್ಟೇಜ್ ನೀಡುವ ಈ ಜೀವಿ ಅರೇಬಿಯನ್ ಸಮುದ್ರದಲ್ಲಿ ಪತ್ತೆಯಾಗಿರುವುದು ವಿಜ್ಞಾನಿಗಳಲ್ಲಿ ಮಾತ್ರವಲ್ಲದೆ ಜಾಗತಿಕ ಸಾಗರ ಸಂಶೋಧಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ, (ಏಜೆನ್ಸೀಸ್).