

ಲಖನೌ: 2027 ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದ್ದರೂ, ರಾಜ್ಯ ರಾಜಕಾರಣದಲ್ಲಿ ಈಗಲೇ ಭಾರಿ ಸಂಚಲನ ಶುರುವಾಗಿದೆ. ಪ್ರಮುಖ ಸುದ್ದಿ ಸಂಸ್ಥೆಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಹೊಸದೊಂದು ರಾಜಕೀಯ ಮೈತ್ರಿಕೂಟ ತಲೆಎತ್ತುತ್ತಿದೆ ಎನ್ನಲಾಗಿದೆ. ಎಐಎಂಐಎಂ (AIMIM) ಮುಖ್ಯಸ್ಥ ಅಸದುದ್ದೀನ್ ಓವೈಸಿ ಮತ್ತು ಆಜಾದ್ ಸಮಾಜ ಪಕ್ಷದ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಕೈಜೋಡಿಸಲು ಮುಂದಾಗಿದ್ದಾರೆ.
ಗುರುವಾರ (ನ.12) ಲಕ್ನೋದ ಗೋಮತಿನಗರದ ಹೋಟೆಲ್ ಒಂದರಲ್ಲಿ ನಡೆಯಲಿರುವ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಇಬ್ಬರು ನಾಯಕರು ತಮ್ಮ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಈ ಹೊಸ ಜೋಡಿ ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಹಾಗೂ ಸಮಾಜವಾದಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಪರ್ಯಾಯವಾಗಿ ಮೂರನೇ ಶಕ್ತಿಯಾಗಿ ಹೊರಹೊಮ್ಮುವ ಲಕ್ಷಣಗಳು ಕಾಣಿಸುತ್ತಿವೆ.
ಈ ಮೈತ್ರಿಯ ಅಸಲಿ ಲೆಕ್ಕಾಚಾರ ಇರುವುದೇ ದಲಿತ ಮತ್ತು ಮುಸ್ಲಿಂ ಮತಗಳ ಕ್ರೋಢೀಕರಣದಲ್ಲಿ. ವರದಿ ಪ್ರಕಾರ, ಉತ್ತರ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು ಸುಮಾರು ಶೇ. 19 ರಷ್ಟಿದ್ದರೆ, ಪರಿಶಿಷ್ಟ ಜಾತಿಗಳು (SC) ಸುಮಾರು ಶೇ. 21 ರಷ್ಟಿವೆ. ಅಂದರೆ, ಈ ಎರಡು ಸಮುದಾಯಗಳು ಸೇರಿದರೆ ರಾಜ್ಯದ ಒಟ್ಟು ಮತದಾರರಲ್ಲಿ ಸುಮಾರು ಶೇ. 40 ರಷ್ಟಾಗುತ್ತಾರೆ. ಚುನಾವಣೆಯಲ್ಲಿ ಯಾರ ಹಣೆಬರಹವನ್ನಾದರೂ ಬದಲಿಸಬಲ್ಲ ದೊಡ್ಡ ಶಕ್ತಿ ಇದಾಗಿದೆ.
ತೆಲಂಗಾಣದ ಹೊರಗೆ ತನ್ನ ನೆಲೆ ವಿಸ್ತರಿಸಲು ಓವೈಸಿ ಅವರ AIMIM ಸತತ ಪ್ರಯತ್ನ ನಡೆಸುತ್ತಿದೆ. ಯುಪಿಯಲ್ಲಿ ಅಲ್ಪಸಂಖ್ಯಾತ ಮತಗಳ ಮೇಲೆ ಓವೈಸಿ ಹಿಡಿತ ಹೊಂದಿದ್ದರೂ, ಅವುಗಳನ್ನು ಗೆಲುವಿನ ಸೀಟುಗಳಾಗಿ ಬದಲಾಯಿಸುವಲ್ಲಿ ಪಕ್ಷ ವಿಫಲವಾಗಿತ್ತು. ಇನ್ನೊಂದೆಡೆ, 2024ರ ಲೋಕಸಭಾ ಚುನಾವಣೆಯಲ್ಲಿ ನಗೀನಾ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ ನಂತರ ಚಂದ್ರಶೇಖರ್ ಆಜಾದ್ ಪ್ರಮುಖ ದಲಿತ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಈಗ ಇವರಿಬ್ಬರೂ ಒಂದಾಗಿರುವುದು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ದೊಡ್ಡ ತಲೆನೋವಾಗುವ ಸಾಧ್ಯತೆಯಿದೆ. ಸಮಾಜವಾದಿ ಪಕ್ಷ ಕೂಡ ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಒಳಗೊಂಡ 'ಪಿಡಿಎ' ಸೂತ್ರವನ್ನೇ ನಂಬಿಕೊಂಡು ರಾಜಕಾರಣ ಮಾಡುತ್ತಿರುವ ಹಿನ್ನಲೆ ಈ ಹೊಸ ಮೈತ್ರಿ ಇಂಡಿ ಕೂಟಕ್ಕೆ ಕೊಡಲಿ ಏಟನ್ನು ನೀಡಲಿದೆ.
ಈ ಹೊಸ ಒಪ್ಪಂದದ ಬಗ್ಗೆ ಮಾತನಾಡಿರುವ AIMIM ವಕ್ತಾರ ಶಾಬಾದ್ ಚೌಹಾಣ್, ಎರಡೂ ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. "ಒಪ್ಪಂದದ ಸ್ವರೂಪ ಮತ್ತು ಸೀಟು ಹಂಚಿಕೆಯಂತಹ ಇತರ ವಿವರಗಳನ್ನು ಗುರುವಾರದ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಲಾಗುವುದು. ಇದರಲ್ಲಿ AIMIM ಮತ್ತು ಭೀಮ್ ಆರ್ಮಿಯ ನಾಯಕರು ಭಾಗವಹಿಸಲಿದ್ದಾರೆ" ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಓವೈಸಿ ಮತ್ತು ಆಜಾದ್ ಪ್ರತ್ಯೇಕವಾಗಿ ಲಕ್ನೋಗೆ ಬಂದಿಳಿದಿದ್ದು, ಸದ್ಯಕ್ಕೆ ಗುಟ್ಟು ಬಿಟ್ಟುಕೊಟ್ಟಿಲ್ಲ.
ಪತ್ರಿಕಾಗೋಷ್ಠಿಗೂ ಮುನ್ನ ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ್ ಆಜಾದ್, ಮೈತ್ರಿಯ ಗುರಿಯ ಬಗ್ಗೆ ಸುಳಿವು ನೀಡಿದ್ದಾರೆ. "ಏನೇ ಇದ್ದರೂ ಅದು ನಿಮ್ಮ ಮುಂದೆಯೇ ಬಹಿರಂಗವಾಗಲಿದೆ. ಯುವಜನರು, ರೈತರು ಮತ್ತು ದುರ್ಬಲ ವರ್ಗಗಳನ್ನು ಬಲಪಡಿಸಲು ಹಾಗೂ ತುಳಿತಕ್ಕೊಳಗಾದ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ನಾವು ಒಟ್ಟಾಗಿ ಕೆಲಸ ಮಾಡಲಿದ್ದೇವೆ" ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧವೂ ಆಜಾದ್ ವಾಗ್ದಾಳಿ ನಡೆಸಿ, ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಆರ್ಥಿಕ ಸಂಕಷ್ಟ ಮತ್ತು ಸರ್ಕಾರಿ ಉದ್ಯೋಗಗಳ ಕಡಿತದ ಬಗ್ಗೆ ಅವರು ಕಿಡಿಕಾರಿದ್ದಾರೆ. "ದಲಿತ ಮತ್ತು ಹಿಂದುಳಿದ ವರ್ಗದ ವಿದ್ಯಾವಂತ ಯುವಕರು ಪದವಿ ಪಡೆದರೂ ಕೆಲಸವಿಲ್ಲದೆ ಅಲೆಯುತ್ತಿದ್ದಾರೆ. ನೋಟು ಅಮಾನ್ಯೀಕರಣದ ಹೊಡೆತದಿಂದ ಜನ ಇನ್ನೂ ಚೇತರಿಸಿಕೊಂಡಿಲ್ಲ. ಮುಂಬರುವ ಚುನಾವಣೆಯಲ್ಲಿ ಈ ಎಲ್ಲಾ ವೈಫಲ್ಯಗಳಿಗೆ ಸರ್ಕಾರ ಜನರಿಗೆ ಉತ್ತರ ನೀಡಲೇಬೇಕಾಗುತ್ತದೆ" ಎಂದು ಆಜಾದ್ ಎಚ್ಚರಿಕೆ ನೀಡಿದ್ದಾರೆ.
ಈ ಹೊಸ ಮೈತ್ರಿ ಹುಟ್ಟಿಕೊಳ್ಳುವುದರ ಹಿಂದೆ ಒಂದು ರಾಜಕೀಯ ಹಿನ್ನೆಲೆಯೂ ಇದೆ. ಉತ್ತರ ಪ್ರದೇಶದಲ್ಲಿ 'ಇಂಡಿಯಾ' (INDIA) ಮೈತ್ರಿಕೂಟದ ಜೊತೆ ಕೈಜೋಡಿಸಲು ಓವೈಸಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಮೈತ್ರಿಕೂಟದಲ್ಲಿ ತಮ್ಮನ್ನು ಸೇರಿಸಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಓವೈಸಿ ಅವರು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ಗೆ ಅಕ್ಟೋಬರ್ 2 ರ ಗಡುವು ಕೂಡ ನೀಡಿದ್ದರು. ಆದರೆ, ವಿರೋಧ ಪಕ್ಷಗಳ ಬಣ ಓವೈಸಿ ಪ್ರಸ್ತಾಪಕ್ಕೆ ಯಾವುದೇ ಕಿಮ್ಮತ್ತು ನೀಡಲಿಲ್ಲ. ಹೀಗಾಗಿ, ಈಗ ಓವೈಸಿ ಮತ್ತು ಚಂದ್ರಶೇಖರ್ ಆಜಾದ್ ಜೊತೆಯಾಗಿ ಹೊಸ ರಾಜಕೀಯ ದಾಳ ಉರುಳಿಸಲು ಸಜ್ಜಾಗಿದ್ದಾರೆ, (ಏಜೆನ್ಸೀಸ್).