ನಾನು ಮಾನಸಿಕವಾಗಿ ಕುಗ್ಗಿಹೋಗಿದ್ದೆ, ಆದರೆ ಸಿದ್ಧಾರ್ಥ್​ ನನ್ನ ಬೆನ್ನಿಗಿದ್ದರು: "ಟಾಕ್ಸಿಕ್"​ ಹಸಿಬಿಸಿ ದೃಶ್ಯಗಳ ಬಗ್ಗೆ ಮೌನ ಮುರಿದ ಕಿಯಾರಾ! Kiara Advani

Kiara Advani opens up on 'Koffee with Karan' about the controversy surrounding romantic scenes with Yash in the film 'Toxic' and the movie's failure.
‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಜೊತೆಗಿನ ರೊಮ್ಯಾಂಟಿಕ್ ದೃಶ್ಯಗಳ ವಿವಾದ ಹಾಗೂ ಸಿನಿಮಾದ ಸೋಲಿನ ಬಗ್ಗೆ 'ಕಾಫಿ ವಿತ್ ಕರಣ್' ಶೋನಲ್ಲಿ ಕಿಯಾರಾ ಅಡ್ವಾಣಿ ಮನದಾಳದ ಮಾತು
Published on: 

ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನಪ್ಸ್' ಸಿನಿಮಾ ಬಿಡುಗಡೆಯಾದಾಗ, ಚಿತ್ರದ ಕಥೆಗಿಂತ ಹೆಚ್ಚಾಗಿ ಯಶ್ ಮತ್ತು ನಟಿ ಕಿಯಾರಾ ಅಡ್ವಾಣಿ ನಡುವಿನ ರೊಮ್ಯಾಂಟಿಕ್ ದೃಶ್ಯಗಳೇ ದೊಡ್ಡ ಚರ್ಚೆಗೆ ಕಾರಣವಾಗಿದ್ದವು.

ವಿಶೇಷವಾಗಿ ತಬಾಹಿ ಹಾಡಿನಲ್ಲಿ ಈ ಜೋಡಿಯ ಆಪ್ತ ದೃಶ್ಯಗಳನ್ನು ಕಂಡು ನೆಟ್ಟಿಗರು ಕಿಯಾರಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. "ಮದುವೆಯಾದ ಮೇಲೂ ಇಂತಹ ದೃಶ್ಯಗಳಲ್ಲಿ ನಟಿಸಬೇಕಾ?" ಎಂದು ಹಲವರು ನೈತಿಕ ಪಾಠ ಮಾಡಲು ಶುರುಮಾಡಿದ್ದರು. ಇಷ್ಟು ದಿನ ಈ ಬಗ್ಗೆ ಮೌನವಾಗಿದ್ದ ಕಿಯಾರಾ ಅಡ್ವಾಣಿ, ಈಗ ಕೊನೆಗೂ ತಮ್ಮ ಮನದಾಳದ ಮಾತನ್ನು ಹೊರಹಾಕಿದ್ದಾರೆ.

'ಕಾಫಿ ವಿತ್ ಕರಣ್' ಶೋನಲ್ಲಿ ಮನಬಿಚ್ಚಿ ಮಾತನಾಡಿದ ನಟಿ

ಜನಪ್ರಿಯ ಟಾಕ್ ಶೋ 'ಕಾಫಿ ವಿತ್ ಕರಣ್' ಸೀಸನ್ 9 ರಲ್ಲಿ ತಮ್ಮ ಪತಿ, ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಕಿಯಾರಾ ಅಡ್ವಾಣಿ ಭಾಗವಹಿಸಿದ್ದರು. ಈ ವೇಳೆ ನಿರೂಪಕ ಕರಣ್ ಜೋಹರ್ ಬಾಲಿವುಡ್ ಹಾಗೂ ಭಾರತೀಯ ಚಿತ್ರರಂಗದಲ್ಲಿರುವ ಲಿಂಗ ತಾರತಮ್ಯದ ಬಗ್ಗೆ ಪ್ರಶ್ನಿಸಿದರು.

"ವಿವಾಹಿತ ಪುರುಷ ನಟರು ಎಷ್ಟೇ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿದರೂ ಯಾರೂ ಪ್ರಶ್ನಿಸುವುದಿಲ್ಲ. ಆದರೆ ನಟಿಯರಿಗೆ ಮಾತ್ರ ಯಾಕೆ ಈ ನೈತಿಕ ಪೊಲೀಸ್‌ಗಿರಿ?" ಎಂದು ಕರಣ್ ಕೇಳಿದರು. ಅಲ್ಲದೆ, ಯಶ್ ಜೊತೆಗಿನ ಆ ದೃಶ್ಯಗಳ ಬಗ್ಗೆ ದೊಡ್ಡ ಗದ್ದಲವೇ ಎದ್ದಾಗ ನಿಮ್ಮ ಪತಿ ಸಿದ್ಧಾರ್ಥ್ ಹೇಗೆ ಪ್ರತಿಕ್ರಿಯಿಸಿದರು ಎಂದು ಕರಣ್ ನೇರವಾಗಿ ಪ್ರಶ್ನಿಸಿದರು.

ಆ ವಿಷಯ ನಮ್ಮ ಮನೆಯಲ್ಲಿ ಚರ್ಚೆಯೇ ಆಗಲಿಲ್ಲ!

ಕರಣ್ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಕಿಯಾರಾ, ಸಿದ್ಧಾರ್ಥ್ ಅವರಿಗೆ ಈ ವಿವಾದ ಕಿಂಚಿತ್ತೂ ಪರಿಣಾಮ ಬೀರಲಿಲ್ಲ ಎಂದು ಸ್ಪಷ್ಟಪಡಿಸಿದರು. "ಸಿದ್ಧಾರ್ಥ್‌ಗೆ ಇದರ ಬಗ್ಗೆ ಯಾವುದೇ ತಲೆಬಿಸಿ ಇರಲಿಲ್ಲ. ನಿಜ ಹೇಳಬೇಕೆಂದರೆ, ಅವರು ಈ ವಿಷಯವನ್ನು ನಮ್ಮ ಮನೆಯಲ್ಲಿ ಒಮ್ಮೆಯೂ ಪ್ರಸ್ತಾಪಿಸಲಿಲ್ಲ. ನಾವು ಇದರ ಬಗ್ಗೆ ಮಾತನಾಡಿಯೇ ಇಲ್ಲ. ಹೊರಗಡೆ ಎಷ್ಟೇ ಚರ್ಚೆಯಾದರೂ, ಅದು ನಮ್ಮಿಬ್ಬರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಅವರು ನನ್ನ ಬೆಂಬಲಕ್ಕೆ ನಿಂತಿದ್ದರು," ಎಂದು ಕಿಯಾರಾ ಹೇಳಿದ್ದಾರೆ.

Also Read
ಎರಡೆರಡು ಅಫೇರ್​​, 600 ಬಿಲಿಯನ್​ ಲಾಸ್​: ಪತ್ನಿಗೆ ಮೋಸ ಮಾಡಿದ್ದನ್ನು ಒಪ್ಪಿಕೊಂಡ ಎನ್ವಿಡಿಯಾ ಸಿಇಒ; ಜೆನ್ಸನ್ ಹುವಾಂಗ್ ತಲೆದಂಡಕ್ಕೆ ಕ್ಷಣಗಣನೆ! Jensen Huang
Kiara Advani opens up on 'Koffee with Karan' about the controversy surrounding romantic scenes with Yash in the film 'Toxic' and the movie's failure.

ನಾನು ಸಮರ್ಥನೆ ಮಾಡುವ ಅಗತ್ಯವೇ ಇರಲಿಲ್ಲ

ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದ ಟ್ರೋಲ್‌ಗಳಿಗೆ ತಾವು ಯಾಕೆ ಉತ್ತರ ಕೊಡಲಿಲ್ಲ ಎಂಬುದನ್ನೂ ಕಿಯಾರಾ ವಿವರಿಸಿದರು. "ಚಿತ್ರರಂಗದಲ್ಲಿ ನಟಿಯರು ದಶಕಗಳಿಂದ ಇಂತಹ ದ್ವಂದ್ವ ನೀತಿಯನ್ನು ಎದುರಿಸುತ್ತಲೇ ಬಂದಿದ್ದಾರೆ. ಇಂರ್ಟನೆಟ್​ ನನ್ನ ವಿರುದ್ಧ ಟ್ರೋಲ್ ಶುರುವಾದಾಗ, ಹಲವರು ಈ ದ್ವಂದ್ವ ನಿಲುವನ್ನು ಪ್ರಶ್ನಿಸಿ ನನ್ನ ಪರವಾಗಿ ಮಾತನಾಡಿದರು. ಜನರೇ ಅದಕ್ಕೆ ಸರಿಯಾದ ಉತ್ತರ ಕೊಡುತ್ತಿದ್ದಿದ್ದರಿಂದ, ನಾನು ಪ್ರತ್ಯೇಕವಾಗಿ ಸ್ಪಷ್ಟನೆ ಅಥವಾ ಸಮರ್ಥನೆ ನೀಡುವ ಅಗತ್ಯವಿಲ್ಲ ಎಂದು ಸುಮ್ಮನಾದೆ," ಎಂದಿದ್ದಾರೆ.

'ಟಾಕ್ಸಿಕ್' ಸೋಲಿನ ಬಗ್ಗೆ ಕಿಯಾರಾ ಬೇಸರ

ಇದೇ ಸಂದರ್ಶನದಲ್ಲಿ 'ಟಾಕ್ಸಿಕ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟವನ್ನು ತಲುಪದ ಬಗ್ಗೆಯೂ ಕಿಯಾರಾ ತಮ್ಮ ನೋವು ತೋಡಿಕೊಂಡಿದ್ದಾರೆ. 'ಕೆಜಿಎಫ್ 2' ನಂತರ ಯಶ್ ಅಭಿನಯದ ಸಿನಿಮಾ ಎಂಬ ಕಾರಣಕ್ಕೆ ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಮಿಂಚಿದ್ದರೆ, ಕಿಯಾರಾ ನಾದಿಯಾ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಆದರೆ, ಸಿನಿಮಾ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಉತ್ತಮ ಕಲೆಕ್ಷನ್ ಮಾಡಿದರೂ, ನಂತರ ಮಿಶ್ರ ಪ್ರತಿಕ್ರಿಯೆ ಪಡೆದು ಬಾಕ್ಸ್ ಆಫೀಸ್‌ನಲ್ಲಿ ಮಂಕಾಯಿತು. ಚಿತ್ರಮಂದಿರಗಳಲ್ಲಿ ಒಟ್ಟು 342 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ತವಾಯಿತು. ಈ ಬಗ್ಗೆ ಮಾತನಾಡಿದ ಕಿಯಾರಾ, "ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಂದ ಪ್ರತಿಕ್ರಿಯೆ ನನಗೆ ಎದೆನೋವು ತಂದಿತ್ತು. ದೊಡ್ಡ ನಿರೀಕ್ಷೆಯೊಂದಿಗೆ ಬಂದ ಸಿನಿಮಾ ಅಂದುಕೊಂಡಂತೆ ಆಗದಿದ್ದಾಗ ತುಂಬಾ ನೋವಾಗುತ್ತದೆ. ಆ ಮೊದಲ ವಾರಾಂತ್ಯ ನನಗೆ ಭಾರಿ ನಿರಾಶೆ ತಂದಿತ್ತು, ನಾನು ಮಾನಸಿಕವಾಗಿ ಕುಗ್ಗಿಹೋಗಿದ್ದೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).