ಪೆಟ್ರೋಲ್ ಬೆಲೆ ಏರಿಕೆಗೆ ಬಿಗ್ ಬ್ರೇಕ್: ಶೇ. 100 ರಷ್ಟು ಎಥೆನಾಲ್ ವಾಹನಗಳಿಗೆ ಕೇಂದ್ರದ ಗ್ರೀನ್ ಸಿಗ್ನಲ್! Flex-Fuel Vehicles

Flex-fuel vehicles capable of running on 100% ethanol will officially hit the roads in the country.
ದೇಶದಲ್ಲಿ ಅಧಿಕೃತವಾಗಿ ರಸ್ತೆಗಿಳಿಯಲಿವೆ ಶೇ. 100 ರಷ್ಟು ಎಥೆನಾಲ್‌ನಲ್ಲಿ ಚಲಿಸುವ ಫ್ಲೆಕ್ಸ್-ಇಂಧನ (Flex-Fuel) ವಾಹನಗಳು.
Published on: 

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಗೆ ಕಂಗಾಲಾಗಿರುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಪೆಟ್ರೋಲ್ ಬದಲಿಗೆ ನೇರವಾಗಿ ಶೇ. 100ರಷ್ಟು ಎಥೆನಾಲ್ ಇಂಧನ ಬಳಸಿ ಓಡುವಂತಹ 'ಫ್ಲೆಕ್ಸ್-ಇಂಧನ' (Flex-Fuel) ವಾಹನಗಳ ಬಳಕೆಗೆ ಹಸಿರು ನಿಶಾನೆ ತೋರಿಸಲಾಗಿದೆ.

ಈ ಸಂಬಂಧ ಅಕ್ಟೋಬರ್ 23 ರಂದು ಮಹತ್ವದ ನಿಯಮ ರೂಪಿಸಲಾಗಿದ್ದು, ಅಕ್ಟೋಬರ್ 26 ರಂದು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಗೊಂಡ ಬೆನ್ನಲ್ಲೇ ಈ ಹೊಸ ನಿಯಮ ತಕ್ಷಣದಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ. ಈ ಹಿಂದೆ ಏಪ್ರಿಲ್ 27 ರಂದು ಈ ಕುರಿತ ಕರಡು ನಿಯಮಾವಳಿಗಳನ್ನು ಪ್ರಕಟಿಸಿದ್ದ ಕೇಂದ್ರ ಸಾರಿಗೆ ಸಚಿವಾಲಯ, ಸಾರ್ವಜನಿಕರು ಹಾಗೂ ಆಟೋಮೊಬೈಲ್ ಕ್ಷೇತ್ರದ ತಜ್ಞರ ಸಲಹೆ-ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಿದೆ.

ಏನಿದು ಫ್ಲೆಕ್ಸ್-ಇಂಧನ? ಹೇಗೆ ಕೆಲಸ ಮಾಡುತ್ತೆ?

ಫ್ಲೆಕ್ಸ್-ಇಂಧನ ವಾಹನಗಳು ಕೇವಲ ಪೆಟ್ರೋಲ್ ಮಾತ್ರವಲ್ಲದೆ, ಪೆಟ್ರೋಲ್ ಜೊತೆ ಎಥೆನಾಲ್ ಎಷ್ಟು ಬೆರೆತಿದ್ದರೂ, ಅಥವಾ ಸಂಪೂರ್ಣವಾಗಿ ಬರೀ ಎಥೆನಾಲ್ (E100) ಹಾಕಿದರೂ ಸುಲಭವಾಗಿ ಚಲಿಸುತ್ತವೆ. ಈ ವಾಹನಗಳಲ್ಲಿರುವ ಅತ್ಯಾಧುನಿಕ ಸ್ಮಾರ್ಟ್ ಸೆನ್ಸರ್‌ಗಳು ಟ್ಯಾಂಕ್‌ನಲ್ಲಿರುವ ಇಂಧನದ ಗುಣಮಟ್ಟವನ್ನು ತಾವೇ ಗ್ರಹಿಸಿ, ಎಂಜಿನ್ ಹೇಗೆ ಕೆಲಸ ಮಾಡಬೇಕೋ ಹಾಗೆ ಹೊಂದಿಸಿಕೊಳ್ಳುತ್ತವೆ.

ಈಗಾಗಲೇ ಬ್ರೆಜಿಲ್‌ನಲ್ಲಿ 2003 ರಿಂದಲೇ ಈ ತಂತ್ರಜ್ಞಾನ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಕಬ್ಬಿನಿಂದ ತಯಾರಾಗುವ ಎಥೆನಾಲ್‌ನಿಂದಲೇ ಬಹುತೇಕ ವಾಹನಗಳು ರಸ್ತೆಯಲ್ಲಿ ಓಡಾಡುತ್ತವೆ. ಇದೀಗ ಅದೇ ಕ್ರಾಂತಿಯನ್ನು ಭಾರತದಲ್ಲೂ ಜಾರಿಗೆ ತರಲು ಸರ್ಕಾರ ಮುಂದಾಗಿದೆ.

ಈಗಿರುವ ವಾಹನಗಳಿಗೆ ಎಥೆನಾಲ್ ಹಾಕಬಹುದಾ?

ಈ ಹೊಸ ನಿಯಮ ಪ್ರಕಟವಾಗಿದೆ ಎಂದು ಈಗ ನೀವು ಓಡಿಸುತ್ತಿರುವ ಪೆಟ್ರೋಲ್ ಬೈಕ್ ಅಥವಾ ಕಾರಿಗೆ ನೇರವಾಗಿ E85 ಅಥವಾ E100 ಎಥೆನಾಲ್ ಹಾಕುವಂತಿಲ್ಲ! ಸದ್ಯ ಭಾರತದಲ್ಲಿ ಶೇ. 20ರಷ್ಟು ಎಥೆನಾಲ್ ಮಿಶ್ರಿತ (E20) ಪೆಟ್ರೋಲ್ ಬಳಸಲಾಗುತ್ತಿದೆ.

ಸೂಕ್ತ ಕಂಪನಿ ಪ್ರಮಾಣೀಕರಣವಿಲ್ಲದೆ ಹಳೆಯ ಎಂಜಿನ್‌ಗಳಿಗೆ ಪೂರ್ತಿ ಎಥೆನಾಲ್ ಹಾಕಿದರೆ ಎಂಜಿನ್ ಕೆಟ್ಟುಹೋಗುವ ಸಾಧ್ಯತೆ ಇರುತ್ತದೆ. ಕಂಪನಿಗಳಿಂದಲೇ ವಿಶೇಷವಾಗಿ ಪ್ರಮಾಣೀಕರಿಸಲ್ಪಟ್ಟ ಹೊಸ ಫ್ಲೆಕ್ಸ್-ಇಂಧನ ವಾಹನಗಳಿಗೆ ಮಾತ್ರ E85 ಮತ್ತು E100 ಬಳಸಲು ಅನುಮತಿ ದೊರೆಯಲಿದೆ.

Also Read
"ರಾಮಾಯಣ" ದಲ್ಲೂ ಮೊಘಲರ ಸಂಗೀತ ತುರುಕಿದ ಎ.ಆರ್​. ರೆಹಮಾನ್? 'ಮಂಗಳ ರಂಗ್' ಹಾಡಿಗೆ ಭಾರೀ ವಿರೋಧ; ನೆಟ್ಟಿಗರ ಆಕ್ರೋಶ! Mangal Rang
Flex-fuel vehicles capable of running on 100% ethanol will officially hit the roads in the country.

ಪೆಟ್ರೋಲ್​ ವಾಹನಕ್ಕೂ ಎಥೆನಾಲ್​ ವಾಹನಕ್ಕೂ ಏನು ವ್ಯತ್ಯಾಸ!

ಎಥೆನಾಲ್ ಎನ್ನುವುದು ಪೆಟ್ರೋಲ್‌ಗಿಂತ ವಿಭಿನ್ನ ರಾಸಾಯನಿಕ ಗುಣವನ್ನು ಹೊಂದಿದೆ. ಎಥೆನಾಲ್ ಗಾಡಿಗಳ ಇಂಧನ ಪೈಪ್‌ಗಳು, ಇಂಜೆಕ್ಟರ್‌ಗಳು ಹಾಗೂ ರಬ್ಬರ್ ಸೀಲ್‌ಗಳು ತುಕ್ಕು ಹಿಡಿಯದಂತೆ ಮತ್ತು ಕರಗಿ ಹಾಳಾಗದಂತೆ ವಿಶೇಷ ವಸ್ತುಗಳಿಂದ ತಯಾರಾಗುತ್ತದೆ. ಜೊತೆಗೆ ಎಂಜಿನ್ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್ ಕೂಡ ಬದಲಾಗಬೇಕಿದೆ. ಮತ್ತೊಂದು ವಿಚಾರವೆಂದರೆ, ಎಥೆನಾಲ್ ಪೆಟ್ರೋಲ್‌ಗಿಂತ ಸುಮಾರು ಮೂರನೇ ಒಂದು ಭಾಗದಷ್ಟು ಕಡಿಮೆ ಇಂಧನ ಶಕ್ತಿ (Energy) ನೀಡುತ್ತದೆ. ಅಂದರೆ, ಮೈಲೇಜ್ ಕೊಂಚ ಕಡಿಮೆಯಾಗುವುದರಿಂದ ಈ ಗಾಡಿಗಳಿಗೆ ದೊಡ್ಡ ಪೆಟ್ರೋಲ್ ಟ್ಯಾಂಕ್ ಬೇಕಾಗಬಹುದು ಅಥವಾ ಪದೇಪದೇ ಇಂಧನ ತುಂಬಿಸಬೇಕಾಗಿ ಬರಬಹುದು.

ದೇಶಕ್ಕೆ ಸಿಗುವ ಲಾಭವೇನು?

ಭಾರತವು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ವಿದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ದೇಶದಲ್ಲಿ E100 ಸಾಮರ್ಥ್ಯದ ಫ್ಲೆಕ್ಸ್ ಕಾರುಗಳು ಮತ್ತು ಬೈಕ್‌ಗಳು ರಸ್ತೆಗಿಳಿದರೆ ವಿದೇಶಿ ತೈಲದ ಮೇಲಿನ ಅವಲಂಬನೆ ಗಣನೀಯವಾಗಿ ತಗ್ಗಲಿದೆ. ಜೊತೆಗೆ ಸ್ಥಳೀಯ ಕಬ್ಬು ಬೆಳೆಗಾರ ರೈತರಿಗೂ ಬಂಪರ್ ಲಾಭ ಸಿಗಲಿದೆ.

ಈಗಾಗಲೇ ಪ್ರಮುಖ ಆಟೋಮೊಬೈಲ್ ಕಂಪನಿಗಳು ತಮ್ಮ ಹೊಸ ಫ್ಲೆಕ್ಸ್-ಇಂಧನ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಭರದ ಸಿದ್ಧತೆ ನಡೆಸಿವೆ. ಸರ್ಕಾರ ನಿಯಮ ಸಡಿಲಿಸಿ ಅಧಿಕೃತ ದಾರಿ ಮಾಡಿಕೊಟ್ಟಿರುವುದರಿಂದ, ಶೀಘ್ರದಲ್ಲೇ ಭಾರತದ ರಸ್ತೆಗಳಲ್ಲಿ 100% ಎಥೆನಾಲ್ ವಾಹನಗಳ ಓಡಾಟ ಶುರುವಾಗುವುದು ಪಕ್ಕಾಆಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net