

ಮುಂಬೈ: ಭಾರತ ಚಿತ್ರರಂಗದಲ್ಲಿ ನೂತನ ಇತಿಹಾಸ ನಿರ್ಮಿಸುವ ಉದ್ದೇಶದಿಂದ ತಯಾರಾಗಿರುವ ಸಿನಿಮಾ ಎಂದರೆ ಅದು ನಮಿತ್ ಮಲೋತ್ರಾ ನಿರ್ಮಾಣದ 'ರಾಮಾಯಣ' ವಾಗಿದೆ. ಭಾರತದ ನೆಲದ ಕತೆಯನ್ನು ವಿಶ್ವಕ್ಕೆ ಹೇಳುವುದು ನನ್ನ ಕನಸೆಂದು ನಿರ್ಮಾಪಕ ಹೇಳಿಕೊಂಡಿದ್ದು, ಈ ಸಿನಿಮಾದ ಮೊದಲ ಭಾಗ ನವೆಂಬರ್ 5 ದೀಪಾವಳಿಗೆ ಬಿಡುಗಡೆಯಾಗಲಿದೆ.
ಆದರೆ, ಇತ್ತೀಚೆಗೆ ಬಿಡುಗಡೆಯಾದ ಈ ಸಿನಿಮಾದ 'ಮಂಗಳ ರಂಗ್' ಎಂಬ ಹಾಡು ಭಾರೀ ವಿವಾದಕ್ಕೆ ಗುರಿಯಾಗಿದೆ. ಈ ಹಾಡಿನಲ್ಲಿ ಕವ್ವಾಲಿ ಮಾದರಿ ಸಂಗೀತವನ್ನು ಸೇರಿಸಿರುವ ಕಾರಣ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ಗಾಯಕರಾದ ಅರಿಜಿತ್ ಸಿಂಗ್ ಮತ್ತು ಶ್ರೇಯಾ ಘೋಷಾಲ್ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಭಾನುವಾರ ಬಿಡುಗಡೆಯಾದ ಮಂಗಳ ರಂಗ್ ಹಾಡಿನ ಕೆಲ ಸಂದರ್ಭದಲ್ಲಿ ಸೂಫಿ ಸಂಗೀತವನ್ನು ಬಳಸಿರುವುದು ಜನರ ಕೋಪಕ್ಕೆ ಕಾರಣವಾಗಿದೆ. ಈ ಹಾಡಿನಲ್ಲಿ ಸೂಫಿ ಸಂಗೀತದ ಅಗತ್ಯವೇ ಇರಲಿಲ್ಲ. ಇದು ಮಹರ್ಷೀ ವಾಲ್ಮೀಕಿ ರಾಮಾಯಣಕ್ಕೆ ಮಾಡಿದ ಅಪಮಾನ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಒಂದು ಹಾಡನ್ನು ರಚಿಸುವ ಮೊದಲು, ಯಾವ ಸಿನಿಮಾಗೆ? ಯಾವ ಕತೆಗೆ? ಯಾವ ಸಂಪ್ರದಾಯಕ್ಕೆ ಹಾಡನ್ನು ರಚಿಸುತ್ತಿದ್ದೇವೆಂದು ಸಂಗೀತ ನಿರ್ದೇಶಕನಿಗೆ ತಿಳಿದಿರಬೇಕು. ಗಾಯಕರಿಗೂ, ತಾವು ಯಾವ ಸನ್ನಿವೇಶಕ್ಕೆ ಏನನ್ನು ಹಾಡಬೇಕೆಂಬ ಪರಿಜ್ಞಾನ ಇರಬೇಕೆಂದು ಹಾಡನ್ನು ಕೇಳಿದವರು ಹೇಳುತ್ತಿದ್ದಾರೆ.
ಈ ಹಾಡು ಇನ್ನೂ ಕೆಲ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ರಾಮಾಯಣ ಹಿಂದೂ ಧರ್ಮದವರ ಪವಿತ್ರ ಗ್ರಂಥ. ಪ್ರಭು ಶ್ರೀರಾಮನನ್ನು ಸಮಸ್ತ ಹಿಂದೂ ಬಾಂಧವರು ಪೂಜ್ಯನೀಯ ಭಾವನೆಯಲ್ಲಿಟ್ಟು ನೋಡುತ್ತಾರೆ. ಇಂಹತ ಸಿನಿಮಾಗೆ ಮಧ್ಯಪ್ರಾಚ್ಯದಲ್ಲಿ, ಅರಬ್ಬರ, ಮೊಘಲರ ಕಾಲದ ಸಂಗೀತವಾದ ಕವ್ವಾಲಿ ಬಳಕೆ ಸರಿಯಲ್ಲ ಎಂದು ಜಾಡಿಸಿದ್ದಾರೆ. ಪಠ್ಯ ಪುಸ್ತಕಗಳಲ್ಲಿ, ಮೊಘಲರು, ಗೋರಿ-ಘಜನಿಗಳನ್ನು ಹೊಗಳಿದ್ದಾಯಿತು. ಈಗ ರಾಮಯಣದಲ್ಲೂ ಇವರ ಹಾಡನ್ನು ಬಳಕೆ ಮಾಡಬೇಕೆ? ಎಂದು ನೆಟ್ಟಿಗರು ಸಿನಿಮಾ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಲ ಸಮಯದ ಹಿಂದೆ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಛಾವಾ ಸಿನಿಮಾಗೆ ಸಂಬಂಧಿಸಿದಂತೆ, ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಕೂಡ ಧಾರ್ಮಿಕ ಅಸಹಿಷ್ಣುತೆ ಮೂಡುತ್ತಿದೆ ಎಂದು ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈಗ ಮತ್ತೆ ಎ.ಆರ್. ರೆಹಮಾನ್, ರಾಮಾಯಣದಲ್ಲಿ ಕವ್ವಾಲಿ ಬಳಕೆ ಮಾಡಿರುವುದು ನೆಟ್ಟಿಗರ ನೆತ್ತಿಯನ್ನು ಬಿಸಿಮಾಡಿದ್ದು, ಇವನ ಹುಟ್ಟುಗುಣ ಸುಟ್ಟರೂ ಹೋಗದು. ಈ ರೆಹಮಾನ್ ಬೇಕಂತಲೇ, ಈ ಮೊಘಲರ ಸಂಗೀತವನ್ನು ನಮ್ಮ ರಾಮಾಯಣಕ್ಕೆ ತುರುಕಿದ್ದಾನೆಂದು ಕೆಲವರು ಆಕ್ರೋಶ ಹೊರಹಾಕುತ್ತಿದ್ದಾರೆ, (ಏಜೆನ್ಸೀಸ್).