ಮಮತಾಗೆ ಭಾರಿ ಮುಖಭಂಗ: ಐ-ಪಿಎಸಿ ಮೇಲಿನ ಇಡಿ ದಾಳಿ ವಿರೋಧಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್! Mamata Banerjee

ಮಮತಾ ಬ್ಯಾನರ್ಜಿ, ಇಡಿ, ಕಲ್ಕತ್ತಾ ಹೈಕೋರ್ಟ್
ಮಮತಾ ಬ್ಯಾನರ್ಜಿ, ಇಡಿ, ಕಲ್ಕತ್ತಾ ಹೈಕೋರ್ಟ್
Published on

ಪ್ರಮುಖ ಮುಖ್ಯಾಂಶಗಳು

  • ಮಮತಾ ಬ್ಯಾನರ್ಜಿ ಪಕ್ಷ ಟಿಎಂಸಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಕಲ್ಕತ್ತಾ ಹೈಕೋರ್ಟ್
  • ಇಡಿ ದಾಳಿ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿ
  • ಈ ಆದೇಶ ಮಮತಾ ದುರಾಡಳಿತಕ್ಕೆ ನ್ಯಾಯಾಲಯದ ಬ್ರೇಕ್​ ಎಂದ ಬಿಜೆಪಿ
ಕಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಯ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ಬುಧವಾರ(ಜ.14) ವಜಾಗೊಳಿಸಿದೆ.
ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಪಕ್ಷವು ರಾಜಕೀಯ ಪ್ರೇರಿತ ಈ ದಾಳಿಯು ತನ್ನ ರಾಜಕೀಯ ಗೌಪ್ಯ ದತ್ತಾಂಶಗಳನ್ನು ತನಿಖಾ ಸಂಸ್ಥೆ ವಶಪಡಿಸಿಕೊಂಡಿದೆ ಎಂದು ಆರೋಪಿಸಿದ್ದರು. ಆದರೆ, ಐ-ಪಿಎಸಿ ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರಿಂದ ಏನನ್ನೂ ಮುಟ್ಟುಗೋಲು ಹಾಕಿಕೊಂಡಿಲ್ಲ ಎಂದು ಇಡಿ ಕಲ್ಕತ್ತಾ ಹೈಕೋರ್ಟ್‌ಗೆ ತಿಳಿಸಿದೆ.
ವಿಚಾರಣೆಯ ಸಮಯದಲ್ಲಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌.ವಿ. ರಾಜು, ತನಿಖಾ ಸಂಸ್ಥೆಯಿಂದ ಏನನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿಲ್ಲ ಮತ್ತು ಕಡತಗಳು ಮತ್ತು ಸಾಧನಗಳನ್ನು ತೆಗೆದುಕೊಂಡು ಹೋಗಿದ್ದು ಮುಖ್ಯಮಂತ್ರಿಯೇ ಎಂದು ಪೀಠಕ್ಕೆ ತಿಳಿಸಿದರು. ಜನವರಿ 8 ರಂದು ಐ-ಪಿಎಸಿ ಅಥವಾ ಅದರ ನಿರ್ದೇಶಕರ ಕಚೇರಿಗಳಿಂದ ಯಾವುದೇ ಮುಟ್ಟುಗೋಲು ಪ್ರಕ್ರಿಯೆ ನಡೆದಿಲ್ಲ ಎಂದು ಮನಗಂಡು ನ್ಯಾಯಮೂರ್ತಿ ಘೋಷ್ ಅವರ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿತು.
ಈ ಅರ್ಜಿಯಲ್ಲಿ ಇತ್ಯರ್ಥಪಡಿಸಲು ಏನೂ ಉಳಿದಿಲ್ಲ ಹೀಗಾಗಿ ಟಿಎಂಸಿ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ ಎಂದು ಪೀಠ ಹೇಳಿದೆ. ಈ ವಿಷಯದ ಕುರಿತು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದರಿಂದ ಈ ವಿಷಯವನ್ನು ಮುಂದೂಡಬೇಕೆಂದು ಇಡಿ ಕೋರಿತು. ಈ ಮಧ್ಯೆ, ಟಿಎಂಸಿ ಪರ ವಕೀಲೆ ಮೇನಕಾ ಗುರುಸ್ವಾಮಿ, ಪಕ್ಷವು ತನ್ನ ದತ್ತಾಂಶದ ರಕ್ಷಣೆಯನ್ನು ಮಾತ್ರ ಬಯಸುತ್ತಿದೆ ಎಂದು ವಾದ ಮಂಡಿಸಿದರು.

ಐ-ಪಿಎಸಿ ಕಚೇರಿಯ ಮೇಲೆ ಇಡಿ ದಾಳಿ

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳ ಪ್ರಕಾರ, ಅನುಪ್ ಮಜೀಗೆ ಸಂಬಂಧಿಸಿದ ಪಶ್ಚಿಮ ಬಂಗಾಳದ ಆರು ಮತ್ತು ದೆಹಲಿಯ ನಾಲ್ಕು ಆವರಣಗಳಲ್ಲಿ ಇಡಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತು. ಇದರಲ್ಲಿ ಐ-ಪಿಎಸಿ ಕಚೇರಿ ಮತ್ತು ಜೈನ್ ಅವರ ನಿವಾಸವೂ ಸೇರಿತ್ತು.
ಐ-ಪಿಎಸಿ ಕಚೇರಿ ಮತ್ತು ಜೈನ್ ಅವರ ನಿವಾಸದ ಮೇಲಿನ ದಾಳಿಗಳು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವಿನ ಘರ್ಷಣೆಗೆ ಕಾರಣವಾಯಿತು. ಏಕೆಂದರೆ ಸಿಎಂ ಮಮತಾ ಬ್ಯಾನರ್ಜಿ ದಾಳಿ ನಡೆಯುತ್ತಿದ್ದ ಪ್ರದೇಶಕ್ಕೆ ಧಾವಿಸಿ ರಾಜಕೀಯ ದ್ವೇಷದ ಆರೋಪ ಹೊರಿಸಿದರು.
ಬಿಜೆಪಿ ನೇತೃತ್ವದ ಕೇಂದ್ರವು ಟಿಎಂಸಿಯ ಆಂತರಿಕ ದಾಖಲೆಗಳು, ಹಾರ್ಡ್ ಡಿಸ್ಕ್‌ಗಳು ಮತ್ತು ಅದರ ಚುನಾವಣಾ ಕಾರ್ಯತಂತ್ರಕ್ಕೆ ಸಂಬಂಧಿಸಿದ ಸೂಕ್ಷ್ಮ ಡೇಟಾವನ್ನು ವಶಪಡಿಸಿಕೊಂಡು ಚುನಾವಣೆಗೆ ಮುಂಚಿತವಾಗಿ ತನ್ನ ಪಕ್ಷವನ್ನು ಗುರಿಯಾಗಿಸಿಕೊಂಡಿದೆ ಎಂದು ಅವರು ಆರೋಪಿಸಿದರು.
ಕಳೆದ ವಾರ ಪತ್ರಿಕಾ ಹೇಳಿಕೆಯಲ್ಲಿ ಬ್ಯಾನರ್ಜಿ ಕೋಲ್ಕತ್ತಾದ ಲೌಡನ್ ರಸ್ತೆಯಲ್ಲಿರುವ ಜೈನ್ ಅವರ ನಿವಾಸಕ್ಕೆ ದಾಳಿಯ ಸಮಯದಲ್ಲಿ ಪ್ರವೇಶಿಸಿ ಪ್ರಮುಖ ಸಾಕ್ಷ್ಯಗಳನ್ನು ಕದ್ದೊಯ್ದರು ಮತ್ತು ಐ-ಪಿಎಸಿ ಕಚೇರಿಯಲ್ಲೂ ಅದೇ ಕ್ರಮವನ್ನು ಅನುಸರಿಸಿದರು ಎಂದು ಇಡಿ ಆರೋಪಿಸಿತ್ತು.
ಒಂದು ದಿನದ ನಂತರ, ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಇಡಿ ತನ್ನ ಪಕ್ಷದ ಆಂತರಿಕ ಕಾರ್ಯತಂತ್ರವನ್ನು ಕದಿಯಲು ಬಿಜೆಪಿಯ ರಾಜಕೀಯ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಆರೋಪಿಸಿದ್ದರು. ಕೇಂದ್ರ ಸಂಸ್ಥೆಯ ದಾಳಿಯ ಸಮಯದಲ್ಲಿ ಐ-ಪಿಎಸಿಗೆ ಸಂಬಂಧಿಸಿದ ಆವರಣವನ್ನು ತಲುಪುವಲ್ಲಿ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದರು. ನಂತರ, ಮಮತಾ ಬ್ಯಾನರ್ಜಿ ತನ್ನ ತನಿಖೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಇಡಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತು. ತನ್ನ ಗೌಪ್ಯ ದತ್ತಾಂಶವನ್ನು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಿ ಟಿಎಂಸಿ ಕೂಡ ಅರ್ಜಿ ಸಲ್ಲಿಸಿತ್ತು.

ಹೈಕೋರ್ಟ್ ಆದೇಶಕ್ಕೆ ಬಿಜೆಪಿ ಪ್ರತಿಕ್ರಿಯೆ

ಹೈಕೋರ್ಟ್ ಆದೇಶದ ನಂತರ ಬಿಜೆಪಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯನ್ನು ಬಲವಾಗಿ ಟೀಕಿಸುತ್ತಾ, ನ್ಯಾಯಾಲಯದ ನಿರ್ಧಾರವು ಮಮತಾ ಅವರ ದುರಾಡಳಿಕ್ಕೆ ಖಂಡನೆಯಾಗಿದೆ ಎಂದು ಕರೆದಿದೆ.
ಈ ತೀರ್ಪು ಮುಖ್ಯಮಂತ್ರಿಗೆ ಭಾರಿ ಮುಜುಗರ ತಂದಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ. X ನಲ್ಲಿ ಪೋಸ್ಟ್ ಮಾಡಿದ ಮಾಳವೀಯ, ಕಲ್ಲಿದ್ದಲು ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ನಡೆಯುತ್ತಿರುವ ಇಡಿ ದಾಳಿಯಲ್ಲಿ ಬ್ಯಾನರ್ಜಿ ಹಸ್ತಕ್ಷೇಪ ಮಾಡಿದ್ದಾರೆ ಮತ್ತು ಕೇಂದ್ರ ಸಂಸ್ಥೆಗಳನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾಂವಿಧಾನಿಕ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಅಥವಾ ಸಾರ್ವಜನಿಕ ನಾಟಕೀಯತೆಯಿಂದ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ನ ಆದೇಶವು ಪುನರುಚ್ಚರಿಸಿದೆ ಎಂದು ಮಾಳವೀಯ ಹೇಳಿದರು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net