ಸಾವರ್ಕರ್ ಫೋಟೋ ತೆರವು ಅರ್ಜಿ ವಜಾ: ನಿವೃತ್ತ ಐಆರ್​ಎಸ್​ ಅಧಿಕಾರಿಗೆ ಸುಪ್ರೀಂ ತರಾಟೆ| Savarkar

ವಿನಾಯಕ ದಾಮೋದರ ಸಾವರ್ಕರ್‌, ಸುಪ್ರೀಂ ಕೋರ್ಟ್
ವಿನಾಯಕ ದಾಮೋದರ ಸಾವರ್ಕರ್‌, ಸುಪ್ರೀಂ ಕೋರ್ಟ್
Published on

ಪ್ರಮುಖ ಮುಖ್ಯಾಂಶಗಳು

  • ಸಂಸತ್ ಮತ್ತು ಸಾರ್ವಜನಿಕ ಸ್ಥಳದಲ್ಲಿರುವ ವಿ.ಡಿ. ಸಾವರ್ಕರ್​ ಭಾವಚಿತ್ರ ತೆರವಿಗೆ ಅರ್ಜಿ
  • ಅರ್ಜಿ ಹಿಂಪಡೆಯುತ್ತಿರೋ? ದಂಡ ವಿಧಿಸಬೇಕೋ? ಎಂದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್
  • ನಿಮ್ಮ ನಿವೃತ್ತಿ ಜೀವನವನ್ನು ಸಕರ್ಮಗಳಿಂದ ಕಳೆಯಿರಿ ಎಂದು ಕಿವಿ ಹಿಂಡಿದ ಸುಪ್ರೀಂ ಕೋರ್ಟ್​
ನವದೆಹಲಿ: ಸಂಸತ್‌ ಭವನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಹಿಂದುತ್ವ ಚಿಂತಕ ವಿನಾಯಕ ದಾಮೋದರ ಸಾವರ್ಕರ್‌ (Savarkar) ಅವರ ಭಾವಚಿತ್ರ ತೆರವುಗೊಳಿಸಬೇಕೆಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.
ಅರ್ಜಿಯ ವಿಚಾರಣೆ ಮುಂದುವರೆಸುವಂತೆ ಕೋರಿದರೆ ಅರ್ಜಿದಾರರಾದ ನಿವೃತ್ತ ಭಾರತೀಯ ಕಂದಾಯ ಸೇವೆ ಅಧಿಕಾರಿ ಬಿ. ಬಾಲಮುರಗನ್ ಅವರಿಗೆ ಭಾರೀ ದಂಡ ವಿಧಿಸಲಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರ ನ್ಯಾಯಪೀಠ ಎಚ್ಚರಿಕೆ ನೀಡಿದೆ. ಬಳಿಕ ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು.
ಇದಕ್ಕೆ ಸಮ್ಮತಿಸಿದ ಸಿಜೆಐ ಸೂರ್ಯಕಾಂತ್‌, ದಯವಿಟ್ಟು ಇಂತಹ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳಬೇಡಿ. ನಿಮ್ಮ ನಿವೃತ್ತ ಜೀವನ ಆನಂದಿಸಿ. ಸಮಾಜದಲ್ಲಿ ಯಾವುದಾದರೂ ಸೃಜನಾತ್ಮಕ ಪಾತ್ರ ನಿರ್ವಹಿಸಿ, ಎಂದು ಹೇಳಿದರು. ಅರ್ಜಿ ಹಿಂಪಡೆಯಲಾಗಿದೆ ಎಂದು ಪರಿಗಣಿಸಿ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.
ಇದನ್ನೂ ಓದಿ:
ಭಾರತೀಯ ಸಂಸತ್ತಿನ ಕೇಂದ್ರ ಸಭಾಂಗಣ ಹಾಗೂ ಅಧಿಕೃತ ನಿವಾಸ ಒಳಗೊಂಡಂತೆ ವಿವಿಧ ಸಾರ್ವಜನಿಕ ಸ್ಥಳಗಳಿಂದ ಸಾವರ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸುವಂತೆ ನಿರ್ದೇಶನ ನೀಡಬೇಕೆಂದು ಬಾಲಮುರುಗನ್‌ ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದ್ದರು.
ಹತ್ಯೆ ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳಂತಹ ಗಂಭೀರ ಅಪರಾಧಗಳಲ್ಲಿ ತೊಡಗಿದ್ದ ಸಾವರ್ಕರ್​ ರೀತಿಯ ವ್ಯಕ್ತಿಗಳಿಗೆ ಸರ್ಕಾರ ಗೌರವಿಸದಂತೆ ತಡೆಯಬೇಕು ಎಂದು ಅವರು ಕೋರಿದ್ದರು. ಪ್ರಕರಣ ಆಲಿಸುವ ವೇಳೆ ನ್ಯಾ. ಸೂರ್ಯಕಾಂತ್‌ ಅರ್ಜಿದಾರರ ಪೂರ್ವಾಪರಗಳನ್ನು ವಿಚಾರಿಸಿ, ನಿಮಗೆ ಬಡ್ತಿ ನಿರಾಕರಿಸಿದ ಸಂದರ್ಭಗಳು ಯಾವುವು? ನಿಮ್ಮ ವಿರುದ್ಧ ಭ್ರಷ್ಟಾಚಾರ ಆರೋಪಗಳಿವೆಯೇ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಬಾಲಮುರುಗನ್‌ ಅವರು ತಮ್ಮ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ. 2009ರಲ್ಲಿ ಶ್ರೀಲಂಕಾದಲ್ಲಿ ಶಾಂತಿಗಾಗಿ ಉಪವಾಸ ಸತ್ಯಾಗ್ರಹ ನಡೆಸಿದ ನಂತರ ತಮ್ಮ ವಿರುದ್ಧ ಇಲಾಖಾ ಕ್ರಮ ಜರುಗಿಸಲಾಗಿತ್ತು ಎಂದರು. ನ್ಯಾ. ಕಾಂತ್‌ ಇಂತಹ ಕ್ಷುಲ್ಲಕ ಅರ್ಜಿಗಳು ನಿಮ್ಮ ಮನಸ್ಥಿತಿಯನ್ನು ಹೇಳುತ್ತದೆ ಎಂದರು. ದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ ಎದುರು ಹಾಜರಾಗಲು ಆರ್ಥಿಕ ತೊಂದರೆಗಳಿವೆ, ಆದ್ದರಿಂದ ಚೆನ್ನೈನಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಾದ ಮಂಡನೆಗೆ ಅವಕಾಶ ನೀಡುವಂತೆ ಬಾಲಮುರುಗನ್‌ ಮನವಿ ಮಾಡಿದ್ದರು.
ಆಗ ನ್ಯಾ. ಸೂರ್ಯಕಾಂತ್‌, ನೀವು ಐಆರ್‌ಎಸ್ ಅಧಿಕಾರಿಯಾಗಿದ್ದಿರಿ. ದೆಹಲಿಗೆ ಬಂದು ಸ್ವತಃ ಹಾಜರಾಗಲು ನಿಮಗೆ ಸಾಮರ್ಥ್ಯವಿದೆ. ನೀವು ನಿಮ್ಮನ್ನು ಏನೆಂದುಕೊಂಡಿದ್ದೀರಿ? ಎಂದು ಕಟುವಾಗಿ ಪ್ರತಿಕ್ರಿಯಿಸಿದರು. ಬಲಮುರಗನ್​, ಇದು ಸಾರ್ವಜನಿಕ ಹಿತಾಸಕ್ತಿಯಿಂದ ಸಲ್ಲಿಸಿದ ಅರ್ಜಿಯಾಗಿದ್ದು ಇದಕ್ಕೆ ನೀವು ನ್ಯಾಯ ದೊರಕಿಸಬೇಕು ಎಂದಾಗ, ಕೆರಳಿದ ನ್ಯಾಯಮೂರ್ತಿಗಳು ಮೊದಲು ನೀವು ಲಕ್ಷ ದಂಡ ಜಮಾ ಮಾಡಿ, ಆಗ ಸಾರ್ವಜನಿಕ ಹಿತಾಸಕ್ತಿ ಎಂದರೇನು ಎಂಬುದನ್ನು ತಿಳಿಸಿಕೊಡುತ್ತೇವೆ.
ನೀವು ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥ ಮಾಡುತ್ತಿದ್ದೀರಿ. ನಿಮಗೆ ಬೇಕಿರುವುದು ಏನು? ನಾವು ದಂಡ ವಿಧಿಸಬೇಕೆ, ಅಥವಾ ನೀವು ಸುಮ್ಮನೆ ಅರ್ಜಿ ಹಿಂಪಡೆಯುತ್ತೀರಾ? ಎಂದು ಕೇಳಿದರು. ಕೊನೆಗೆ ಅರ್ಜಿ ಹಿಂಪಡೆಯುವುದಾಗಿ ಬಾಲಮುರಗನ್‌ ತಿಳಿಸಿದ ಹಿನ್ನೆಲೆಯಲ್ಲಿ ಪ್ರಕರಣ ಅರ್ಜಿ ವಜಾಗೊಳಿಸಲಾಯಿತು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net