ಪ್ರಜಾಪ್ರಭುತ್ವ ಉಳಿಸಿ ಅಲ್ಲ, ವಂಶಪಾರಂಪರ್ಯ ಉಳಿಸಿ ಅಭಿಯಾನ: ಅ. 02ರ ಇಂಡಿಯಾ ಕೂಟದ ಅಭಿಯಾನಕ್ಕೆ ಬಿಜೆಪಿ ವ್ಯಂಗ್ಯ |BJP

ಮತಗಳ್ಳತನ ಆರೋಪ ಮತ್ತು ಎಸ್​ಐಆರ್ ವಿವಾದಕ್ಕೆ ಸಂಬಂಧಿಸಿದಂತೆ ಅ. 02ರಂದು ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಪ್ರಜಾಪ್ರಭುತ್ವ ಉಳಿಸಿ ಅಭಿಯಾನಕ್ಕೆ ವ್ಯಂಗ್ಯವಾಡಿರುವ ಬಿಜೆಪಿ, ಅದು ಪ್ರಜಾಪ್ರಭುತ್ವ ಉಳಿಸಿ ಅಲ್ಲ, ವಂಶಪಾರಂಪರ್ಯ ಉಳಿಸಿ ಅಭಿಯಾನ ಎಂದು ಕರೆದಿದೆ.
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್
Published on: 

ನವದೆಹಲಿ: ಮತಗಳ್ಳತನ ಆರೋಪ ಮತ್ತು ಎಸ್​ಐಆರ್ ವಿವಾದಕ್ಕೆ ಸಂಬಂಧಿಸಿದಂತೆ ಅ. 02ರಂದು ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಪ್ರಜಾಪ್ರಭುತ್ವ ಉಳಿಸಿ ಅಭಿಯಾನಕ್ಕೆ ವ್ಯಂಗ್ಯವಾಡಿರುವ ಬಿಜೆಪಿ, ಅದು ಪ್ರಜಾಪ್ರಭುತ್ವ ಉಳಿಸಿ ಅಲ್ಲ, ವಂಶಪಾರಂಪರ್ಯ ಉಳಿಸಿ ಅಭಿಯಾನ ಎಂದು ಕರೆದಿದೆ.

ನವದೆಹಲಿಯಲ್ಲಿರುವ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಬುಧವಾರ(ಸೆ. 30) ಇಂಡಿಯಾ ಮೈತ್ರಿಕೂಟದ ಸಭೆ ನಡೆದಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಸಿಎಂ ಓಮರ್ ಅಬ್ದುಲ್ಲಾ ಸೇರಿ ಮೈತ್ರಿಕೂಟದ ಹಲವು ನಾಯಕರು ಭಾಗವಹಿಸಿದ್ದರು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಜಂಟಿ ಪ್ರತಿಭಟನೆ ನಡೆಸಲು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಒಕ್ಕೂಟವು, ಪ್ರಜಾಪ್ರಭುತ್ವ ಉಳಿಸಿ ಅಭಿಯಾನ ಸೇರಿ ಸರಣಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಘೋಷಿಸಿದೆ.

Also Read
ಚುನಾವಣಾ ಆಯೋಗದ ವಿರುದ್ಧ ಇಂಡಿಯಾ ಒಕ್ಕೂಟದ ಒಗ್ಗಟ್ಟಿನ ಸಮರ: ಅಕ್ಟೋಬರ್ 2 ರಿಂದ ಪ್ರಜಾಪ್ರಭುತ್ವ ಉಳಿಸಿ ಬೃಹತ್ ಅಭಿಯಾನ! | INDIA Bloc
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಇಂಡಿಯಾ ಕೂಟದ ಸಭೆ ಬಳಿಕ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿರುವ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಮುಂಬರುವ ಚುನಾವಣೆಗಳಲ್ಲಿನ ಸೋಲಿಗೆ ಈಗಲೇ ಮುಂಗಡ ನೆಪವನ್ನು ಸೃಷ್ಟಿಸಲು ಪ್ರತಿಪಕ್ಷಗಳು ಚುನಾವಣೆ ಆಯೋಗದ ಮೇಲೆ ದಾಳಿ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಯಾವುದೇ ದೂರದೃಷ್ಟಿಯಿಲ್ಲ, ಶೇಕಡಾ 100ರಷ್ಟು ಹತಾಶೆ ಮತ್ತು ಸೋಲಿಗೆ ಮುಂಚಿತವಾಗಿಯೇ ಸಿದ್ಧಪಡಿಸಿಕೊಂಡಿರುವ ನೆಪ. ಮುಂಬರುವ ಚುನಾವಣೆಗಳಿಗೆ ಮುನ್ನವೇ ಅವರು ತಮ್ಮ ಸೋಲಿಗೆ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಈಗಲೇ ಸೋಲಿಗೆ ನೆಪಗಳನ್ನು ಹುಡುಕುತ್ತಿದ್ದಾರೆ. ಅ. 2ರಿಂದ 8ರವರೆಗೆ ಪ್ರಜಾಪ್ರಭುತ್ವ ಉಳಿಸಿ ಎಂಬ ಅಭಿಯಾನ ಘೋಷಿಸಿದ್ದಾರೆ. ಇದು ಪ್ರಜಾಪ್ರಭುತ್ವ ಉಳಿಸಿ ಅಭಿಯಾನವಲ್ಲ, ಬದಲಾಗಿ ಇದು ವಂಶಪಾರಂಪರ್ಯ ಉಳಿಸಿ ಅಭಿಯಾನ ಎಂದಿದ್ದಾರೆ.

Also Read
ಬಿಜೆಪಿ ಅಧಿಕಾರಕ್ಕೆ ಬಂದ್ರೆ 2 ವರ್ಷಗಳಲ್ಲಿ ಡ್ರಗ್ಸ್ ಮುಕ್ತ ಪಂಜಾಬ್: ಸ್ವತಃ ಕುಡಿಯುವ ವ್ಯಕ್ತಿಯಿಂದ ಸಾಧ್ಯವಿಲ್ಲ: ಸಿಎಂ ಮಾನ್ ವಿರುದ್ಧ ಅಮಿತ್ ಶಾ ಕಿಡಿ | Amit Shah
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಇಂದು ಇಂಡಿಯಾ ಮೈತ್ರಿಕೂಟದ ಸಭೆ ನಡೆಯಿತು, ಆದರೆ ಸಭೆಗೂ ಮುನ್ನವೇ ಆ ಮೈತ್ರಿಕೂಟವು ಛಿದ್ರಗೊಂಡಿದೆ. ಉತ್ತರ ಪ್ರದೇಶದಲ್ಲಿ ಚುನಾವಣೆಗಳು ನಡೆಯಬೇಕಿದೆ. ಅಲ್ಲಿ ಅಖಿಲೇಶ್ ಯಾದವ್ ಎಲ್ಲಿದ್ದರು? ಈ ವಿಷಯವು ಅಷ್ಟು ಮುಖ್ಯವಾಗಿದ್ದಲ್ಲಿ, ಅಖಿಲೇಶ್ ಯಾದವ್ ಅಲ್ಲಿ ಯಾಕೆ ಇರಲಿಲ್ಲ? ಸ್ಟಾಲಿನ್ ಎಲ್ಲಿದ್ದಾರೆ? ಕಾಂಗ್ರೆಸ್ ಇರುವ ಕಡೆ ನಾವು ಕುಳಿತುಕೊಳ್ಳುವುದಿಲ್ಲ ಎಂದು ಡಿಎಂಕೆ ಈಗಾಗಲೇ ಹೇಳಿದೆ.

ಅರವಿಂದ್ ಕೇಜ್ರಿವಾಲ್ ಎಲ್ಲಿದ್ದಾರೆ? ಉದ್ಧವ್ ಠಾಕ್ರೆ ಅವರು ಖುದ್ದಾಗಿ ಹಾಜರಿಲ್ಲ. ಪವಾರ್ ಮತ್ತು ಹೇಮಂತ್ ಸೊರೇನ್ ಜೀ ಅವರ ಬಗ್ಗೆ ನಮಗೆ ತಿಳಿದಿಲ್ಲ. ಇಂಡಿಯಾ ಕೂಟದ ಸ್ಥಿತಿ ಹೇಗಾಗಿದೆಯೆಂದರೆ, ಒಂದು ಹೃದಯವು ಸಾವಿರಾರು ತುಂಡುಗಳಾಗಿ ಛಿದ್ರಗೊಂಡು, ಒಂದೊಂದು ತುಂಡು ಒಂದೊಂದು ಕಡೆ ಬಿದ್ದಂತಾಗಿದೆ. ವಾಸ್ತವವೇನೆಂದರೆ, ರಾಹುಲ್ ಗಾಂಧಿಯವರನ್ನು ತಮ್ಮ ನಾಯಕರನ್ನಾಗಿ ಒಪ್ಪಿಕೊಳ್ಳಲು ಮೈತ್ರಿಕೂಟ ಸಿದ್ಧವಿಲ್ಲ ಎಂದು ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net