ವಿಪಕ್ಷಗಳಿಗೆ ದೊಡ್ಡ ಆಘಾತ ಆಗಿದೆ! ಸದನದಲ್ಲಿ ಡಿಸಿಎಂ ಶಿಂಧೆ ಆರ್ಭಟಕ್ಕೆ ಉದ್ಧವ್ ಠಾಕ್ರೆ ಬಣ ಸೈಲೆಂಟ್​! Eknath Shinde

ವಿಪಕ್ಷಗಳಿಗೆ ದೊಡ್ಡ ಆಘಾತ ಆಗಿದೆ! ಸದನದಲ್ಲಿ ಡಿಸಿಎಂ ಶಿಂಧೆ ಆರ್ಭಟಕ್ಕೆ ಉದ್ಧವ್ ಠಾಕ್ರೆ ಬಣ ಸೈಲೆಂಟ್​!
ವಿಪಕ್ಷಗಳಿಗೆ ದೊಡ್ಡ ಆಘಾತ ಆಗಿದೆ! ಸದನದಲ್ಲಿ ಡಿಸಿಎಂ ಶಿಂಧೆ ಆರ್ಭಟಕ್ಕೆ ಉದ್ಧವ್ ಠಾಕ್ರೆ ಬಣ ಸೈಲೆಂಟ್​!
Published on
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಶಿವಸೇನೆಯ ಆಂತರಿಕ ಕದನ ಈಗ ವಿಧಾನಸಭೆಯ ಅಂಗಳ ತಲುಪಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಹಸಿಬಿಸಿ ಚರ್ಚೆಗೆ ಕಾರಣವಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ಆರು ಜನ ಲೋಕಸಭಾ ಸಂಸದರು ಏಕನಾಥ್ ಶಿಂಧೆ(Eknath Shinde) ಪಾಳಯಕ್ಕೆ ಸೇರಿದ ಮರುದಿನವೇ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರೋಧ ಪಕ್ಷಗಳ ವಿರುದ್ಧ ಸದನದಲ್ಲೇ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಶಿಂಧೆ, ವಿರೋಧ ಪಕ್ಷದವರಿಗೆ ಈಗ ದೊಡ್ಡ ಆಘಾತ ತಗುಲಿದೆ. ಈ ಭಾರಿ ಪೆಟ್ಟಿನಿಂದಾಗಿ ಅವರು ತಮ್ಮ ಮಾನಸಿಕ ಸಮತೋಲನವನ್ನೇ ಕಳೆದುಕೊಂಡಿದ್ದಾರೆ. ಮುಂದೆ ಇಂತಹ ಇನ್ನು ಹಲವು ಬಿಗ್ ಶಾಕ್‌ಗಳು ಕಾದಿವೆ ಎಂದು ಶಿಂಧೆ ಗುಡುಗಿದ್ದಾರೆ. ಸದ್ಯ ನಡೆಯುತ್ತಿರುವ ಮಹಾರಾಷ್ಟ್ರ ಜಂಟಿ ಮುಂಗಾರು ಅಧಿವೇಶನದಲ್ಲಿ ಈ ರಾಜಕೀಯ ಜಟಾಪಟಿ ತಾರಕಕ್ಕೇರಿದೆ.

ಸದನದಲ್ಲಿ ಹೈಡ್ರಾಮಾ: ವಿಪಕ್ಷಗಳ ಸಭಾತ್ಯಾಗ

ಮಂಗಳವಾರದ ಅಧಿವೇಶನದ ವೇಳೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಕೈಗೊಂಡ ಒಂದು ನಿರ್ಧಾರ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು. ನಿಯಮದ ಪ್ರಕಾರ ಆಯಾ ಇಲಾಖೆಯ ಸಚಿವರೇ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಬೇಕು. ಆದರೆ, ಸ್ಪೀಕರ್ ಅವರು ಒಂದು ಇಲಾಖೆಯ ಪ್ರಶ್ನೆಗೆ ಮತ್ತೊಂದು ಇಲಾಖೆಯ ಸಚಿವರು ಉತ್ತರಿಸಲು ಅನುಮತಿ ನೀಡಿದರು.
ಇದನ್ನು ತೀವ್ರವಾಗಿ ವಿರೋಧಿಸಿದ ಶಿವಸೇನೆ (UBT), ಕಾಂಗ್ರೆಸ್ ಮತ್ತು ಶರದ್ ಪವಾರ್ ಬಣದ ಎನ್‌ಸಿಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸರ್ಕಾರದ ನಡೆ ಸಂಸದೀಯ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಒಟ್ಟಾಗಿ ಸಭಾತ್ಯಾಗ ಮಾಡಿದ್ದಾರೆ.

"ಜನರ ಸಮಸ್ಯೆಗಳಿಲ್ಲ, ಇವರದ್ದು ಬರೀ ಬೊಗಳೆ": ಶಿಂಧೆ ವಾಗ್ದಾಳಿ

ವಿಪಕ್ಷಗಳ ಸಭಾತ್ಯಾಗದ ಬೆನ್ನಲ್ಲೇ ಸದನದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ವಿಪಕ್ಷಗಳ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ವಿರೋಧ ಪಕ್ಷದವರಿಗೆ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಯಾವುದೇ ಆಸಕ್ತಿಯಿಲ್ಲ. ಅವರ ಬಳಿ ನೈಜ ಮುಖ್ಯಾಂಶಗಳೇ ಉಳಿದಿಲ್ಲ. ಅದಕ್ಕೇ ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿ, ಬರೀ ಅರ್ಥವಿಲ್ಲದ ಬೊಗಳೆ ದಾಸ್ತಾನ್ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ನೇರವಾಗಿ ಉದ್ಧವ್ ಠಾಕ್ರೆ ಅಥವಾ ಆದಿತ್ಯ ಠಾಕ್ರೆ ಅವರ ಹೆಸರು ಹೇಳದಿದ್ದರೂ, ಸೋಮವಾರವಷ್ಟೇ ಆರು ಜನ ಸಂಸದರನ್ನು ಕಳೆದುಕೊಂಡು ಕಂಗಾಲಾಗಿರುವ ಠಾಕ್ರೆ ಕುಟುಂಬವನ್ನೇ ಗುರಿಯಾಗಿಸಿ ಶಿಂಧೆ ಈ ಬಾಣ ಬಿಟ್ಟಿರುವುದು ಸ್ಪಷ್ಟವಾಗಿತ್ತು. ನಮ್ಮ ಸರ್ಕಾರದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಆಗಲಿ ಅಥವಾ ನಾನಾಗಲಿ ಸದಾ ಸದನದಲ್ಲಿರುತ್ತೇವೆ. ಶಾಸಕರಿಗೆ ಸಂಪೂರ್ಣ ಮಾಹಿತಿ ಸಿಗಲಿ ಎಂಬ ಕಾರಣಕ್ಕೇ ಬೇರೆ ಸಚಿವರಿಗೂ ಉತ್ತರಿಸುವ ಜವಾಬ್ದಾರಿ ಹಂಚಲಾಗಿದೆ. ಇದರಲ್ಲಿ ತಪ್ಪೇನಿದೆ ಎಂದು ಶಿಂಧೆ ಪ್ರಶ್ನಿಸಿದ್ದಾರೆ.

ಸಂಸದೀಯ ನಿಯಮ ಉಲ್ಲಂಘನೆ: ಆದಿತ್ಯ ಠಾಕ್ರೆ ಆಕ್ಷೇಪ

ಸರ್ಕಾರದ ಈ ನಡೆಗೆ ಶಿವಸೇನೆ (UBT) ಯುವ ನಾಯಕ ಆದಿತ್ಯ ಠಾಕ್ರೆ ಮತ್ತು ಎನ್‌ಸಿಪಿ ನಾಯಕ ಜಯಂತ್ ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವ ಇಲಾಖೆಯ ಪ್ರಶ್ನೆಯೋ, ಅದೇ ಸಚಿವರು ಉತ್ತರಿಸುವುದು ಇಷ್ಟು ದಿನ ನಡೆದುಕೊಂಡು ಬಂದಿರುವ ಸಂಸದೀಯ ಸಂಪ್ರದಾಯವಾಗಿದೆ. ಆದರೆ ಈ ಸರ್ಕಾರ ತನಗೆ ಬೇಕಾದಂತೆ ನಿಯಮಗಳನ್ನು ಬದಲಾಯಿಸುತ್ತಿದೆ ಎಂದು ಆದಿತ್ಯ ಠಾಕ್ರೆ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ನಾಯಕ ನಿತಿನ್ ರಾವತ್ ಕೂಡ ಸ್ಪೀಕರ್ ನಿರ್ಧಾರವನ್ನು ಹಿಂಪಡೆಯುವಂತೆ ಒತ್ತಾಯಿಸಿದರು.
ಒಟ್ಟಾರೆಯಾಗಿ, ಆರು ಸಂಸದರನ್ನು ಸೆಳೆದುಕೊಂಡು ಬೀಗುತ್ತಿರುವ ಶಿಂಧೆ ಬಣ ಹಾಗೂ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುವ ಉದ್ಧವ್ ಪಡೆ ನಡುವಿನ ಕಾಳಗ ಈಗ ಬೀದಿಯಿಂದ ಸದನದವರೆಗೂ ಹರಡಿದ್ದು, ಮಹಾರಾಷ್ಟ್ರ ರಾಜಕೀಯ ಕದನ ದಿನದಿಂದ ದಿನಕ್ಕೆ ಮತ್ತಷ್ಟು ರೋಚಕ ತಿರುವು ಪಡೆಯುತ್ತಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net