ಉದ್ಧವ್ ಠಾಕ್ರೆಗೆ ಮಹಾ ಆಘಾತ: ಶಿಂಧೆ ಬಣ ಸೇರಿದ 6 ಶಿವಸೇನೆ ಸಂಸದರು! ಇದು ಕೇವಲ ಟ್ರೇಲರ್ ಎಂದ ಏಕನಾಥ್ ಪುತ್ರ! Shrikant Shinde

ಉದ್ಧವ್ ಠಾಕ್ರೆಗೆ ಮಹಾ ಆಘಾತ: ಶಿಂಧೆ ಬಣ ಸೇರಿದ 6 ಶಿವಸೇನೆ ಸಂಸದರು! ಇದು ಕೇವಲ ಟ್ರೇಲರ್ ಎಂದ ಏಕನಾಥ್ ಪುತ್ರ!
ಉದ್ಧವ್ ಠಾಕ್ರೆಗೆ ಮಹಾ ಆಘಾತ: ಶಿಂಧೆ ಬಣ ಸೇರಿದ 6 ಶಿವಸೇನೆ ಸಂಸದರು! ಇದು ಕೇವಲ ಟ್ರೇಲರ್ ಎಂದ ಏಕನಾಥ್ ಪುತ್ರ!
Published on

ಪ್ರಮುಖ ಮುಖ್ಯಾಂಶಗಳು

  • ‘ಆಪರೇಷನ್ ಟೈಗರ್’ಗೆ ನಡುಗಿದ ಉದ್ಧವ್ ಬಣ
  • ಮಹತ್ವದ ಸಭೆ ಕೈಬಿಟ್ಟ ಭಿನ್ನಮತೀಯ ಶಾಸಕರು
  • ಮತದಾರರಿಗೆ ಮಾಡಿದ ದ್ರೋಹ ಎಂದ ಆದಿತ್ಯ ಠಾಕ್ರೆ
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ರಾಜಕೀಯ ಭೂಕಂಪ ಸಂಭವಿಸಿದೆ. ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಬಣಕ್ಕೆ ಸೋಮವಾರ ಚೇತರಿಸಿಕೊಳ್ಳಲಾಗದ ದೊಡ್ಡ ಹೊಡೆತ ಬಿದ್ದಿದ್ದು, ಪಕ್ಷದ 6 ಜನ ಹಾಲಿ ಲೋಕಸಭಾ ಸಂಸದರು ಒಟ್ಟಾಗಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಪಾಳಯಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಈ ಬೆನ್ನಲ್ಲೇ ಉದ್ಧವ್ ಠಾಕ್ರೆ ಕರೆದಿದ್ದ ತುರ್ತು ಸಭೆಗೆ ಹಲವು ಶಾಸಕರು ಗೈರುಹಾಜರಾಗಿರುವುದು ಠಾಕ್ರೆ ಸಾಮ್ರಾಜ್ಯದಲ್ಲಿ ಮತ್ತೊಂದು ಸೀಳುವಿಕೆಯ ಮುನ್ಸೂಚನೆ ನೀಡಿದೆ. ಈ ಮಹಾ ಬೆಳವಣಿಗೆಯ ಬೆನ್ನಲ್ಲೇ ಶಿಂಧೆ ಬಣದ ಪ್ರಮುಖ ನಾಯಕ ಶ್ರೀಕಾಂತ್ ಶಿಂಧೆ, ಇದು ಕೇವಲ ಟ್ರೇಲರ್ ಅಷ್ಟೆ, ಅಸಲಿ ಸಿನಿಮಾ ಇನ್ನು ಬಾಕಿ ಇದೆ. ಮುಂದಿನ ದಿನಗಳಲ್ಲಿ ಇಂತಹ ಹತ್ತಾರು ರಾಜಕೀಯ ಬಾಂಬ್ ಸ್ಫೋಟಗಳು ಸರಣಿಯಾಗಿ ನಡೆಯಲಿವೆ ಎಂದು ಎಚ್ಚರಿಸಿದ್ದಾರೆ.

ಶಿಂಧೆ ಗೂಡಿಗೆ ಸೇರಿದ ‘ಆರು ಹುಲಿಗಳು’!

ಸಂಜಯ್ ಹರಿಭಾವು ಜಾಧವ್, ಭೌಸಾಹೇಬ್ ರಾಜಾರಾಮ್ ವಾಕಚೌರೆ, ಓಂಪರ್ಕಾಶ್ ಭೂಪಾಲ್‌ಸಿಂಗ್ ನಿಂಬಾಳ್ಕರ್, ಸಂಜಯ್ ದಿನಾ ಪಾಟೀಲ್, ಸಂಜಯ್ ಉತ್ತಮ್‌ರಾವ್ ದೇಶ್‌ಮುಖ್ ಮತ್ತು ನಾಗೇಶ್ ಬಾಪುರಾವ್ ಪಾಟೀಲ್ ಅಷ್ಟಿಕರ್ ಎಂಬ ಆರು ಜನ ಸಂಸದರು ಉದ್ಧವ್ ಠಾಕ್ರೆ ಕೈಬಿಟ್ಟು ಶಿಂಧೆ ಕೈಹಿಡಿದ ನಾಯಕರಾಗಿದ್ದಾರೆ.
ಮುಂಬೈನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಈ ಆರೂ ಜನ ಸಂಸದರನ್ನು ಪಕ್ಷಕ್ಕೆ ಬರಮಾಡಿಕೊಂಡ ಏಕನಾಥ್ ಶಿಂಧೆ, ನಮ್ಮ ‘ಆಪರೇಷನ್ ಟೈಗರ್’ ಅತ್ಯಂತ ಯಶಸ್ವಿಯಾಗಿದೆ. ಈಗ ನಮ್ಮ ಬಳಿ ಕೇವಲ ಒಬ್ಬರಲ್ಲ, ಆರು ಜನ ಅಸಲಿ ಹುಲಿಗಳಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಂಡಾಯದಿಂದಾಗಿ ಸಂಸತ್ತಿನಲ್ಲಿ ಹಾಗೂ ಮಹಾರಾಷ್ಟ್ರದ ಸ್ಥಳೀಯ ರಾಜಕಾರಣದಲ್ಲಿ ಶಿಂಧೆ ನೇತೃತ್ವದ ಶಿವಸೇನೆಯ ಬಲ ದುಪ್ಪಟ್ಟಾದಂತಾಗಿದೆ.

ಇನ್ನೂ ಮುಗಿದಿಲ್ಲ ಬ್ರೇಕಿಂಗ್ ನ್ಯೂಸ್ ಧಮಾಕಾ!"

ಸಂಸದರ ಜಿಗಿತದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಕಾಂತ್ ಶಿಂಧೆ ಅತ್ಯಂತ ಆತ್ಮವಿಶ್ವಾಸದಿಂದ ಬೀಗಿದರು. ಪತ್ರಕರ್ತರನ್ನು ಉದ್ದೇಶಿಸಿ ತಮಾಷೆ ಮಾಡಿದ ಅವರು, ಇವತ್ತು ಒಂದೇ ದಿನ ಇಡೀ ದೇಶ ನಡುಗುವಂತಹ ಎರಡು ದೊಡ್ಡ ನ್ಯೂಸ್‌ಗಳನ್ನು ನಿಮಗೆ ಕೊಟ್ಟಿದ್ದೇವೆ. ಬೆಳಗ್ಗಿನಿಂದ ಬ್ರೇಕಿಂಗ್ ನ್ಯೂಸ್ ಹಾಕಿ ಹಾಕಿ ನೀವೂ ಸುಸ್ತಾಗಿರಬೇಕು. ಇವತ್ತು ರಾತ್ರಿ ಆರಾಮಾಗಿ ನಿದ್ದೆ ಮಾಡಿ, ವಿಶ್ರಾಂತಿ ತಗೊಳ್ಳಿ. ನಾಳೆಯಿಂದ ಮತ್ತೆ ಹೊಸ ಧಮಾಕಾ ಆರಂಭಿಸೋಣ ಎನ್ನುವ ಮೂಲಕ ಉದ್ಧವ್ ಬಣದ ಮತ್ತಷ್ಟು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಮತದಾರರಿಗೆ ಮಾಡಿದ ಮಹಾ ದ್ರೋಹ: ಆದಿತ್ಯ ಠಾಕ್ರೆ ಆಕ್ರೋಶ

ತಮ್ಮ ಪಕ್ಷದ ಸಂಸದರ ಈ ಹಠಾತ್ ದ್ರೋಹದ ನಡೆಗೆ ಉದ್ಧವ್ ಠಾಕ್ರೆ ಪುತ್ರ, ಯುವ ನಾಯಕ ಆದಿತ್ಯ ಠಾಕ್ರೆ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಪಕ್ಷಾಂತರ ಮಾಡಿದ ಈ ಸಂಸದರು ತಮಗೆ ವೋಟ್ ಹಾಕಿದ ಜನರಿಗೆ ಮಹಾ ದ್ರೋಹ ಬಗೆದಿದ್ದಾರೆ. ಇವರೆಲ್ಲರೂ ಚುನಾವಣೆಯಲ್ಲಿ ಗೆದ್ದಿದ್ದು ಶಿವಸೇನೆ (UBT), ಕಾಂಗ್ರೆಸ್ ಮತ್ತು ಎನ್‌ಸಿಪಿ ಒಳಗೊಂಡ ಮಹಾ ವಿಕಾಸ್ ಅಘಾಡಿ (MVA) ಹಾಗೂ ಇಂಡಿಯಾ ಒಕ್ಕೂಟದ ನಾಯಕರ ಮತ್ತು ಕಾರ್ಯಕರ್ತರ ಪರಿಶ್ರಮದಿಂದ. ಆದರೆ ಈಗ ಅಧಿಕಾರದ ಆಸೆಗೆ ಬಿದ್ದು ಜನಾದೇಶವನ್ನು ಗಾಳಿಗೆ ತೂರಿದ್ದಾರೆ. ಜನರೇ ಇವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದ್ದಾರೆ.
ಒಟ್ಟಾರೆಯಾಗಿ, ಶಿವಸೇನೆಯಲ್ಲಿ ಈ ಹಿಂದೆ ನಡೆದಿದ್ದ ಬಂಡಾಯದ ಕಹಿ ನೆನಪು ಮಾಸುವ ಮುನ್ನವೇ ಉದ್ಧವ್ ಠಾಕ್ರೆ ಅವರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಮುಂಬೈ ರಾಜಕೀಯ ಕೋಟೆಯಲ್ಲಿ ಠಾಕ್ರೆ ಕುಟುಂಬದ ಅಸ್ತಿತ್ವಕ್ಕೆ ದೊಡ್ಡ ಸವಾಲು ಎದುರಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net