ತಮಿಳುನಾಡು ಅಸೆಂಬ್ಲಿಯಲ್ಲಿ ಕೈ ಸನ್ನೆಯ ಹೈಡ್ರಾಮಾ; ಸ್ಟಾಲಿನ್​ಗೆ​ ಟಾಂಗ್​ ಕೊಟ್ರಾ ಸಿಎಂ ವಿಜಯ್! ಸದನದಿಂದ ಹೊರನಡೆದ ಡಿಎಂಕೆ ಶಾಸಕರು! CM Vijay hand gesture

ತಮಿಳುನಾಡು ಅಸೆಂಬ್ಲಿಯಲ್ಲಿ ಕೈ ಸನ್ನೆಯ ಹೈಡ್ರಾಮಾ; ಸ್ಟಾಲಿನ್​ಗೆ​ ಟಾಂಗ್​ ಕೊಟ್ರಾ ಸಿಎಂ ವಿಜಯ್! ಸದನದಿಂದ ಹೊರನಡೆದ ಡಿಎಂಕೆ ಶಾಸಕರು!
ತಮಿಳುನಾಡು ಅಸೆಂಬ್ಲಿಯಲ್ಲಿ ಕೈ ಸನ್ನೆಯ ಹೈಡ್ರಾಮಾ; ಸ್ಟಾಲಿನ್​ಗೆ​ ಟಾಂಗ್​ ಕೊಟ್ರಾ ಸಿಎಂ ವಿಜಯ್! ಸದನದಿಂದ ಹೊರನಡೆದ ಡಿಎಂಕೆ ಶಾಸಕರು!
Published on
ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ ಭಾರಿ ರಾಜಕೀಯ ಹೈಡ್ರಾಮಾವೊಂದು ಜರುಗಿದೆ. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಭಾಷಣ ಮಾಡುತ್ತಿದ್ದ ಮುಖ್ಯಮಂತ್ರಿ ವಿಜಯ್ (CM Vijay hand gesture) ಅವರು ಮಾಡಿದ ಒಂದು ಸಣ್ಣ ಕೈ ಸನ್ನೆ ಈಗ ಇಡೀ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಡಿಎಂಕೆ ನಾಯಕ, ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರ ಹಳೆಯ ವೈರಲ್ ಸ್ಟೈಲನ್ನು ವಿಜಯ್ ಅಣಕಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಡಿಎಂಕೆ ಶಾಸಕರು ಸದನದಿಂದ ನಾಟಕೀಯವಾಗಿ ಹೊರನಡೆದಿದ್ದಾರೆ.
ಸಿಎಂ ವಿಜಯ್ ಭಾಷಣದ ಮಧ್ಯೆ ಆ ಕೈ ಸನ್ನೆ ಮಾಡುತ್ತಿದ್ದಂತೆ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ ಪಕ್ಷದ ಶಾಸಕರು ಮೇಜು ಕುಟ್ಟಿ ಭಾರಿ ಹರ್ಷೋದ್ಗಾರ ವ್ಯಕ್ತಪಡಿಸಿದರು. ಆದರೆ, ಸಿಎಂ ವಿಜಯ್ ಅವರು ಉದ್ದೇಶಪೂರ್ವಕವಾಗಿ ಸ್ಟಾಲಿನ್ ಅವರನ್ನು ಟಾರ್ಗೆಟ್ ಮಾಡಿ ಈ ಸನ್ನೆ ಮಾಡಿದರೇ ಅಥವಾ ಭಾಷಣದ ಓಘದಲ್ಲಿ ಸಹಜವಾಗಿ ಹಾಗೆ ಕೈ ಆಡಿಸಿದರೇ ಎನ್ನುವುದು ಸದ್ಯಕ್ಕೆ ನಿಗೂಢವಾಗಿದೆ.

ಸದನದಲ್ಲಿ ಗದ್ದಲ, ಸ್ಪೀಕರ್ ಮನವಿಗೂ ಕಣ್ಕೊಡದ ವಿಪಕ್ಷ!

ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಸದನದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಸಿಎಂ ವಿಜಯ್ ಭಾಷಣ ಮಾಡಲು ನಿಲ್ಲುತ್ತಿದ್ದಂತೆ ಡಿಎಂಕೆ ನಾಯಕರು ಪದೇಪದೆ ಅಡ್ಡಿಪಡಿಸಲು ಆರಂಭಿಸಿದರು. ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ಕೇವಲ ರಾಜಕೀಯ ಅವಕಾಶವಾದಿ ರಾಜಕಾರಣ ಮಾಡುತ್ತಿದೆ ಎಂದು ಡಿಎಂಕೆ ಶಾಸಕರು ಗಂಟಲು ಹರಿದುಕೊಂಡರು.
ಸದನವನ್ನು ಹತೋಟಿಗೆ ತರಲು ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರು ವಿಪಕ್ಷದ ನಾಯಕರಿಗೆ ಎಷ್ಟೇ ಮನವಿ ಮಾಡಿದರೂ ಗದ್ದಲ ನಿಲ್ಲಲಿಲ್ಲ. ಮುಖ್ಯಮಂತ್ರಿಯವರ ಭಾಷಣಕ್ಕೆ ನಿರಂತರವಾಗಿ ಅಡ್ಡಿಪಡಿಸಿದ ಡಿಎಂಕೆ ಶಾಸಕರು, ಕೊನೆಗೆ ವಿಜಯ್ ವಿರುದ್ಧ ಘೋಷಣೆ ಕೂಗುತ್ತಾ ಅಸೆಂಬ್ಲಿಯಿಂದ ಹೊರನಡೆದರು.

ಡಿಎಂಕೆ ವಿರುದ್ಧ ಹಣ ವಸೂಲಿ ಆರೋಪ ಹೊರಿಸಿದ ವಿಜಯ್!

ಡಿಎಂಕೆ ಶಾಸಕರು ಸಭಾತ್ಯಾಗ ಮಾಡಿದ ಬೆನ್ನಲ್ಲೇ ವಿಪಕ್ಷದ ವಿರುದ್ಧ ವಿಜಯ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆ ಪಕ್ಷವು ಪಕ್ಷದ ನಿಧಿಯ ಹೆಸರಿನಲ್ಲಿ ಜನರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದೆ. ಆದರೆ ನಮ್ಮ ಸರ್ಕಾರ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ. ಭ್ರಷ್ಟಾಚಾರದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ, ಡಿಎಂಕೆಯ ಹಳೆಯ ಮಿತ್ರಪಕ್ಷಗಳಾದ ಸಿಪಿಐ(ಎಂ) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪಕ್ಷಗಳನ್ನು ಟಿವಿಕೆ ತನ್ನ ಕೂಟಕ್ಕೆ ಸೆಳೆದಿದೆ ಎಂಬ ಆರೋಪಕ್ಕೆ ಉತ್ತರಿಸಿದ ಸಿಎಂ ವಿಜಯ್, ಆ ಪಕ್ಷಗಳು ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸ್ವತಂತ್ರವಾಗಿ ನಮ್ಮೊಂದಿಗೆ ಬಂದಿವೆ. ಅದಕ್ಕೆ ನಮ್ಮನ್ನು ದೂಷಿಸುವುದರಲ್ಲಿ ಅರ್ಥವಿಲ್ಲ ಎಂದರು. ಅಲ್ಲದೆ ರಾಜ್ಯದಲ್ಲಿ ಮಾದಕ ದ್ರವ್ಯ ನಿಗ್ರಹ ಹಾಗೂ ಮಹಿಳೆಯರ ಸುರಕ್ಷತೆಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಾರಿದರು.

ಏನಿದು ಸ್ಟಾಲಿನ್ ಅವರ ‘ಕೈ ಸನ್ನೆ’ ವಿವಾದ?

ಕೆಲವು ತಿಂಗಳುಗಳ ಹಿಂದೆ ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ಮಾತುಕತೆಗಾಗಿ ಎಂ.ಕೆ. ಸ್ಟಾಲಿನ್ ಅವರು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಡಿಎಂಕೆ ಕಚೇರಿಯಿಂದ ಹೊರಬರುತ್ತಿದ್ದರು. ಆಗ ಮಾಧ್ಯಮಗಳು ಮಾತುಕತೆ ಮುಗಿಯಿತೇ ಎಂದು ಪದೇಪದೆ ಪ್ರಶ್ನಿಸಿದಾಗ, ಸ್ಟಾಲಿನ್ ಅವರು ತಮ್ಮ ಕೈಯನ್ನು ವಿಶಿಷ್ಟವಾಗಿ ಮೇಲಕ್ಕೆತ್ತಿ ಎಲ್ಲಾ ಮುಗಿಯಿತು ಎನ್ನುವಂತೆ ಸನ್ನೆ ಮಾಡಿದ್ದರು.
ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇಂದು ಸಿಎಂ ವಿಜಯ್ ಅಸೆಂಬ್ಲಿಯಲ್ಲಿ ಅದೇ ಮಾದರಿಯ ಕೈ ಸನ್ನೆ ಮಾಡಿದ್ದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಅವರು ಸ್ಟಾಲಿನ್ ಅವರಿಗೆ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಸಿನೆಮಾ ಸೂಪರ್‌ಸ್ಟಾರ್ ಆಗಿದ್ದ ವಿಜಯ್ ಸಿಎಂ ಆದ ಬಳಿಕ ವಿಧಾನಸಭೆಯಲ್ಲಿ ಡಿಎಂಕೆ ಮತ್ತು ಟಿವಿಕೆ ನಡುವಿನ ವಾರ್ ದಿನದಿಂದ ದಿನಕ್ಕೆ ರಂಗೇರುತ್ತಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net