

ಹರಿಯಾಣ: ಶಾಲೆ ಎಂದರೆ ಅದೊಂದು ಪವಿತ್ರ ಸ್ಥಳ, ಮಕ್ಕಳು ವಿದ್ಯಾರ್ಜನೆಗೆ ಬರುವ ಜಾಗವಾಗಿದೆ. ಆದರೆ ಹರಿಯಾಣದ ಪಂಚಕುಲದಲ್ಲಿ ನಡೆದಿರುವ ಭೀಕರ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಕೇವಲ 8 ವರ್ಷದ ಬಾಲಕನೊಬ್ಬ, 6 ವರ್ಷದ ಮುಗ್ಧ ಬಾಲಕಿಯ ಮೇಲೆ ಎಸಗಿರುವ ಅಮಾನವೀಯ ಕೃತ್ಯದ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿಯೊಬ್ಬ ಪೋಷಕರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ.
ಪಂಚಕುಲದ ಸೆಕ್ಟರ್ 20 ರಲ್ಲಿರುವ ಸರ್ಕಾರಿ ಶಾಲೆಯಲ್ಲಿ ಬುಧವಾರ (ಅ.28) ಈ ಘಟನೆ ನಡೆದಿದೆ. ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ 8 ವರ್ಷದ ಬಾಲಕ, 6 ವರ್ಷದ ಬಾಲಕಿಯ ಕೂದಲನ್ನು ಹಿಡಿದು ತರಗತಿಯ ಡೆಸ್ಕ್‌ಗೆ ಪದೇ ಪದೇ ಬಡಿದಿದ್ದಾನೆ.
ಅಷ್ಟಕ್ಕೇ ನಿಲ್ಲದೆ, ಆಕೆ ನೋವಿನಿಂದ ನೆಲಕ್ಕೆ ಬಿದ್ದ ನಂತರವೂ ಆಕೆಯನ್ನು ಕಾಲಿನಿಂದ ಒದ್ದು, ಬಲವಂತವಾಗಿ ಎಳೆದಾಡಿದ್ದಾನೆ. ಕೊನೆಗೆ ಇಟ್ಟಿಗೆಯಿಂದ ಆಕೆಯ ಮುಖ, ತಲೆಗೆ ಬಡಿದಿದ್ದಾನೆ. ಹಲ್ಲೆಯ ತೀವ್ರತೆಗೆ ಬಾಲಕಿಯ ದೇಹದಿಂದ ವಿಪರೀತ ರಕ್ತಸ್ರಾವವಾಗಿದ್ದು, ಆಕೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ.
ಶಾಲೆ ಮುಗಿದರೂ ಮಗಳು ಹೊರಗೆ ಬಾರದಿದ್ದಾಗ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ. ಶಾಲೆಗೆ ಹೋಗಿ ಹುಡುಕಾಡಿದಾಗ, ಅದೇ ಶಾಲೆಯಲ್ಲಿದ್ದ ಆ ಬಾಲಕ, "ಅವಳು ಮೇಲಿನ ಮಹಡಿಯಲ್ಲಿ ಮಲಗಿದ್ದಾಳೆ" ಎಂದು ಹೇಳಿ ಹೊರಟುಹೋಗಿದ್ದಾನೆ. ಮೇಲಿನ ಮಹಡಿಗೆ ಹೋಗಿ ನೋಡಿದಾಗ ಕೊಠಡಿಗೆ ಹೊರಗಿನಿಂದ ಚಿಲಕ ಹಾಕಲಾಗಿದೆ. ಬಾಗಿಲು ತೆರೆದು ನೋಡಿದ ತಂದೆಗೆ, ತನ್ನ 6 ವರ್ಷದ ಕಂದಮ್ಮ ರಕ್ತದ ಮಡುವಿನಲ್ಲಿ ನರಳುತ್ತಾ ಬಿದ್ದಿರುವುದನ್ನು ಕಂಡು ತಂದೆ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ.
ತಕ್ಷಣವೇ ಬಾಲಕಿಯನ್ನು ಚಂಡೀಗಢದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ICU) ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ನಾವು ಶಾಲೆಗೆ ಬರಲು ಒಂದೆರಡು ನಿಮಿಷ ತಡವಾಯಿತು. ಅಷ್ಟರಲ್ಲೇ ಇಂತಹ ಘೋರ ಕೃತ್ಯ ನಡೆದುಹೋಗಿದೆ. ನನ್ನ ಮಗಳ ಪ್ರಾಣ ಉಳಿಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೆನೆಂದು ಬಾಲಕಿಯ ತಂದೆ ರಶೀದ್ ಕಣ್ಣೀರಿಟ್ಟಿದ್ದಾರೆ.
ಘಟನೆ ನಡೆದ ವೇಳೆ ಶಾಲೆಯಲ್ಲಿದ್ದ ಭದ್ರತಾ ಲೋಪಗಳ ಬಗ್ಗೆ ಬಾಲಕಿಯ ಚಿಕ್ಕಪ್ಪ ಫೈಸಲ್ ಗಂಭೀರ ಆರೋಪ ಮಾಡಿದ್ದಾರೆ. ಅವರ ಪ್ರಕಾರ, ಶಾಲೆಯ ಪ್ರಮುಖ ಶಿಕ್ಷಕರನ್ನು ಸರ್ಕಾರಿ ಕಾರ್ಯಗಳಿಗೆ ನಿಯೋಜಿಸಲಾಗಿದ್ದರಿಂದ 2-3 ಕ್ಲಾಸ್‌ಗಳನ್ನು ಒಟ್ಟಿಗೆ ಕೂರಿಸಿ ಒಬ್ಬರೇ ಶಿಕ್ಷಕರಿಗೆ ಹೊಣೆ ನೀಡಲಾಗಿತ್ತು.
ಮಧ್ಯಾಹ್ನ 3 ಗಂಟೆಗೆ ಪ್ರಾಂಶುಪಾಲರ ಡ್ಯೂಟಿ ಮುಗಿದಿದೆ. ಈ ಘಟನೆಯು ಮಧ್ಯಾಹ್ನ 3:15 ರ ಆಸುಪಾಸಿನಲ್ಲಿ ನಡೆದಿದೆ. ಕಚೇರಿಯಲ್ಲಿದ್ದ ಸಿಸಿಟಿವಿ ಮಾನಿಟರ್ ನೋಡುವವರಾಗಲಿ ಅಥವಾ ಸೆಕ್ಯುರಿಟಿ ಸಿಬ್ಬಂದಿಯಾಗಲಿ ಯಾರೂ ಸ್ಥಳದಲ್ಲಿ ಇರಲಿಲ್ಲ. ಮುಚ್ಚಲಾಗಿದ್ದ ಮೇಲಿನ ಮಹಡಿಗೆ ಮಕ್ಕಳು ಹೋಗುವುದನ್ನು ಯಾರೊಬ್ಬರೂ ಗಮನಿಸದೇ ಇರುವುದು ಶಾಲಾ ಆಡಳಿತದ ಅಕ್ಷಮ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಘಟನೆ ಸಂಬಂಧ ಪಂಚಕುಲ ಡಿಸಿಪಿ ಅಮರಿಂದರ್ ಸಿಂಗ್ ಮಾತನಾಡಿ, "ಘಟನೆಯಲ್ಲಿ ಭಾಗಿಯಾದ ಬಾಲಕನಿಗೆ 8 ವರ್ಷ, ಗಾಯಗೊಂಡ ಬಾಲಕಿಗೆ 6 ವರ್ಷ. ನಿಯಮಾವಳಿ ಪ್ರಕಾರ 7 ರಿಂದ 12 ವರ್ಷದೊಳಗಿನ ಬಾಲಕರಿಗೆ ನಡೆಸಲಾಗುವ ಮಾನಸಿಕ ಮತ್ತು ದೈಹಿಕ ವೈದ್ಯಕೀಯ ಪರೀಕ್ಷೆಗೆ ಬಾಲಕನನ್ನು ಒಳಪಡಿಸಲಾಗಿದೆ.
ಪರೀಕ್ಷಾ ವರದಿ ಬಂದ ನಂತರ ಬಾಲನ್ಯಾಯ ಮಂಡಳಿ (JJB) ನಿಯಮಗಳ ಅನ್ವಯ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ತಿಳಿಸಿದ್ದಾರೆ. ಜೊತೆಗೆ ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಸಣ್ಣ ವಯಸ್ಸಿನ ಮಕ್ಕಳಲ್ಲಿ ಇಂಥ ಹಿಂಸಾತ್ಮಕ ಮನಸ್ಥಿತಿ ಬರಲು ಕಾರಣವೇನು? ಶಾಲೆಗಳಲ್ಲಿ ಮಕ್ಕಳ ರಕ್ಷಣೆಗೆ ಇನ್ನೆಂತಹ ಬಿಗಿ ಕ್ರಮ ಕೈಗೊಳ್ಳಬೇಕು ಎಂಬ ಚರ್ಚೆಯನ್ನು ಹುಟ್ಟುಹಾಕಿದೆ, (ಏಜೆನ್ಸೀಸ್).