ಹಲ್ಲು ಉಜ್ಜುವಾಗ ಅಕಸ್ಮಾತ್ತಾಗಿ 19 ಸೆಂ.ಮೀ ಉದ್ದದ ಟೂತ್‌ಬ್ರಷ್ ನುಂಗಿದ ಆಟೋ ಚಾಲಕ: ನಂತರ ನಡೆದಿದ್ದು ನಿಜಕ್ಕೂ ಪವಾಡ! Toothbrush

ಗಾಬರಿಗೊಂಡ ಕುಟುಂಬಸ್ಥರು ಅವರನ್ನು ಮೊದಲು ಸ್ಥಳೀಯ ವೈದ್ಯರ ಬಳಿಗೆ ಕರೆದೊಯ್ದು ಕ್ಷ-ಕಿರಣ (X-ray) ಪರೀಕ್ಷೆಗೆ ಒಳಪಡಿಸಿದರಾದರೂ, ಪರೀಕ್ಷೆಯಲ್ಲಿ ಬ್ರಷ್ ಇರುವಿಕೆ ಪತ್ತೆಯಾಗಲಿಲ್ಲ.
Toothbrush
ಹಲ್ಲು ಉಜ್ಜುವಾಗ ಅಕಸ್ಮಾತ್ತಾಗಿ 19 ಸೆಂ.ಮೀ ಉದ್ದದ ಟೂತ್‌ಬ್ರಷ್ ನುಂಗಿದ ಆಟೋ ಚಾಲಕ
Published on: 

ಮುಂಬೈ: ಕೇಳಿದರೆ ಅಸಾಧ್ಯ ಎನಿಸುವ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದಲ್ಲಿ ಸಂಭವಿಸಿದ್ದು, ವೈದ್ಯರ ಸಮಯಪ್ರಜ್ಞೆ ಮತ್ತು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನದಿಂದಾಗಿ ಪವಾಡಸದೃಶ ರೀತಿಯಲ್ಲಿ ಜೀವವೊಂದು ಉಳಿದಿದೆ. ಬೆಳಗ್ಗೆ ಎಂದಿನಂತೆ ಹಲ್ಲು ಉಜ್ಜುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಇಡೀ ಟೂತ್‌ಬ್ರಷ್ ( Toothbrush ) ಅನ್ನೇ ನುಂಗಿದ ಅಚ್ಚರಿಯ ಪ್ರಸಂಗ ಬೆಳಕಿಗೆ ಬಂದಿದೆ. ಆದರೆ, ಯಾವುದೇ ಜಟಿಲ ಶಸ್ತ್ರಚಿಕಿತ್ಸೆಯಿಲ್ಲದೆ ವೈದ್ಯರು ಅತ್ಯಂತ ಜಾಗರೂಕತೆಯಿಂದ ಬ್ರಷ್ ಹೊರತೆಗೆದು ಹೊಸ ಜೀವ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರದ ಪೆನ್ ಮೂಲದ ಆಟೋರಿಕ್ಷಾ ಚಾಲಕರಾದ 50 ವರ್ಷದ ರಾಜೇಂದ್ರ ಮಾಲುಸರೆ ಎಂಬುವರೇ ಈ ಅನಿರೀಕ್ಷಿತ ಅವಘಡಕ್ಕೆ ಒಳಗಾದ ವ್ಯಕ್ತಿ. ಅವರು ಬೆಳಗಿನ ಜಾವ ಹಲ್ಲುಜ್ಜುವಾಗ ಅಕಸ್ಮಾತ್ತಾಗಿ ಬರೋಬ್ಬರಿ 19 ಸೆಂಟಿಮೀಟರ್ ಉದ್ದದ ಟೂತ್‌ಬ್ರಷ್ ಅನ್ನು ನುಂಗಿಬಿಟ್ಟಿದ್ದರು. ತಕ್ಷಣವೇ ಅವರಿಗೆ ತೀವ್ರ ಹೊಟ್ಟೆನೋವು ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿದೆ. ಗಾಬರಿಗೊಂಡ ಕುಟುಂಬಸ್ಥರು ಅವರನ್ನು ಮೊದಲು ಸ್ಥಳೀಯ ವೈದ್ಯರ ಬಳಿಗೆ ಕರೆದೊಯ್ದು ಕ್ಷ-ಕಿರಣ (X-ray) ಪರೀಕ್ಷೆಗೆ ಒಳಪಡಿಸಿದರಾದರೂ, ಪರೀಕ್ಷೆಯಲ್ಲಿ ಬ್ರಷ್ ಇರುವಿಕೆ ಪತ್ತೆಯಾಗಲಿಲ್ಲ.

ನಂತರ ಹೆಚ್ಚಿನ ತಪಾಸಣೆಗಾಗಿ ರಾಜೇಂದ್ರ ಅವರನ್ನು ನವಿ ಮುಂಬೈನ ಮೆಡಿಕೋವರ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ಪರಿಣಿತ ವೈದ್ಯರು ಎಂಡೋಸ್ಕೋಪಿ ಪರೀಕ್ಷೆ ನಡೆಸಿದಾಗ 19 ಸೆಂಟಿಮೀಟರ್ ಉದ್ದದ ಬ್ರಷ್ ಅವರ ಹೊಟ್ಟೆಯೊಳಗೆ ಸಿಲುಕಿರುವುದು ಸ್ಪಷ್ಟವಾಗಿ ಕಂಡುಬಂತು. ಬ್ರಷ್‌ನ ಉದ್ದ ಅಧಿಕವಾಗಿದ್ದರಿಂದ ಅದು ನೈಸರ್ಗಿಕವಾಗಿ ಮಲ ವಿಸರ್ಜನೆ ಮೂಲಕ ಹೊರಬರುವುದು ಸಂಪೂರ್ಣ ಅಸಾಧ್ಯವಾಗಿತ್ತು. ಅಲ್ಲದೆ, ಬ್ರಷ್ ಕರುಳಿನ ಭಾಗಕ್ಕೆ ಜಾರಿದರೆ ಒಳ ಅಂಗಾಂಗಗಳಿಗೆ ರಂಧ್ರವಾಗಿ ಆಂತರಿಕ ರಕ್ತಸ್ರಾವ ಹಾಗೂ ಜೀವಕ್ಕೆ ಅಪಾಯ ಉಂಟಾಗುವ ಭೀತಿಯೂ ವೈದ್ಯರನ್ನು ಕಾಡತೊಡಗಿತು.

Also Read
ರಾವಣನಾಗಿ ಯಶ್ ಅಬ್ಬರಿಸಿದರೂ ಕನ್ನಡದಲ್ಲಿ ಕಲೆಕ್ಷನ್ ಡಲ್!..ರಾಮಾಯಣದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?Ramayana Day 1 Collection
Toothbrush

ಈ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲು ನಿರ್ಧರಿಸಿದ ವೈದ್ಯಕೀಯ ತಂಡ, ಎಂಡೋಸ್ಕೋಪಿ ತಂತ್ರಜ್ಞಾನದ ಮೂಲಕವೇ ಅದನ್ನು ಹೊರತೆಗೆಯಲು ಯೋಜನೆ ರೂಪಿಸಿತು. ಹೊಟ್ಟೆ ಮತ್ತು ಅನ್ನನಾಳದ ಕಿರಿದಾದ ಭಾಗಗಳಲ್ಲಿ ಸಿಲುಕಿಕೊಂಡಿದ್ದ ಬ್ರಷ್ ಅನ್ನು ವೈದ್ಯರು ಅತ್ಯಂತ ಜಾಗರೂಕತೆಯಿಂದ ಹಲವು ಬಾರಿ ತಿರುಗಿಸಿ, ಗಂಟಲಿನ ಭಾಗದವರೆಗೆ ತಂದರು. ಸುಮಾರು 30 ನಿಮಿಷಗಳ ಕಾಲ ನಡೆದ ಅತ್ಯಂತ ಸಂಕೀರ್ಣ ಹಾಗೂ ಸವಾಲಿನ ಪ್ರಕ್ರಿಯೆಯ ನಂತರ, ಆಂತರಿಕ ಅಂಗಾಂಗಗಳಿಗೆ ಯಾವುದೇ ಗಾಯವಾಗದಂತೆ ಬ್ರಷ್ ಅನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು.

ಈ ಸಾಹಸಮಯ ಶಸ್ತ್ರಚಿಕಿತ್ಸೆ ನಂತರ ಸಂಪೂರ್ಣ ಚೇತರಿಸಿಕೊಂಡ ರಾಜೇಂದ್ರ ಮಾಲುಸರೆ ಅವರನ್ನು ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಇಂತಹ ದೊಡ್ಡ ವಸ್ತುಗಳನ್ನು ಆಕಸ್ಮಿಕವಾಗಿ ನುಂಗಿದಾಗ ಸ್ವತಃ ವಾಂತಿ ಮಾಡಲು ಯತ್ನಿಸುವುದು ಅಥವಾ ಆಹಾರ ಸೇವಿಸಿ ಅದನ್ನು ಕೆಳಗೆ ತಳ್ಳಲು ಪ್ರಯತ್ನಿಸುವುದು ಅಪಾಯಕಾರಿ. ತಕ್ಷಣವೇ ಹತ್ತಿರದ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಾರ್ವಜನಿಕರಿಗೆ ವೈದ್ಯರು ಸಲಹೆ ನೀಡಿದ್ದಾರೆ, (ಏಜೆನ್ಸೀಸ್​).