Cyclone Murasu: ರಾಷ್ಟ್ರ ರಾಜಧಾನಿ ದೆಹಲಿ-ಎನ್‌ಸಿಆರ್ ಪ್ರದೇಶಗಳಲ್ಲಿ ಮಾಲಿನ್ಯ ಮತ್ತು ಶುಷ್ಕ ಹವಾಮಾನ ಮುಂದುವರಿದಿದ್ದರೆ, ಮತ್ತೊಂದೆಡೆ ಬಂಗಾಳ ಕೊಲ್ಲಿಯಲ್ಲಿ ರಚನೆಗೊಂಡಿರುವ ಮುರಾಸು ಚಂಡಮಾರುತವು ದಕ್ಷಿಣ ಭಾರತದ ಕರಾವಳಿ ರಾಜ್ಯಗಳಲ್ಲಿ ಹೈಅಲರ್ಟ್ ಸೃಷ್ಟಿಸಿದೆ. ಭಾರಿ ಮಳೆಯ ಮುನ್ಸೂಚನೆ ಬೆನ್ನಲ್ಲೇ ನಾಲ್ಕು ರಾಜ್ಯಗಳಿಗೆ ಸೈಕ್ಲೋನ್ ತಟ್ಟುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ನಾಳೆಯವರೆಗೂ ಕರಾವಳಿ ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಐಎಂಡಿ ರೆಡ್ ಅಲರ್ಟ್ ಘೋಷಿಸಿದ್ದು, ರಾಯಲಸೀಮಾ, ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ತೆಲಂಗಾಣಕ್ಕೆ ಮುನ್ನೆಚ್ಚರಿಕೆ ನೀಡಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಛತ್ತೀಸ್‌ಗಢ, ಕೇರಳ, ಮಾಹೆ, ಒಡಿಶಾ ಮತ್ತು ಕರ್ನಾಟಕ ಸೇರಿದಂತೆ ಹಲವೆಡೆ ಭಾರಿ ಮಳೆಯನ್ನು ನಿರೀಕ್ಷಿಸಲಾಗಿದೆ.
ಹವಾಮಾನ ಇಲಾಖೆಯ ಪ್ರಕಾರ, ಮುರಾಸು ಚಂಡಮಾರುತವು ನವೆಂಬರ್ 2ರ ಮಧ್ಯರಾತ್ರಿ ಅಥವಾ ನವೆಂಬರ್ 3ರ ಮುಂಜಾನೆ ಆಂಧ್ರಪ್ರದೇಶದ ನೆಲ್ಲೂರು ಮತ್ತು ನರಸಾಪುರದ ನಡುವೆ ಕರಾವಳಿ ದಾಟುವ ಸಾಧ್ಯತೆಯಿದೆ. ಈ ಸಮಯದಲ್ಲಿ, ಗಾಳಿಯು ಗಂಟೆಗೆ 100ರಿಂದ 110 ಕಿ.ಮೀ ವೇಗದಲ್ಲಿ ಬೀಸಲಿದ್ದು, ಬಿರುಗಾಳಿಯ ವೇಗ ಗಂಟೆಗೆ 120 ಕಿ.ಮೀ ತಲುಪಬಹುದು ಎನ್ನಲಾಗಿದೆ.
ಕರಾವಳಿ ಆಂಧ್ರಪ್ರದೇಶ (ನೆಲ್ಲೂರು, ಪ್ರಕಾಶಂ, ಬಾಪಟ್ಲ, ಗುಂಟೂರು, ಕೃಷ್ಣ) ಮತ್ತು ರಾಯಲಸೀಮಾ ಭಾಗಗಳಲ್ಲಿ ಸಿಡಿಲು-ಮಿಂಚು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಈಶಾನ್ಯ ಮಾನ್ಸೂನ್ ಆರ್ಭಟ ಹಾಗೂ ಚಂಡಮಾರುತದ ಪ್ರಭಾವದಿಂದಾಗಿ ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಚೆನ್ನೈ ಮತ್ತು ತಿರುವಳ್ಳೂರು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಿದ ಚೆನ್ನೈ ಜಿಲ್ಲಾಧಿಕಾರಿ ಎಸ್. ಮಾಲತಿ ಹೆಲನ್, ಪರಿಸ್ಥಿತಿ ನೋಡಿಕೊಂಡು ರಜೆ ಮುಂದುವರಿಕೆ ಮಾಡುವ ಬಗ್ಗೆ ತಿಳಿಸುವುದಾಗಿ ಹೇಳಿದ್ದಾರೆ.
ಚಂಡಮಾರುತ ಒಳನಾಡಿಗೆ ಚಲಿಸುತ್ತಿದ್ದಂತೆ ತೆಲಂಗಾಣದಲ್ಲೂ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ, ಖಮ್ಮಂ, ನಲ್ಗೊಂಡ, ಸೂರ್ಯಪೇಟೆ, ಮಹಬೂಬ್‌ನಗರ, ನಾಗರ್‌ಕರ್ನೂಲ್ ಮತ್ತು ವನಪರ್ತಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಇನ್ನು, ಜಂಗಾಂವ್, ಯದಾದ್ರಿ ಭುವನಗಿರಿ, ರಂಗಾರೆಡ್ಡಿ, ಹೈದರಾಬಾದ್ ಮತ್ತು ಮೇಡ್ಚಲ್-ಮಲ್ಕಾಜ್‌ಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಒಟ್ಟಾರೆ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಿಗೆ ಐಎಂಡಿ ಮುನ್ನೆಚ್ಚರಿಕೆ ನೀಡಿದೆ,(ಏಜೆನ್ಸೀಸ್).