ರಾಮಮಂದಿರ ಟ್ರಸ್ಟ್ ಸಿಇಒ ಆಯ್ಕೆ ಅಂತಿಮ ಹಂತಕ್ಕೆ: 16 ಅಭ್ಯರ್ಥಿಗಳ ನೇರ ಸಂದರ್ಶನ ಪೂರ್ಣ! | Ram Mandir Trust CEO

Ram Mandir Trust CEO
Ram Mandir Trust CEO
Published on

Ram Mandir Trust CEO: ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಹುದ್ದೆಯ ಆಯ್ಕೆ ಪ್ರಕ್ರಿಯೆಯು ಅಂತಿಮ ಹಂತಕ್ಕೆ ತಲುಪಿದ್ದು, ಶಾರ್ಟ್‌ಲಿಸ್ಟ್ ಮಾಡಲಾಗಿದ್ದ 16 ಅಭ್ಯರ್ಥಿಗಳ ಅಂತಿಮ ಸುತ್ತಿನ ಸಂದರ್ಶನವನ್ನು ಶೋಧನಾ ಸಮಿತಿಯು ಪೂರ್ಣಗೊಳಿಸಿದೆ.

ಆಗಸ್ಟ್ 11 ಮತ್ತು 12 ರಂದು ಅಯೋಧ್ಯೆಯಲ್ಲಿರುವ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಆವರಣದಲ್ಲಿ ಈ ಸಂದರ್ಶನಗಳು ನಡೆದವು. ಪ್ರಮುಖ ಸಾಂಸ್ಥಿಕ ನಾಯಕತ್ವದ ಹುದ್ದೆಗೆ ಸೂಕ್ತವಾದ ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡಲು ನಿವೃತ್ತ ನ್ಯಾಯಮೂರ್ತಿ ಪರ್ಮೊಡ್ ಕೊಹ್ಲಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ವಿ.ಕೆ. ಚತುರ್ವೇದಿ ಮತ್ತು ಪರಮಾಣು ವಿಜ್ಞಾನಿ ಡಾ. ಸುರೇಶ್ ಹಾವರೆ ಅವರನ್ನೊಳಗೊಂಡ ಶೋಧನಾ ಸಮಿತಿಯು ಈ ಪ್ರಕ್ರಿಯೆಯನ್ನು ನಡೆಸಿದೆ.

ಆಯ್ಕೆಯ ಮಾನದಂಡಗಳೇನು...?

ಆಯ್ಕೆ ಪ್ರಕ್ರಿಯೆಯು ಹಲವು ಸುತ್ತುಗಳ ಪರಿಶೀಲನೆಯನ್ನು ಒಳಗೊಂಡಿತ್ತು. ಆರಂಭದಲ್ಲಿ ಒಟ್ಟು 5,585 ಅರ್ಜಿಗಳು ಬಂದಿದ್ದವು, ಅದರಲ್ಲಿ 3,877 ಅಭ್ಯರ್ಥಿಗಳು ವಿವರವಾದ ಸಿವಿ ಸಲ್ಲಿಸಿದ್ದರು. ವ್ಯವಸ್ಥಾಪನಾ ಸಾಮರ್ಥ್ಯ, ಬೃಹತ್ ಕಾರ್ಯಕ್ರಮಗಳು ಮತ್ತು ಸಿಬ್ಬಂದಿ ನಿರ್ವಹಣೆಯ ಅನುಭವ, ವೈಯಕ್ತಿಕ ಶ್ರೇಷ್ಠತೆ, ಭಾಷಾ ಪ್ರಾವೀಣ್ಯತೆ, ದೃಷ್ಟಿಕೋನ ಮತ್ತು ಕಾರ್ಯತಂತ್ರದ ಯೋಜನೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡಲಾಯಿತು.
ಎರಡನೇ ಹಂತದಲ್ಲಿ ಸುಮಾರು 111 ಅಭ್ಯರ್ಥಿಗಳನ್ನು ಆನ್‌ಲೈನ್ ಸಂವಾದಕ್ಕೆ ಆಹ್ವಾನಿಸಿ, ಅವರ ಸಂವಹನ ಕೌಶಲ್ಯ, ವೃತ್ತಿಪರ ಅನುಭವ, ವ್ಯಕ್ತಿತ್ವ, ನಾಯಕತ್ವದ ಗುಣಗಳು ಮತ್ತು ತಾಂತ್ರಿಕ ಜ್ಞಾನವನ್ನು ಪರಿಶೀಲಿಸಲಾಯಿತು. ತದನಂತರ 16 ಅಭ್ಯರ್ಥಿಗಳನ್ನು ಅಯೋಧ್ಯೆಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಆಯ್ಕೆ ಮಾಡಲಾಯಿತು. ಈ ಅಂತಿಮ ಪಟ್ಟಿಯಲ್ಲಿ ಸೇನಾ ನಿವೃತ್ತ ಅಧಿಕಾರಿಗಳು, ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಹಾಗೂ ಸರ್ಕಾರಿ ಮತ್ತು ಸರ್ಕಾರೇತರ ರಂಗಗಳ ಅನುಭವಿ ವೃತ್ತಿಪರರಿದ್ದರು.
ಸಮಿತಿಯು ಈ ಅಂತಿಮ ಅಭ್ಯರ್ಥಿಗಳ ನಿರ್ವಹಣಾ ಕೌಶಲ್ಯ, ನಾಯಕತ್ವದ ಸಾಮರ್ಥ್ಯ, ವ್ಯಕ್ತಿತ್ವ, ದೃಷ್ಟಿಕೋನ, ಕಾರ್ಯತಂತ್ರದ ಯೋಜನೆ ಮತ್ತು ತಾಂತ್ರಿಕ ಪರಿಣತಿಯನ್ನು ಆಧಾರವಾಗಿಟ್ಟುಕೊಂಡು ಮೌಲ್ಯಮಾಪನ ಮಾಡಿದೆ. ಶೋಧನಾ ಸಮಿತಿಯು ಈಗ ಮೂರು ಹೆಸರುಗಳ ಪಟ್ಟಿಯನ್ನು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ರವಾನಿಸಲಿದ್ದು, ಟ್ರಸ್ಟ್ ಅಂತಿಮ ನಿರ್ಧಾರವನ್ನು ತೆಗೆದುಕೊಂಡು ಸೂಕ್ತ ಸಮಯದಲ್ಲಿ ನೂತನ ಸಿಇಒ ಅವರನ್ನು ಘೋಷಿಸಲಿದೆ.

ಸಿಇಒ ಅವಧಿ ಎಷ್ಟು..?

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಮಹತ್ವದ ಸಂಸ್ಥೆಗೆ ಅತ್ಯಂತ ಅರ್ಹ ಹಾಗೂ ಪಾರದರ್ಶಕ ಆಯ್ಕೆಯನ್ನು ಖಚಿತಪಡಿಸಿಕೊಳ್ಳುವುದು ಈ ಪ್ರಕ್ರಿಯೆಯ ಮುಖ್ಯ ಉದ್ದೇಶವಾಗಿದೆ. ಸಿಇಒ ಅವರನ್ನು ಮೂರು ವರ್ಷಗಳ ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ ಮತ್ತು ತೃಪ್ತಿಕರ ಸಾಧನೆಯ ಆಧಾರದ ಮೇಲೆ ಇದನ್ನು ನವೀಕರಿಸಬಹುದು. ವೇತನ ಮತ್ತು ಇತರ ಸೌಲಭ್ಯಗಳನ್ನು ಪರಸ್ಪರ ಚರ್ಚೆಯ ಮೂಲಕ ನಿರ್ಧರಿಸಲಾಗುತ್ತದೆ.
ಟ್ರಸ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುವ ಸಿಇಒ, ಆಡಳಿತ ಹಾಗೂ ಭವಿಷ್ಯದ ಅಭಿವೃದ್ಧಿಯ ನೇತೃತ್ವ ವಹಿಸಲಿದ್ದಾರೆ. ಶಾಸನಬದ್ಧ ಮತ್ತು ನಿಯಂತ್ರಕ ಅಗತ್ಯಗಳ ಅನುಸರಣೆ, ಆರ್ಥಿಕ ಪಾರದರ್ಶಕತೆ ಕಾಯ್ದುಕೊಳ್ಳುವುದು, ಸರ್ಕಾರಿ ಸಂಸ್ಥೆಗಳೊಂದಿಗೆ ಭದ್ರತಾ ಸಮನ್ವಯ, ಧಾರ್ಮಿಕ ವಿಧಿವಿಧಾನಗಳು ಮತ್ತು ಉತ್ಸವಗಳ ಮೇಲ್ವಿಚಾರಣೆ, ಭಕ್ತರ ಸುರಕ್ಷತೆ ಮತ್ತು ಸೌಕರ್ಯಗಳನ್ನು ಖಚಿತಪಡಿಸುವುದು, ಗಣ್ಯ ಅತಿಥಿಗಳ ವ್ಯವಸ್ಥೆಗಳನ್ನು ನಿರ್ವಹಿಸುವುದು ಹಾಗೂ ಟ್ರಸ್ಟ್ ನೀಡಿದ ಅಧಿಕಾರದಂತೆ ದೈನಂದಿನ ಕಾರ್ಯಗಳನ್ನು ನಿರ್ವಹಿಸುವುದು ಸಿಇಒ ಅವರ ಕಾರ್ಯವಾಗಿರುತ್ತದೆ.
ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ವಿಶ್ವಂಭರ್ ಚತುರ್ವೇದಿ ಮತ್ತು ಖ್ಯಾತ ವಿಜ್ಞಾನಿ ಡಾ. ಸುರೇಶ್ ಹಾವರೆ ಅವರನ್ನೊಳಗೊಂಡ ಈ ಮೂವರ ಸಮಿತಿಯು ಪಟ್ಟಿಯನ್ನು ಸಿದ್ಧಪಡಿಸಿ ಟ್ರಸ್ಟ್ ಮಂಡಳಿಗೆ ಶಿಫಾರಸು ಮಾಡಲಿದ್ದು, ಮಂಡಳಿಯು ಅಂತಿಮ ನೇಮಕಾತಿ ಮಾಡಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net