ಜನಿವಾರದಿಂದ ಮಾಂಸಾಹಾರದವರೆಗೆ!.. ಅಯೋಧ್ಯೆ ರಾಮಮಂದಿರದ ಸಿಇಒ ಅಭ್ಯರ್ಥಿಗಳಿಗೆ ರಹಸ್ಯ ರೂಮ್‌ನಲ್ಲಿ ಕೇಳಿದ ಪ್ರಶ್ನೆಗಳು ಇಲ್ಲಿವೆ | Ram Mandir CEO

Ram Mandir CEO | ಅಯೋಧ್ಯೆ ರಾಮಮಂದಿರದ ಸಿಇಒ ಅಭ್ಯರ್ಥಿಗಳಿಗೆ ರಹಸ್ಯ ರೂಮ್‌ನಲ್ಲಿ ಕೇಳಿದ ಪ್ರಶ್ನೆಗಳು ಇಲ್ಲಿವೆ
Ram Mandir CEO | ಅಯೋಧ್ಯೆ ರಾಮಮಂದಿರದ ಸಿಇಒ ಅಭ್ಯರ್ಥಿಗಳಿಗೆ ರಹಸ್ಯ ರೂಮ್‌ನಲ್ಲಿ ಕೇಳಿದ ಪ್ರಶ್ನೆಗಳು ಇಲ್ಲಿವೆ
Published on

ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಥಮ ಪೂರ್ಣಕಾಲಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಹುದ್ದೆಯ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗಿದ್ದು, ಮಂಗಳವಾರ (ಆಗಸ್ಟ್ 11) ನಡೆದ ಮೊದಲ ಹಂತದ ಸಂದರ್ಶನದಲ್ಲಿ ಮೂವರು ಮಾಜಿ ಐಎಎಸ್ ಅಧಿಕಾರಿಗಳು, ಒಬ್ಬರು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ನಾಲ್ವರು ಮಾಜಿ ಮಿಲಿಟರಿ ಅಧಿಕಾರಿಗಳು ಭಾಗವಹಿಸಿದ್ದರು.

ದೇಶಾದಾದ್ಯಂತ ಬಂದಿದ್ದ 5,200 ಕ್ಕೂ ಹೆಚ್ಚು ಅರ್ಜಿಗಳ ಪೈಕಿ ಅಂತಿಮವಾಗಿ ಶಾರ್ಟ್‌ಲಿಸ್ಟ್ ಆದ 18 ಅಭ್ಯರ್ಥಿಗಳ ಪೈಕಿ ಮೊದಲ ದಿನವಾದ ಮಂಗಳವಾರ ಕೇವಲ 8 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶಿಸಲಾಯಿತು. ಇದರಿಂದಾಗಿ ಆರಂಭದಲ್ಲಿ ಎರಡು ದಿನಗಳಲ್ಲಿ ಮುಗಿಸಲು ಯೋಜಿಸಲಾಗಿದ್ದ ಈ ಪ್ರಕ್ರಿಯೆಯು ಈಗ ನಾಲ್ಕು ಹೆಚ್ಚುವರಿ ದಿನಗಳ ಕಾಲ ಮುಂದುವರಿಯುವ ನಿರೀಕ್ಷೆಯಿದೆ. ಪ್ರತಿಯೊಬ್ಬ ಅಭ್ಯರ್ಥಿಯ ಸಂದರ್ಶನವು ಸುಮಾರು 40 ರಿಂದ 50 ನಿಮಿಷಗಳ ಕಾಲ ನಡೆಯಿತು.

ಅಭ್ಯರ್ಥಿಗಳಿಗೆ ಕೇಳಿದ ಪ್ರಶ್ನೆಗಳು ಇಲ್ಲಿವೆ

ಸಂದರ್ಶನದ ವೇಳೆ ಅಭ್ಯರ್ಥಿಗಳಿಗೆ ಭಗವಾನ್ ಶ್ರೀರಾಮನ ಮೇಲಿರುವ ನಂಬಿಕೆ ಮತ್ತು ಹಿಂದೂ ಧಾರ್ಮಿಕ ಆಚರಣೆಗಳ ಪಾಲನೆಯ ಬಗ್ಗೆ ವಿಸ್ತೃತವಾಗಿ ಪ್ರಶ್ನಿಸಲಾಯಿತು. ಮುಖ್ಯವಾಗಿ ಶಿಕಾ (ಜುಟ್ಟು) ಇಟ್ಟುಕೊಳ್ಳುತ್ತೀರಾ, ಜನೆವು (ಜನಿವಾರ) ಧರಿಸುತ್ತೀರಾ, ಶುದ್ಧ ಸಸ್ಯಾಹಾರಿಯೇ ಅಥವಾ ಮಾಂಸಾಹಾರ ಸೇವಿಸುತ್ತೀರಾ ಹಾಗೂ ಮದ್ಯಪಾನ ಮಾಡುತ್ತೀರಾ ಎನ್ನುವುದನ್ನು ಕೇಳಲಾಯಿತು. ಜೊತೆಗೆ ತಮ್ಮನ್ನು ತಾವು ತೀವ್ರ ಹಿಂದುತ್ವವಾದಿ ಎಂದು ಭಾವಿಸುತ್ತೀರಾ ಅಥವಾ ಕೇವಲ ಧಾರ್ಮಿಕ ನಂಬಿಕೆಯುಳ್ಳವರೇ ಮತ್ತು ಹಿಂದೂ ಧಾರ್ಮಿಕ ಪದ್ಧತಿಯಂತೆ ಸಾಂಪ್ರದಾಯಿಕ ಉಡುಪುಗಳನ್ನು ಧರಿಸುತ್ತೀರಾ ಎಂದೂ ಸಹ ಪ್ರಸ್ತಾಪಿಸಲಾಯಿತು ಎಂದು ತಿಳಿದುಬಂದಿದೆ.
ಇವುಗಳೊಂದಿಗೆ ಅಭ್ಯರ್ಥಿಗಳ ನಾಯಕತ್ವದ ಸಾಮರ್ಥ್ಯ, ಧಾರ್ಮಿಕ ಹಾಗೂ ಸಾಮಾಜಿಕ ತೊಡಗಿಸಿಕೊಳ್ಳುವಿಕೆ ಮತ್ತು ರಾಮಮಂದಿರದ ನಿರ್ವಹಣೆಗೆ ಸಂಬಂಧಿಸಿದಂತೆ ಅವರ ದೃಷ್ಟಿಕೋನ ಹಾಗೂ ಕಾರ್ಯಯೋಜನೆಗಳನ್ನು ಮೌಲ್ಯಮಾಪನ ಮಾಡಲಾಯಿತು.

ಸಂದರ್ಶನಕ್ಕೆ ಹಾಜರಾದರ ಪಟ್ಟಿ

ಸಂದರ್ಶನಕ್ಕೆ ಹಾಜರಾದ ಪ್ರಮುಖರಲ್ಲಿ ಉತ್ತರ ಪ್ರದೇಶದ ಮಾಜಿ ಐಪಿಎಸ್ ಅಧಿಕಾರಿ ರಾಜೇಶ್ ಪಾಂಡೆ, ಜೌನ್‌ಪುರದ ಮಾಜಿ ಜಿಲ್ಲಾಧಿಕಾರಿ ದಿನೇಶ್ ಚಂದ್ರ ಸೇರಿದ್ದು, ಮಾಜಿ ಐಎಎಸ್ ಅಧಿಕಾರಿಗಳಾದ ಯೋಗೇಶ್ವರ್ ರಾಮ್ ಮಿಶ್ರಾ ಮತ್ತು ಸಮೀರ್ ಪಾಂಡ್ಯ ಕೂಡ ಈ ರೇಸ್‌ನಲ್ಲಿದ್ದಾರೆ. ಇವರ ಜೊತೆಗೆ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿಗಳು ಹಾಗೂ ಮಿಲಿಟರಿ ಅಧಿಕಾರಿಗಳು ಶಾರ್ಟ್‌ಲಿಸ್ಟ್‌ನಲ್ಲಿದ್ದಾರೆ. ಎಲ್ಲಾ 18 ಅಭ್ಯರ್ಥಿಗಳು ಸೋಮವಾರ ರಾತ್ರಿಯೇ ಅಯೋಧ್ಯೆಗೆ ತಲುಪಿದ್ದು, ಟ್ರಸ್ಟ್ ಸೂಚಿಸಿದ ಪ್ರತ್ಯೇಕ ಸ್ಥಳಗಳಲ್ಲಿ ತಂಗಿದ್ದರು.
ಈ ಸಮಗ್ರ ಪ್ರಕ್ರಿಯೆಯು ರಾಮಮಂದಿರ ಸಂಕೀರ್ಣದ ಗ್ರೀನ್ ಹೌಸ್​ನ ಬಾಗಿಲು ಮುಚ್ಚಿದ ಕೊಠಡಿಯಲ್ಲಿ ರಹಸ್ಯವಾಗಿ ಜರುಗಿತು. ಬೆಳಿಗ್ಗೆ 9 ಗಂಟೆಗೆ ಆಗಮಿಸಿದ ಅಭ್ಯರ್ಥಿಗಳಿಗೆ ಮಂದಿರ ಸಂಕೀರ್ಣವನ್ನು ವೀಕ್ಷಿಸಲು ಅವಕಾಶ ನೀಡಿದ ನಂತರ ಬೆಳಿಗ್ಗೆ 10 ಗಂಟೆಯಿಂದ ಸಂದರ್ಶನ ಆರಂಭಿಸಲಾಯಿತು. ಅಭ್ಯರ್ಥಿಗಳಿಗೆ ಮಾಧ್ಯಮಗಳೊಂದಿಗೆ ಮಾತನಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಸಂದರ್ಶನ ಮುಗಿದ ತಕ್ಷಣ ಅವರನ್ನು ಅಯೋಧ್ಯೆ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಕಳುಹಿಸಿ, ಅಲ್ಲಿಂದ ಅವರವರ ಊರುಗಳಿಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ.
ದೇವಾಲಯದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗದ ಆರೋಪಗಳ ನಂತರ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಟ್ರಸ್ಟ್ ಈ ಸಿಇಒ ಹುದ್ದೆಯನ್ನು ಸೃಷ್ಟಿಸಿದೆ. ಈ ಪ್ರಕರಣದಲ್ಲಿ ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದ್ದು, ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ಮೂವರು ಅಧಿಕಾರಿಗಳು ತಮ್ಮ ಹುದ್ದೆಗಳಿಂದ ಕೆಳಗಿಳಿದಿದ್ದಾರೆ. ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ ಮತ್ತು ಶಿರಡಿ ಟ್ರಸ್ಟ್ ಮಾಜಿ ಅಧ್ಯಕ್ಷ ಸುರೇಶ್ ಹಾವರೆ ಅವರನ್ನೊಳಗೊಂಡ ಮೂವರ ಆಯ್ಕೆ ಸಮಿತಿಯು 18 ಅಭ್ಯರ್ಥಿಗಳಲ್ಲಿ ಅಂತಿಮವಾಗಿ 3 ಹೆಸರುಗಳನ್ನು ಟ್ರಸ್ಟ್‌ಗೆ ಶಿಫಾರಸು ಮಾಡಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net