ಡಿಜೆ ಸೌಂಡ್‌ಗೆ ಬಲಿಯಾದ 140 ಕೋಳಿಗಳು: ಮದುವೆ ಸಂಭ್ರಮದ ನಡುವೆ ಫಾರ್ಮ್ ಮಾಲೀಕನ ಕಣ್ಣೀರು! DJ Music

ಡಿಜೆ ಸೌಂಡ್‌(DJ Music)ನಿಂದ ಕೋಳಿಗಳಿಗೆ ಹಾರ್ಟ್ ಅಟ್ಯಾ
ಡಿಜೆ ಸೌಂಡ್‌(DJ Music)ನಿಂದ ಕೋಳಿಗಳಿಗೆ ಹಾರ್ಟ್ ಅಟ್ಯಾ
Published on

ಪ್ರಮುಖ ಮುಖ್ಯಾಂಶಗಳು

  • ಡಿಜೆ ಸೌಂಡ್‌(DJ Music)ನಿಂದ ಕೋಳಿಗಳಿಗೆ ಹಾರ್ಟ್ ಅಟ್ಯಾಕ್​
  • ಸುಲ್ತಾನಪುರದಲ್ಲಿ ನಡೆದ ಈ ವಿಲಕ್ಷಣ ಘಟನೆಯಲ್ಲಿ 140 ಕೋಳಿಗಳು ಬಲಿ
  • ಡಿಜೆ ಆಪರೇಟರ್ ವಿರುದ್ಧ ಪೊಲೀಸ್ ಕೇಸ್ ದಾಖಲು
ಸುಲ್ತಾನಪುರ: ಸಾಮಾನ್ಯವಾಗಿ ಮದುವೆ ಮೆರವಣಿಗೆ ಅಂದಮೇಲೆ ಅಲ್ಲಿ ಡಿಜೆ (DJ Music) ಹಾಕಿಕೊಂಡು ಡ್ಯಾನ್ಸ್ ಮಾಡುವುದು ಕಾಮನ್. ಆದರೆ ಅದೇ ಡಿಜೆ ಅಬ್ಬರ ಈಗ ಮದುವೆ ಮನೆಯ ಸಂಭ್ರಮವನ್ನು ಪೊಲೀಸ್ ಸ್ಟೇಷನ್ ಮೆಟ್ಟಿಲೇರುವಂತೆ ಮಾಡಿದೆ. ಅತಿಯಾದ ಶಬ್ದಕ್ಕೆ ಮನುಷ್ಯರೇ ಕಿವಿ ಮುಚ್ಚಿಕೊಳ್ಳುವ ಕಾಲದಲ್ಲಿ, ಬರೋಬ್ಬರಿ 140 ಕೋಳಿಗಳು ಡಿಜೆ ಸೌಂಡ್‌ಗೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ನಡೆದಿದೆ.

ಏನಿದು ಘಟನೆ?

ಸುಲ್ತಾನಪುರದ ಕುಡ್ವಾರ್ ಪ್ರದೇಶದ ರಾಮ್ ಭದ್ರ ಪೂರ್ವ ಗ್ರಾಮದಲ್ಲಿ ಬಬ್ಬನ್ ವಿಶ್ವಕರ್ಮ ಎಂಬುವವರ ಮಗಳ ಮದುವೆ ಇತ್ತು. ಏಪ್ರಿಲ್ 25ರ ರಾತ್ರಿ ಮೆರವಣಿಗೆ ಅದ್ದೂರಿಯಾಗಿ ಸಾಗುತ್ತಿತ್ತು. ದಾರಿಯುದ್ದಕ್ಕೂ ಡಿಜೆ ಬಾಕ್ಸ್ ನಡುಗುತ್ತಿತ್ತು, ಯುವಕರು ಸ್ಟೆಪ್ಸ್ ಹಾಕುತ್ತಿದ್ದರು. ಆದರೆ ಈ ಸಂಭ್ರಮ ಸಬೀರ್ ಅಲಿ ಎಂಬುವವರ ಕೋಳಿ ಸಾಕಣೆ ಕೇಂದ್ರದ ಮುಂದೆ ಬಂದಾಗ ಅಸಲಿ ಕಥೆ ಶುರುವಾಗಿದೆ.
ಸಬೀರ್ ಅಲಿ ಹೇಳುವಂತೆ, ರಾತ್ರಿ ಸುಮಾರು 9:30ಕ್ಕೆ ಮೆರವಣಿಗೆ ಅವರ ಫಾರ್ಮ್ ಹೌಸ್ ಮುಂದೆ ಹಾದು ಹೋಗಿದೆ. ಡಿಜೆಯಿಂದ ಬರುತ್ತಿದ್ದ ಕಿವಿಗಡಚಿಕ್ಕುವ ಶಬ್ದಕ್ಕೆ ಕೋಳಿಗಳು ಬೆಚ್ಚಿಬಿದ್ದಿವೆ. ಗಾಬರಿಯಿಂದ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು, ಒತ್ತಡ ತಾಳಲಾರದೆ ಸ್ಥಳದಲ್ಲೇ 140 ಕೋಳಿಗಳು ಮೃತಪಟ್ಟಿವೆ.

ಶಬ್ದ ಎಷ್ಟು ಜೋರಿತ್ತೆಂದರೆ ನಮಗೇ ಭಯವಾಗಿತ್ತು!

ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಬೀರ್ ಅಲಿ, ನಾನು ಡಿಜೆ ನಿಲ್ಲಿಸುವಂತೆ ಅಥವಾ ಶಬ್ದ ಕಡಿಮೆ ಮಾಡುವಂತೆ ಸಾಕಷ್ಟು ಬಾರಿ ವಿನಂತಿಸಿದೆ. ಆದರೆ ಅವರು ಕೇಳಲಿಲ್ಲ. ಶಬ್ದದ ತೀವ್ರತೆಗೆ ಕೋಳಿಗಳು ಭಯಭೀತರಾಗಿ ಸತ್ತಿವೆ. ಇದು ನನಗೆ ದೊಡ್ಡ ಆರ್ಥಿಕ ನಷ್ಟ ಉಂಟುಮಾಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ತಕ್ಷಣವೇ ಪೊಲೀಸರಿಗೆ ದೂರು ನೀಡಿದ ಸಬೀರ್ ಅಲಿ, ಹೆಚ್ಚಿನ ಡೆಸಿಬಲ್ ಶಬ್ದವೇ ನನ್ನ ಕೋಳಿಗಳ ಸಾವಿಗೆ ನೇರ ಕಾರಣ ಎಂದು ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಈಗ ಪಾರ್ಸಿಪುರದ ಡಿಜೆ ಆಪರೇಟರ್ ಕವಿ ಯಾದವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜ್ಞಾನ ಏನು ಹೇಳುತ್ತೆ? ನಿಜಕ್ಕೂ ಶಬ್ದಕ್ಕೆ ಕೋಳಿಗಳು ಸಾಯುತ್ತವೆಯೇ?

ಇದು ಕೇಳಲು ವಿಚಿತ್ರ ಎನಿಸಿದರೂ, ತಜ್ಞರ ಪ್ರಕಾರ ಇದು ಸಾಧ್ಯ. ಪಕ್ಷಿಗಳು ಮತ್ತು ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚಿನ ಶ್ರವಣ ಸಾಮರ್ಥ್ಯ ಹೊಂದಿರುತ್ತವೆ. ಅತಿಯಾದ ಶಬ್ದ ತರಂಗಗಳು ಕೋಳಿಗಳಲ್ಲಿ ತೀವ್ರ ಒತ್ತಡ ಉಂಟುಮಾಡುತ್ತವೆ. ಇದರಿಂದ ಅವುಗಳಿಗೆ ಹೃದಯ ಸ್ತಂಭನ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹಠಾತ್ ಜೋರು ಶಬ್ದವಾದಾಗ ಕೋಳಿಗಳು ಒಂದೇ ಕಡೆ ಗುಂಪುಗೂಡುತ್ತವೆ, ಇದರಿಂದ ಉಸಿರುಗಟ್ಟಿ ಅಥವಾ ತುಳಿತಕ್ಕೆ ಒಳಗಾಗಿಯೂ ಸಾಯುತ್ತವೆ.

ತನಿಖೆ ಚುರುಕು

ಸದ್ಯಕ್ಕೆ ಪೊಲೀಸರು ಆ ರಾತ್ರಿ ಡಿಜೆ ಸೌಂಡ್ ಲಿಮಿಟ್ ದಾಟಿದೆಯೇ? ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮದುವೆ ಮನೆಯವರು ಮತ್ತು ಡಿಜೆ ಆಪರೇಟರ್ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಬ್ಬರದ ಸಂಗೀತ ಕೇವಲ ಮನುಷ್ಯರಿಗಷ್ಟೇ ಅಲ್ಲ, ಮೂಕ ಪ್ರಾಣಿಗಳಿಗೂ ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net