

ಲಖನೌ: ವಂದೇ ಭಾರತ್ ರೈಲಿನಲ್ಲಿ ಸಂಬಂಧಿಕರನ್ನು ಕಳುಹಿಸಲು ಬಂದಿದ್ದ ಒಂದೇ ಕುಟುಂಬದ 13 ಮಂದಿಗೆ ಇದೀಗ ಭಾರತೀಯ ರೈಲ್ವೆ ಇಲಾಖೆ ಬರೋಬ್ಬರಿ 36 ಸಾವಿರ ರೂ.ಗಳ ಭಾರಿ ದಂಡವನ್ನು ವಿಧಿಸಿದೆ.
ಉತ್ತರ ಪ್ರದೇಶದ ಕಾನ್ಪುರ ರೈಲು ನಿಲ್ದಾಣದಲ್ಲಿ ನಡೆದ ಈ ಘಟನೆ ಸದ್ಯ ಅನೇಕರಲ್ಲಿ ಅಚ್ಚರಿ ಮೂಡಿಸಿದ್ದು, ಪ್ಲಾಟ್‌ಫಾರ್ಮ್ ಟಿಕೆಟ್ ಪಡೆಯದೆ ರೈಲು ಹತ್ತಿ, ರೈಲು ಹೊರಟ ಬಳಿಕ ಇಳಿಯಲಾಗದೆ ಪ್ರಯಾಣಿಕರ ಸಂಬಂಧಿಕರು ಅಲ್ಲೇ ಸಿಲುಕಿಕೊಂಡಿದ್ದಾಗಿ ವರದಿಯಾಗಿದೆ.
ಬೆಳಗ್ಗೆ 9.26ಕ್ಕೆ ನಿಲ್ದಾಣಕ್ಕೆ ಆಗಮಿಸಿದ ವಂದೇ ಭಾರತ್ ರೈಲು 9.30ಕ್ಕೆ ಹೊರಟಿದೆ. ಈ ವೇಳೆ ತಮ್ಮ ಸಂಬಂಧಿಕನ್ನು ಕಳುಹಿಸಿ ಕೊಡಲು ತಾವು ರೈಲು ಹತ್ತಿದ್ದ 13 ಮಂದಿ, ಸಮಯಕ್ಕೆ ಸರಿಯಾಗಿ ಕೆಳಗಿಳಿಯಲು ಮರೆತ ಕಾರಣಕ್ಕೆ, ರೈಲಿನ ಆಟೋಮೆಟಿಕ್ ಡೋರ್ಗಳು ಸಮಯಕ್ಕೆ ಸರಿಯಾಗಿ ಕ್ಲೋಸ್ ಆಗಿವೆ. ಈ ವೇಳೆ, ಇನ್ನೂ ಒಳಗೆ ಇದ್ದ ಕುಟುಂಬಸ್ಥರು ಅಲ್ಲೇ ಸಿಲುಕಿಕೊಂಡರು ಎಂದು ವಿವರಿಸಲಾಗಿದೆ.
ಪ್ರಯಾಣಿಕರ ಗೊಂದಲದ ಬಳಿಕ ರೈಲು ನಿಗದಿತ ನಿಲುಗಡೆ ಇಲ್ಲದೆ ಹೋದರೂ ಇಟಾವಾ ನಿಲ್ದಾಣದಲ್ಲಿ ಬೆಳಗ್ಗೆ 10.49ಕ್ಕೆ ಸ್ಟಾಪ್ ನೀಡಿದೆ. ಈ ವೇಳೆ ರೈಲಿನಲ್ಲಿದ್ದ 13 ಮಂದಿಯನ್ನು ರೈಲ್ವೆ ಅಧಿಕಾರಿಗಳು ಕೆಳಗಿಳಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ, ಇವರಲ್ಲಿ ಒಬ್ಬರೂ ಸಹ ಪ್ಲಾಟ್‌ಫಾರ್ಮ್ ಟಿಕೆಟ್ ಪಡೆಯದೆ ಸಂಬಂಧಿಕರನ್ನು ಕಳುಹಿಸುವ ಉದ್ದೇಶದಿಂದ ರೈಲು ಹತ್ತಿರುವುದು ಬೆಳಕಿಗೆ ಬಂದಿದೆ. ರೈಲು ನಿಲ್ದಾಣ ಪ್ರವೇಶಿಸಲು ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್ ಇಲ್ಲದೆ ರೈಲು ಹತ್ತಿದ್ದಕ್ಕಾಗಿ ಪ್ರತಿಯೊಬ್ಬರಿಗೂ ತಲಾ 3,000 ರೂ. ದಂಡವನ್ನು ಹಾಕಲಾಗಿದೆ.
13ರ ಪೈಕಿ 12 ಮಂದಿ ಹಿರಿಯರಾದರೆ, ಓರ್ವ ಮಾತ್ರ ಬಾಲಕ ಎನ್ನಲಾಗಿದೆ. ಇಂತಹ ತಪ್ಪುಗಳನ್ನು ಮತ್ತೆ ಮಾಡದಂತೆ ಎಚ್ಚರಿಸಿರುವ ಪೊಲೀಸರು, ಅವರವರ ಸ್ಥಳಕ್ಕೆ ಸುರಕ್ಷಿತವಾಗಿ ಹೋಗುವಂತೆ ಹೇಳಿ ಕಳುಹಿಸಿದ್ದಾರೆ ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).