ಮಹಾರಾಷ್ಟ್ರದಲ್ಲಿ ವರುಣನ ರೌದ್ರಾವತಾರಕ್ಕೆ 13 ಬಲಿ: ಜಲಪ್ರಳಯಕ್ಕೆ ಮುಳುಗಿದ ಮುಂಬೈ, ಪುಣೆಯಲ್ಲೂ ಭೀಕರ ಪ್ರವಾಹ! Maharashtra Rain

ಮಹಾರಾಷ್ಟ್ರದಲ್ಲಿ ವರುಣನ ರೌದ್ರಾವತಾರಕ್ಕೆ 13 ಬಲಿ: ಜಲಪ್ರಳಯಕ್ಕೆ ಮುಳುಗಿದ ಮುಂಬೈ, ಪುಣೆಯಲ್ಲೂ ಭೀಕರ ಪ್ರವಾಹ! Maharashtra Rain
ಮಹಾರಾಷ್ಟ್ರದಲ್ಲಿ ವರುಣನ ರೌದ್ರಾವತಾರಕ್ಕೆ 13 ಬಲಿ: ಜಲಪ್ರಳಯಕ್ಕೆ ಮುಳುಗಿದ ಮುಂಬೈ, ಪುಣೆಯಲ್ಲೂ ಭೀಕರ ಪ್ರವಾಹ! Maharashtra Rain
Published on

ಪ್ರಮುಖ ಮುಖ್ಯಾಂಶಗಳು

  • ಮಹಾಮಳೆಗೆ ಮಹಾರಾಷ್ಟ್ರ ತಲ್ಲಣ, 13 ಜನರ ಸಾವು!
  • ಭಾರಿ ಮಳೆಗೆ ಸಮುದ್ರದಂತಾದ ವಾಣಿಜ್ಯ ನಗರಿ ಮುಂಬೈ
  • ಭೂಕುಸಿತಕ್ಕೆ ಪುಣೆಯಲ್ಲಿ ಮನೆಯೊಂದು ಧ್ವಂಸ
  • ಮಹಾರಾಷ್ಟ್ರದಲ್ಲಿ ಮೃತ್ಯುರೂಪ ಪಡೆದ ಮುಂಗಾರು ಮಳೆ
Maharashtra Rain : ಮಹಾರಾಷ್ಟ್ರದಲ್ಲಿ ಮುಂಗಾರು ಮಳೆಯ ಆರ್ಭಟ ವಿಕೋಪಕ್ಕೆ ತಿರುಗಿದ್ದು, ಭೀಕರ ಜಲಪ್ರಳಯ ಹಾಗೂ ಸರಣಿ ಭೂಕುಸಿತಕ್ಕೆ ಬರೋಬ್ಬರಿ 13 ಮಂದಿ ಬಲಿಯಾಗಿದ್ದಾರೆ. ವಾಣಿಜ್ಯ ನಗರಿ ಮುಂಬೈ ಜಲಾವೃತಗೊಂಡು ಸಂಪೂರ್ಣವಾಗಿ ಮುಳುಗಿಹೋಗಿದ್ದರೆ, ಇತ್ತ ಪುಣೆ ಜಿಲ್ಲೆಯ ಪಟಾನ್ ಗ್ರಾಮದಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ಇಡೀ ಮನೆಯೊಂದು ಮಣ್ಣಿನಡಿ ಹೂತುಹೋಗಿದೆ. ರಸ್ತೆಗಳು ನದಿಗಳಂತಾಗಿ, ರೈಲು ಹಳಿಗಳು ಕೊಚ್ಚಿಹೋಗಿ ಮುಂಬೈ-ಪುಣೆ ನಡುವಿನ ಸಂಪರ್ಕವೇ ಕಡಿತಗೊಂಡಿದ್ದು, ವರುಣನ ಈ ರೌದ್ರಾವತಾರ ಇಡೀ ಮಹಾರಾಷ್ಟ್ರವನ್ನೇ ಭೀತಿಯ ಮಡುವಿಗೆ ತಳ್ಳಿದೆ.
ಭಾರಿ ಮಳೆಯಿಂದಾಗಿ ಪುಣೆಯ ಪಟಾನ್ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತಕ್ಕೆ ಮನೆಯೊಂದು ಮಣ್ಣಿನಡಿ ಹೂತುಹೋಗಿದ್ದು, ಒಬ್ಬರು ಸಾವಿಗೀಡಾಗಿದ್ದಾರೆ. ಇನ್ನೊಂದೆಡೆ, ಸತತವಾಗಿ ಸುರಿಯುತ್ತಿರುವ ಬಿರುಗಾಳಿ ಸಹಿತ ಮಹಾಮಳೆಯು ಮುಂಬೈ ಮತ್ತು ಪುಣೆ ನಡುವಿನ ರಸ್ತೆ ಹಾಗೂ ರೈಲು ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಿದೆ. ಹವಾಮಾನ ಇಲಾಖೆಯು ಮುಂಬೈಗೆ 'ಆರೆಂಜ್ ಅಲರ್ಟ್' ಹಾಗೂ ಪುಣೆಗೆ 'ರೆಡ್ ಅಲರ್ಟ್' ಘೋಷಿಸಿದ್ದು, ಸಾರ್ವಜನಿಕ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಸೋಮವಾರ ಮುಂಜಾನೆ 3.05ರ ಸುಮಾರಿಗೆ ಕರ್ಜತ್-ಲೋನಾವಾಲಾ ನಡುವಿನ ಬೋರ್ ಘಾಟ್ ಸೆಕ್ಷನ್‌ನ ಠಾಕೂರ್‌ವಾಡಿ ಬಳಿ ಭಾರಿ ಭೂಕುಸಿತ ಸಂಭವಿಸಿದೆ. ಇದರ ಬೆನ್ನಲ್ಲೇ ಖಂಡಾಲಾ ಮತ್ತು ಮಂಕಿ ಹಿಲ್ ನಡುವೆಯೂ ಮತ್ತೊಂದು ಭೂಕುಸಿತ ಉಂಟಾಗಿದೆ. ಮುಂಬೈ ಕಡೆಗೆ ಹೋಗುವ 'ಅಪ್ ಲೈನ್', ಪುಣೆ ಕಡೆಗಿನ 'ಡೌನ್ ಲೈನ್' ಮತ್ತು 'ಮಿಡಲ್ ಲೈನ್' ಸೇರಿದಂತೆ ಮೂರೂ ರೈಲ್ವೆ ಟ್ರ್ಯಾಕ್‌ಗಳ ಮೇಲೆ ಮಣ್ಣು ಮತ್ತು ಬಂಡೆಗಳು ಬಿದ್ದಿರುವುದರಿಂದ ರೈಲು ಸಂಚಾರ ಸಂಪೂರ್ಣ ಬಂದ್ ಆಗಿದೆ ಎಂದು ಮಧ್ಯ ರೈಲ್ವೆ ಪ್ರಧಾನ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನೀಲಾ ತಿಳಿಸಿದ್ದಾರೆ.

16 ರೈಲುಗಳು ರದ್ದು

ಘಾಟ್ ರಸ್ತೆಯಲ್ಲಿ ಉಂಟಾದ ಹಳಿಗಳ ಅಡಚಣೆಯಿಂದಾಗಿ ಮಧ್ಯ ರೈಲ್ವೆಯು ಈ ಮಾರ್ಗದಲ್ಲಿ ಚಲಿಸುವ 16 ಪ್ರಮುಖ ರೈಲುಗಳನ್ನು ರದ್ದುಗೊಳಿಸಿದೆ ಹಾಗೂ 9 ರೈಲುಗಳನ್ನು ಬೇರೆ ಮಾರ್ಗಕ್ಕೆ ಬದಲಾಯಿಸಿದೆ. ರದ್ದಾದ ರೈಲುಗಳಲ್ಲಿ ಪ್ರಮುಖವಾಗಿ ಸಿಎಸ್‌ಎಂಟಿ-ಪುಣೆ ಇಂದ್ರಾಯಣಿ ಎಕ್ಸ್‌ಪ್ರೆಸ್, ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಡೆಕ್ಕನ್ ಎಕ್ಸ್‌ಪ್ರೆಸ್, ಪ್ರಸಿದ್ಧ ಡೆಕ್ಕನ್ ಕ್ವೀನ್, ಪ್ರಗತಿ ಎಕ್ಸ್‌ಪ್ರೆಸ್, ಧುಳೆ ಎಕ್ಸ್‌ಪ್ರೆಸ್ ಮತ್ತು ಸಿಂಹಗಡ ಎಕ್ಸ್‌ಪ್ರೆಸ್‌ಗಳು ಸೇರಿವೆ. ಹಳಿಗಳ ಮೇಲಿನ ಮಣ್ಣು ತೆರವುಗೊಳಿಸುವ ಕಾರ್ಯ ಯುದ್ಧೋಪಾದಿಯಲ್ಲಿ ನಡೆಯುತ್ತಿದ್ದು, ಪ್ರಯಾಣಿಕರು ಲೇಟೆಸ್ಟ್ ಸ್ಟೇಟಸ್ ಪರಿಶೀಲಿಸಿ ಹೊರಡುವಂತೆ ಸೂಚಿಸಲಾಗಿದೆ.
ರೈಲ್ವೆ ಮಾತ್ರವಲ್ಲದೆ ರಸ್ತೆ ಸಾರಿಗೆಗೂ ಮಳೆಯಿಂದಾಗಿ ಭಾರಿ ಹೊಡೆತ ಬಿದ್ದಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಹಾಗೂ ಹಳೆಯ ಮುಂಬೈ-ಪುಣೆ ಹೆದ್ದಾರಿ ಎರಡರಲ್ಲೂ ಸಂಚಾರವನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಖೋಪೋಲಿ-ಕುಸಗಾಂವ್ ಲಿಂಕ್‌ನ ಸುರಂಗ ಮಾರ್ಗ-2ರ ಬಳಿ ಭೂಕುಸಿತ ಸಂಭವಿಸಿದ್ದರಿಂದ ವಾಹನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿರುವುದರಿಂದ ಸಾರ್ವಜನಿಕರು ತುರ್ತು ಕೆಲಸವಿಲ್ಲದೆ ಮುಂಬೈ ಮತ್ತು ಪುಣೆ ನಡುವೆ ಸದ್ಯಕ್ಕೆ ಯಾವುದೇ ಪ್ರಯಾಣ ಬೆಳೆಸಬೇಡಿ ಎಂದು ಪೊಲೀಸರು ಅಧಿಕೃತ ಪ್ರಕಟಣೆಯ ಮೂಲಕ ಕಟ್ಟುನಿಟ್ಟಿನ ವಿನಂತಿ ಮಾಡಿದ್ದಾರೆ.
ಮಹಾರಾಷ್ಟ್ರ ರಸ್ತೆ ಅಭಿವೃದ್ಧಿ ನಿಗಮವು (MSRDC) ಹೈವೇ ಟ್ರಾಫಿಕ್ ಪೊಲೀಸರೊಂದಿಗೆ ಜಂಟಿಯಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ತಾವಿನಿ ಘಾಟ್ ಮತ್ತು ಮಾವಲ್ ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರ್ಯಾಯ ರಸ್ತೆಗಳೂ ಬಂದ್ ಆಗಿವೆ. ಕನೆಕ್ಟಿಂಗ್ ಲಿಂಕ್ ಮತ್ತು ಮಿಸ್ಸಿಂಗ್ ಲಿಂಕ್ ಸೆಕ್ಷನ್ ನಡುವೆ ಬೃಹತ್ ಕಾಂಕ್ರೀಟ್ ಪಿಲ್ಲರ್ ಒಂದು ಹೆದ್ದಾರಿಯ ಮೇಲೆಯೇ ಕುಸಿದು ಬಿದ್ದಿರುವುದರಿಂದ ಎಕ್ಸ್‌ಪ್ರೆಸ್‌ವೇ ಸಂಪೂರ್ಣ ಬ್ಲಾಕ್ ಆಗಿದೆ. ಖಂಡಾಲಾ ಘಾಟ್ ರಸ್ತೆಯುದ್ದಕ್ಕೂ ಜಲಾವೃತ ಮತ್ತು ಸಣ್ಣಪುಟ್ಟ ಭೂಕುಸಿತಗಳು ವರದಿಯಾಗುತ್ತಲೇ ಇವೆ.

ಮಣ್ಣಿನಡಿ ಹೂತುಹೋದ ಮನೆ

ಪುಣೆ ಜಿಲ್ಲೆಯ ಲೋನಾವಾಲಾ ವಿಭಾಗದ ತೀರ ದುರ್ಗಮ ಪ್ರದೇಶವಾದ ಪಟಾನ್ ಗ್ರಾಮದಲ್ಲಿ ಸರಣಿ ಭೂಕುಸಿತ ಉಂಟಾಗಿದ್ದು, ಇಡೀ ಗ್ರಾಮವೇ ಆತಂಕದಲ್ಲಿದೆ. ಮುಂಜಾನೆ ವೇಳೆ ಸಂಭವಿಸಿದ ಭೂಕುಸಿತಕ್ಕೆ ಸಿಲುಕಿ ಒಂದು ಮನೆ ಸಂಪೂರ್ಣವಾಗಿ ಮಣ್ಣಿನಡಿ ಹೂತುಹೋಗಿದೆ. ಆ ಸಮಯದಲ್ಲಿ ಮನೆಯೊಳಗೆ ಮೂವರು ಇದ್ದು, ಸದ್ಯಕ್ಕೆ ಒಬ್ಬರ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ಇಬ್ಬರಿಗಾಗಿ ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಪೊಲೀಸರು ಅವಶೇಷಗಳ ಅಡಿಯಲ್ಲಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಇದೇ ವೇಳೆ, ಪುಣೆಯ ಘೋರವಾಡಿ ರೈಲ್ವೇ ಸ್ಟೇಷನ್ ಬಳಿ ನೀರಿನಲ್ಲಿ ಸಿಲುಕಿಕೊಂಡಿದ್ದ ಖಾಸಗಿ ಬಸ್‌ನಲ್ಲಿದ್ದ 37 ಪ್ರಯಾಣಿಕರನ್ನು ಎನ್‌ಡಿಆರ್‌ಎಫ್ ಯಶಸ್ವಿಯಾಗಿ ರಕ್ಷಿಸಿದೆ.

ಶಾಲೆ-ಕಾಲೇಜುಗಳಿಗೆ ತುರ್ತು ರಜೆ ಘೋಷಣೆ

ಮುಂದಿನ ದಿನಗಳಲ್ಲೂ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂಬೈ, ಪುಣೆ, ಠಾಣೆ ಮತ್ತು ಪಾಲ್ಘರ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆ ಮತ್ತು ಕಾಲೇಜುಗಳಿಗೆ ಸೋಮವಾರ ತುರ್ತು ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ. ಜನಜೀವನ ಹಳಿಗೆ ಬರುವವರೆಗೆ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲೇ ಇರಲು ಸೂಚಿಸಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net