ಕ್ಯಾನ್ಸರ್ ಚಿಕಿತ್ಸೆ ಹೆಸರಲ್ಲಿ ಸಲಿಂಗಕಾಮ: ಬೆಂಗ್ಳೂರಲ್ಲಿ ಹೆಬ್ಬಾವು ಬೆನ್ನತ್ತಿದ ಪೊಲೀಸರಿಗೆ ನಕಲಿ ವೈದ್ಯನ ಕರಾಳ ಮುಖ ಬಯಲು! Bengaluru Python Case

ಕ್ಯಾನ್ಸರ್ ಚಿಕಿತ್ಸೆ ಹೆಸರಲ್ಲಿ ಸಲಿಂಗಕಾಮ: ಬೆಂಗ್ಳೂರಲ್ಲಿ ಹೆಬ್ಬಾವು ಬೆನ್ನತ್ತಿದ ಪೊಲೀಸರಿಗೆ ನಕಲಿ ವೈದ್ಯನ ಕರಾಳ ಮುಖ ಬಯಲು! Bengaluru Python Case
ಕ್ಯಾನ್ಸರ್ ಚಿಕಿತ್ಸೆ ಹೆಸರಲ್ಲಿ ಸಲಿಂಗಕಾಮ: ಬೆಂಗ್ಳೂರಲ್ಲಿ ಹೆಬ್ಬಾವು ಬೆನ್ನತ್ತಿದ ಪೊಲೀಸರಿಗೆ ನಕಲಿ ವೈದ್ಯನ ಕರಾಳ ಮುಖ ಬಯಲು! Bengaluru Python Case
Published on

ಪ್ರಮುಖ ಮುಖ್ಯಾಂಶಗಳು

  • ಹೆಬ್ಬಾವು ಪತ್ತೆಯಾದ ಅಪಾರ್ಟ್‌ಮೆಂಟ್‌ನಲ್ಲಿ ನಡೀತಿತ್ತಾ ಸಲಿಂಗಕಾಮ ದಂಧೆ?
  • ರೋಗಿಗಳಿಗೆ ಬಲೆ ಬೀಸುತ್ತಿದ್ದ ನಕಲಿ ಡಾಕ್ಟರ್ ಕರಾಳ ರಹಸ್ಯ ಬಯಲು
  • ಕ್ಯಾನ್ಸರ್ ವಾಸಿ ಮಾಡೋಕೆ ಸಲಿಂಗಕಾಮವೇ ಮದ್ದು ಅಂದಿದ್ದ ನಕಲಿ ವೈದ್ಯ
  • ನಕಲಿ ಡಾಕ್ಟರ್​ ಅತಾಹುಲ್ಲಾ ಖಾನ್ ವಿಕೃತ ವಿಡಿಯೋ ನೋಡಿ ಬೆಚ್ಚಿಬಿದ್ದ ಖಾಕಿ
Bengaluru Python Case : ಬೆಂಗಳೂರಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಹೆಬ್ಬಾವು ಪತ್ತೆಯಾದ ಪ್ರಕರಣವು ಸದ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಹಲವು ಕರಾಳ ರಹಸ್ಯಗಳನ್ನು ಹೊರಹಾಕಿದೆ. ತಾನೊಬ್ಬ ಆಯುರ್ವೇದಿಕ್ ವೈದ್ಯ ಎಂದು ಬಿಲ್ಡಪ್ ಕೊಟ್ಟುಕೊಂಡು, ಮುಗ್ದ ರೋಗಿಗಳನ್ನು ವಂಚಿಸುತ್ತಿದ್ದ ಅತಾಹುಲ್ಲಾ ಖಾನ್ ಎಂಬ ನಕಲಿ ಡಾಕ್ಟರ್‌ನ ಅಸಲಿ ಮುಖವಾಡ ಈಗ ಬಯಲಾಗಿದ್ದು, ಆತನ ಕೃತ್ಯಗಳನ್ನು ಕೇಳಿ ಪೊಲೀಸರು ಮತ್ತು ಸಾರ್ವಜನಿಕರು ದಂಗಾಗಿದ್ದಾರೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದ ಆಂಧ್ರಪ್ರದೇಶ ಮೂಲದ ಯುವಕನ ಮನೆಗೆ ಕಳೆದ ಕೆಲವು ದಿನಗಳಿಂದ ಕೆಲವರು ಶಂಕಾಸ್ಪದವಾಗಿ ಬಂದು ಹೋಗುತ್ತಿದ್ದರು. ಅಷ್ಟೇ ಅಲ್ಲದೆ, ಆ ಮನೆಗೆ ಭಾರಿ ಪ್ರಮಾಣದಲ್ಲಿ ಮಾಂಸವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಇದರಿಂದ ಅನುಮಾನಗೊಂಡ ಸ್ಥಳೀಯ ನಿವಾಸಿಗಳು ತಕ್ಷಣವೇ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳೀಯರ ಮಾಹಿತಿಯ ಮೇರೆಗೆ ಜಂಟಿ ದಾಳಿ ನಡೆಸಿದ ಅಧಿಕಾರಿಗಳಿಗೆ ದೊಡ್ಡ ಕಾರ್ಡ್‌ಬೋರ್ಡ್ ಬಾಕ್ಸ್ ಒಂದರಲ್ಲಿ ಅಕ್ರಮವಾಗಿ ಹೆಬ್ಬಾವನ್ನು ಸಾಕುತ್ತಿರುವುದು ಪತ್ತೆಯಾಗಿದೆ. ಅಧಿಕಾರಿಗಳು ತಕ್ಷಣವೇ ಆ ಹೆಬ್ಬಾವನ್ನು ವಶಕ್ಕೆ ಪಡೆದಿದ್ದು, ನಿಯಮಬಾಹಿರವಾಗಿ ವನ್ಯಜೀವಿ ಸಾಕಿದ ಆರೋಪದಡಿ ನಕಲಿ ಡಾಕ್ಟರ್ ಅತಾಹುಲ್ಲಾ ಖಾನ್ ಹಾಗೂ ಆತನ ಸಹಚರರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಅತಾಹುಲ್ಲಾ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್ ಆಗಿದ್ದು, ತಾನೊಬ್ಬ ದೊಡ್ಡ ಆಯುರ್ವೇದಿಕ್ ಡಾಕ್ಟರ್ ಎಂದು ಬಿಲ್ಡಪ್ ಕೊಡುತ್ತಿದ್ದ, ಆದರೆ ತನಿಖೆಯ ವೇಳೆ ಈತ ಯಾವುದೇ ವೈದ್ಯಕೀಯ ಪದವಿ ಅಥವಾ ಸರ್ಟಿಫಿಕೇಟ್ ಹೊಂದಿರದ ನಕಲಿ ಡಾಕ್ಟರ್ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.
ಈ ಹಿಂದೆ 2025 ರಲ್ಲಿ ತೆಲಂಗಾಣದ ಜಲಪಲ್ಲಿಯಲ್ಲಿ ಈತ ನಡೆಸುತ್ತಿದ್ದ ಕ್ಲಿನಿಕ್ ಮೇಲೆ ಅಲ್ಲಿನ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿ ಸೀಜ್ ಮಾಡಿದ್ದರು. ಎಕ್ಸ್‌ಪೈರಿ ಡೇಟ್ ಇಲ್ಲದ ಮಾತ್ರೆಗಳನ್ನು ನೀಡುತ್ತಿದ್ದ ಹಾಗೂ ಕ್ಯಾನ್ಸರ್ ಸೇರಿದಂತೆ ಹಲವು ಮಾರಣಾಂತಿಕ ರೋಗಗಳಿಗೆ ಚಿಕಿತ್ಸೆ ಕೊಡುವುದಾಗಿ ನಂಬಿಸಿ ವಿಪರೀತ ಶುಲ್ಕ ವಸೂಲಿ ಮಾಡುತ್ತಿದ್ದ ಈತನನ್ನು ಅಧಿಕಾರಿಗಳು ಪ್ರಶ್ನಿಸಿದಾಗ, ಇದು ತಂದೆಯಿಂದ ಬಂದಿರುವ ವೃತ್ತಿ ಎಂದು ಸುಳ್ಳು ಹೇಳುತ್ತಿದ್ದ ಎಂಬುದು ಇದೀಗ ತನಿಖೆಯಲ್ಲಿ ಬಯಲಾಗಿದೆ.

ತೆಲಂಗಾಣದಲ್ಲಿ ಬ್ಯಾನ್ ಆದ ಬೆನ್ನಲ್ಲೇ ಬೆಂಗಳೂರಿಗೆ ಲಗ್ಗೆ

ತೆಲಂಗಾಣದಲ್ಲಿ ಅಧಿಕಾರಿಗಳು ಕ್ಲಿನಿಕ್ ಕ್ಲೋಸ್ ಮಾಡಿದ ಬೆನ್ನಲ್ಲೇ ಈ ನಕಲಿ ಡಾಕ್ಟರ್ ತನ್ನ ವಂಚನೆ ಜಾಲವನ್ನು ಬೆಂಗಳೂರಿಗೆ ವಿಸ್ತರಿಸಿದ್ದ. ನಗರದ ಶಾಂತಿನಗರ, ಕಂಬಿಪುರ ಸೇರಿದಂತೆ ಹಲವು ಕಡೆಗಳಲ್ಲಿ ರಾತ್ರೋರಾತ್ರಿ ಹೊಸ ಕ್ಲಿನಿಕ್‌ಗಳನ್ನು ಓಪನ್ ಮಾಡಿದ್ದ ಅತಾಹುಲ್ಲಾ ಖಾನ್, ತೆಲಂಗಾಣದ ಮಾದರಿಯಲ್ಲೇ ಇಲ್ಲೂ ಕೂಡ ನೂರಾರು ಅಮಾಯಕರನ್ನು ವಂಚಿಸಲು ಶುರು ಮಾಡಿದ್ದ. ಈತನ ನಕಲಿ ದಂದೆಯ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಲಾಗಿತ್ತು. ಆದರೆ, ಅಷ್ಟರಲ್ಲೇ ಈತ ಜನರನ್ನು ಯಾಮಾರಿಸಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದ ಎನ್ನಲಾಗಿದೆ.

ಲೂಟಿ ಹಣದಲ್ಲಿ ದುಬೈ ಟ್ರಿಪ್, ಹುಲಿ ಜೊತೆ ವಿಡಿಯೋ ಶೋಕಿ

ಅಮಾಯಕ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡಿ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದ ಈ ನಕಲಿ ಡಾಕ್ಟರ್ ಅತಾಹುಲ್ಲಾ, ಆ ಹಣದಲ್ಲಿ ಅತ್ಯಂತ ಐಷಾರಾಮಿ ಜೀವನ ನಡೆಸುತ್ತಿದ್ದ. ದುಬಾರಿ ಅಪಾರ್ಟ್‌ಮೆಂಟ್‌ನಲ್ಲಿ ವಾಸ, ಮರ್ಸಿಡಿಸ್ ಬೆಂಜ್ ಐಷಾರಾಮಿ ಕಾರುಗಳ ಓಡಾಟ ಮಾತ್ರವಲ್ಲದೆ, ದುಬೈ ಟ್ರಿಪ್‌ಗಳನ್ನು ಕೈಗೊಂಡು ಅಲ್ಲಿ ಹುಲಿಗಳ ಜೊತೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಸಾರ್ವಜನಿಕರನ್ನು ನಂಬಿಸುತ್ತಿದ್ದ. ತನ್ನ ಈ ದಿವ್ಯ ಜೀವನದ ಪ್ರದರ್ಶನದ ಮೂಲಕವೇ ರೋಗಿಗಳು ಮುಗಿಬಿದ್ದು ಆತನ ಕ್ಲಿನಿಕ್‌ಗೆ ಬರುವಂತೆ ಬಲೆಯನ್ನು ಹೆಣೆದಿದ್ದ.

ಕ್ಯಾನ್ಸರ್ ಚಿಕಿತ್ಸೆ ಹೆಸರಲ್ಲಿ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ

ಹೆಬ್ಬಾವು ಪತ್ತೆಯಾದ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಈ ನಕಲಿ ಡಾಕ್ಟರ್‌ನ ಮತ್ತೊಂದು ಅತ್ಯಂತ ಕರಾಳ ಮತ್ತು ವಿಕೃತ ಮುಖ ಬಯಲಾಗಿದೆ. ಕ್ಯಾನ್ಸರ್ ಚಿಕಿತ್ಸೆ ನೀಡುವ ನೆಪದಲ್ಲಿ ಈತ ತನ್ನ ಬಳಿ ಬರುತ್ತಿದ್ದ ಗಂಡು ರೋಗಿಗಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಗಂಡು ರೋಗಿಯೊಬ್ಬನ ಜೊತೆ ಈತ ಅತ್ಯಂತ ವಿಚಿತ್ರವಾಗಿ ವರ್ತಿಸುತ್ತಿರುವ ವಿಡಿಯೋ ಕೂಡ ಲಭ್ಯವಾಗಿದ್ದು, ಹಲವರ ಜೊತೆ ಈತ ಇದೇ ರೀತಿ ವಿಕೃತಿ ಮೆರೆದಿರುವುದು ಪತ್ತೆಯಾಗಿದೆ. ಗಂಡಸರು ಮಾತ್ರವಲ್ಲದೆ, ಮಹಿಳೆಯರನ್ನೂ ಲೈಂಗಿಕವಾಗಿ ಬಳಸಿಕೊಂಡು, ಅಶ್ಲೀಲ ವಿಡಿಯೋವನ್ನು ರೆಕಾರ್ಡ್​ ಮಾಡಿ, ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಎಂಬ ಆರೋಪವಿದೆ. ಅಲ್ಲದೆ, ಲೈಂಗಿಕವಾಗಿ ಬಳಸಿಕೊಳ್ಳುವುದನ್ನೇ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಎಂದು ನಂಬಿಸುತ್ತಿದ್ದ ಈತನ ಕಾಟಕ್ಕೆ ಬೇಸತ್ತಿದ್ದ ರೋಗಿಗಳು, ಸಮಾಜದಲ್ಲಿ ಮರ್ಯಾದೆಗೆ ಅಂಜಿ ಇದುವರೆಗೆ ಯಾರೂ ದೂರು ನೀಡಿರಲಿಲ್ಲ. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸರು ಹೆಬ್ಬಾವು ಸಾಗಣೆ ಹಾಗೂ ವಂಚನೆ ಮತ್ತು ಲೈಂಗಿಕ ದೌರ್ಜನ್ಯದ ಅಡಿಯಲ್ಲಿ ಈ ನಕಲಿ ವೈದ್ಯನ ವಿರುದ್ಧ ಕಠಿಣ ತನಿಖೆ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net