

ಮೈಸೂರು: ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿಗೆ ಸಂಬಂಧಿಸಿದಂತೆ ಕಾಯಿಲೆಗಳೂ ಕೂಡಾ ಹೆಚ್ಚಾಗುತ್ತಿವೆ ಎಂದು ಕೊಯಂಬತ್ತೂರಿನ ಅವಿನಾಶಿಲಿಂಗಂ ಗೃಹ ವಿಜ್ಞಾನ ಸಂಸ್ಥೆಯ ಪ್ರೊ.ಎಸ್.ಕೌಶಲ್ಯ ವಿಷಾದಿಸಿದರು.
ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ)ಯಲ್ಲಿ ‘ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ’ದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಹದಿಹರಯದವರಲ್ಲೇ ಹೃದಯಾಘಾತ ಜಾಸ್ತಿಯಾಗುತ್ತಿದೆ. ಮಧುಮೇಹವೂ ವಿಪರೀತವಾಗುತ್ತಿದೆ. ಇವುಗಳೊಂದಿಗೆ ಕ್ಯಾನ್ಸರ್, ಚರ್ಮ ಸಂಬಂಧಿನ ಕಾಯಿಲೆಗಳು ಕೂಡಾ ಸೇರಿಕೊಂಡಿವೆ. ಇದಕ್ಕೆ ಕಾರಣ ಆಧುನಿಕತೆಯ ಹೆಸರಿನಲ್ಲಿ ನಮ್ಮ ಜೀವನ ಶೈಲಿಯು ಬದಲಾವಣೆಯಾಗಿರುವುದು. ಒತ್ತಡದಲ್ಲಿ ಕೆಲಸ ಮಾಡುತ್ತಾ ಸಮಯದ ಪರಿಜ್ಞಾನ ಇಲ್ಲದೇ ಹೊತ್ತಲದ ಹೊತ್ತಿನಲ್ಲಿ ಆಹಾರ ಸೇವೆನೆ ಮಾಡುವುದು, ನಿದ್ದೆಯ ಪ್ರಮಾಣ ಕಡಿಮೆಯಾಗಿರುವುದು ಕೂಡ ಕಾಯಿಲೆಗಳ ಆಗಮನಕ್ಕೆ ಕಾರಣವಾಗಿವೆ ಎಂದರು.
ಸಮಾಜದ ಪ್ರತಿಯೊಬ್ಬರ ಆರೋಗ್ಯ ಕಾಪಾಡಲು ಪೌಷ್ಟಿಕಾಂಶಯುಕ್ತ ಆಹಾರ ನೀಡುವುದು ಇಂದಿನ ತುರ್ತಾಗಿದೆ. 2030ರ ವೇಳೆಗೆ ಎಲ್ಲ ರಂಗದಲ್ಲೂ ಸುಸ್ಥಿರ ಅಭಿವೃದ್ಧಿ ಸಾಧನೆಯ ಗುರಿ ಇದ್ದು, ಈ ನಿಟ್ಟಿನಲ್ಲಿ ವಿಶ್ವದ ರಾಷ್ಟ್ರಗಳು ಶ್ರಮಿಸುತ್ತಿವೆ. ಆದ್ದರಿಂದ ಅಪೌಷ್ಟಿಕತೆಯನ್ನು ದೂರ ಮಾಡಿ ಸರ್ವರಿಗೂ ಪೋಷಕಾಂಶಯುಕ್ತ ಆಹಾರ ನೀಡುವುದರ ಮೂಲಕ ಈ ಗುರಿಯನ್ನು ತಲುಪುದಕ್ಕೆ ಮಾತ್ರ ಸಾಧ್ಯ ಎಂದರು.
ಯುವ ಜನಾಂಗದಲ್ಲಿ ಇತ್ತೀಚಿಗೆ ಸ್ಥೂಲಕಾಯ ಹೆಚ್ಚಾಗುತ್ತಿದೆ. ಶರೀರವನ್ನು ಸಪೂರ ಮಾಡಿಕೊಳ್ಳಲು ಜಾಹೀರಾತುಗಳಲ್ಲಿ ತೋರಿಸುವ ಆಹಾರ ಪದಾರ್ಥ ಸೇವೆನೆ ಮಾಡುವುದು, ಟಾನಿಕ್‌ಗಳನ್ನು ಕುಡಿಯುವುದು. ಇದರಿಂದ ಸ್ಥೂಲಕಾಯ ಕರಗುವುದಿಲ್ಲ. ಬದಲಾಗಿ ದೇಹದಲ್ಲಿ ಅಡ್ಡ ಪರಿಣಾಮ ಉಂಟಾಗುತ್ತದೆ. ಏಕೆಂದರೆ ದೈಹಿಕ ಚಟುವಟಿಕೆಗಳನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸದೇ ಶರೀರ ಸದೃಢವಾಗಿ ಇರಲು ಸಾಧ್ಯವಿಲ್ಲ. ಆದ್ದರಿಂದ ಇಂತಹ ಮೋಹಕ ಜಾಹೀರಾತುಗಳ ಮೋಹಕ್ಕೆ ಬೀಳದೆ, ನಮ್ಮ ಶರೀರಕ್ಕೆ ಪೂರಕವಾಗಿರುವ ಆಹಾರವನ್ನು ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಕೃತಿಯು ಪರಿಸರ ಹಾಗೂ ಸ್ಥಳೀಯ ಹವಾಗುಣಕ್ಕೆ ತಕ್ಕಂತೆ ಆಹಾರ ವೈವಿಧ್ಯತೆಯನ್ನು ರೂಪಿಸಿದೆ. ಈ ಆಹಾರಗಳನ್ನೇ ಸರಿಯಾದ ವೇಳೆಗೆ ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ. ದಕ್ಷಿಣ ಭಾರತದವರು ಬೆಳಗಿನ ಉಪಹಾರಕ್ಕೆ ಇಡ್ಲಿ, ದೋಸೆ, ಉಪ್ಪಿಟ್ಟು, ಶೇಂಗಾ ಚೆಟ್ನಿ, ಕಾಯಿ ಚೆಟ್ನಿ ಮುಂತಾದವುಗಳನ್ನು ಉಪಯೋಗಿಸಿಬೇಕು. ದುಬಾರಿಯಲ್ಲದ ಹಣ್ಣುಗಳು ನಮ್ಮಲ್ಲಿ ಲಭ್ಯವಿವೆ. ಸೀಬೆಹಣ್ಣು, ನೇರಳೆ, ಜಂಬೂನೇರಳೆ ಸ್ಥಳೀಯವಾಗಿ ಸಿಗುತ್ತವೆ. ಇವುಗಳನ್ನು ಹೇರಳವಾಗಿ ಸೇವನೆ ಮಾಡಿದರೆ ವಿಟಮಿನ್ ಸಿಗುತ್ತದೆ ಎಂದರು.