

ಮೂಡಿಗೆರೆ: ಹ್ಯಾಂಡ್‌ಪೋಸ್ಟ್‌ನಿಂದ ಚಿಕ್ಕಮಗಳೂರಿನ ಮೂಗ್ತೀಹಳ್ಳಿವರೆಗೆ 26 ಕಿ.ಮೀ. ಕಿರಿದಾದ ರಾಷ್ಟ್ರೀಯ ಹೆದ್ದಾರಿ 173ರ ವಿಸ್ತರಣೆ ಪ್ರಕ್ರಿಯೆಯನ್ನು ಹೆದ್ದಾರಿ ಪ್ರಾಧಿಕಾರ ಇನ್ನೂ ಆರಂಭಿಸಿಲ್ಲ. ಹೀಗಾಗಿ ಹೆದ್ದಾರಿಯ ಉದ್ದಕ್ಕೂ ಅಲ್ಲಲ್ಲಿ ದೊಡ್ಡ ಗುಂಡಿಗಳಾಗಿದ್ದು ವಾಹನ ಸವಾರರಿಗೆ ಸಂಚಾರ ದುಸ್ತರವಾಗಿದೆ.
ಬದಿಯಲ್ಲಿ ಚರಂಡಿಯಿಲ್ಲದೆ ಮಳೆ ನೀರು ಹರಿದು ದೊಡ್ಡ ಗಾತ್ರದ ಗುಂಡಿಗಳಾಗಿವೆ. ರಸ್ತೆ ಕಾಣದಷ್ಟು ದೊಡ್ಡದಾಗಿ ಬದಿಯಲ್ಲಿ ಗಿಡಗಂಟಿಗಳು ಬೃಹದಾಕಾರವಾಗಿ ಬೆಳೆದು ರಸ್ತೆಯನ್ನು ಕಬಳಿಸಿವೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆಂದು ಸರ್ಕಾರದಿಂದ ಈಗಾಗಲೇ 410 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಹೆದ್ದಾರಿಯ ಸರ್ವೇ ಕಾರ್ಯ ಮಾತ್ರ ಆಗಾಗ ನಡೆಯುತ್ತಿದೆ. ವಿಸ್ತರಣೆಗೆ ಟೆಂಡರ್ ಪ್ರಕ್ರಿಯೆ ನಡೆದ ಬಳಿಕ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಭೂಸ್ವಾಧೀನಕ್ಕೆ 200 ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆಯಾಗಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಸದ್ಯ ರಸ್ತೆ ವಿಸ್ತರಣೆ ಇನ್ನೂ ಮುಂದಿನ ಒಂದು ವರ್ಷದವರೆಗೆ ನಡೆಯುವಂತೆ ಕಾಣುತ್ತಿಲ್ಲ. ಅಷ್ಟರವರೆಗೆ ರಸ್ತೆಯ ಗುಂಡಿಗಳನ್ನು ಮುಚ್ಚಿ ಬದಿಯಲ್ಲಿ ಬೆಳೆದಿರುವ ಪೊದೆಗಳನ್ನು ಕತ್ತರಿಸಿದರೆ ವಾಹನ ಸಂಚಾರಕ್ಕೆ ತಕ್ಕಮಟ್ಟಿಗೆ ಅನುಕೂಲವಾಗಬಹುದು. ಮೂಡಿಗೆರೆಯಿಂದ ಕಡೂರುವರೆಗೆ 70 ಕಿ.ಮೀ. ದೂರದ ಈ ಹೆದ್ದಾರಿಯನ್ನು ಕಡೂರಿನಿಂದ ಮೂಗ್ತೀಹಳ್ಳಿವರೆಗೆ 44 ಕಿ.ಮೀ. ವಿಸ್ತರಣೆ ನಡೆದಿದೆ. ಇನ್ನೂ 26 ಕಿ.ಮೀ. ವಿಸ್ತರಣೆಗೆ ಹೆದ್ದಾರಿ ಪ್ರಾಧಿಕಾರ ಇದುವರೆಗೂ ಗಮನ ಹರಿಸಿಲ್ಲ. ಹೆದ್ದಾರಿ ಬದಿಯಲ್ಲಿ ಮಳೆ ನೀರು ಹರಿಯಲು ಚರಂಡಿಯಿಲ್ಲದೆ ಮಳೆಗಾಲದಲ್ಲಿ ಪಟ್ಟಣದ ಗಂಗನಮಕ್ಕಿ ಮತ್ತು ಬಿಳಗುಳ ಗ್ರಾಮದಲ್ಲಿ ಹೆದ್ದಾರಿ ಸಂಪೂರ್ಣ ಜಲಾವೃತವಾಗಿ ನಾಲ್ಕೈದು ಬಾರಿ ವಾಹನಗಳು ಸಂಚರಿಸಲು ಸಾಧ್ಯವಾಗದೆ ಸಾಲುಗಟ್ಟಿ ನಿಂತಿತ್ತು. ಆದರೂ ಚರಂಡಿ ನಿರ್ಮಿಸಲು ಅಧಿಕಾರಿಗಳು ಇನ್ನು ತೊಡಗಿಲ್ಲ.
ಮೂಡಿಗೆರೆಯಲ್ಲಿ ಹಾದುಹೋಗುವ ಈ ರಸ್ತೆ ಹಿಂದೆ ರಾಜ್ಯ ಹೆದ್ದಾರಿಯಾಗಿತ್ತು. ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣ ಪ್ರತಿನಿತ್ಯ ಟ್ರಾಫಿಕ್ ಜಾಮ್ ಕಿರಿಕಿರಿಯಿಂದ ಜನ ಬೇಸರಗೊಂಡಿದ್ದಾರೆ. ಹಳೇಮೂಡಿಗೆರೆ ಗ್ರಾಪಂ ಕಚೇರಿಯಿಂದ ಬಿಳಗುಳ ಗ್ರಾಮದ ಕೊಲ್ಲಿಬೈಲ್ ತಿರುವಿನರವರೆಗೆ 4 ಕಿ.ಮೀ. ರಸ್ತೆ ವಿಸ್ತರಣೆಗೆ 2012ರಲ್ಲಿ ಅಂದಿನ ಶಾಸಕ ಎಂ.ಪಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಕೆ.ಎಂ.ರಸ್ತೆ ಬದಿಯ ಕಟ್ಟಡ ಮಾಲೀಕರು ಹಾಗೂ ಸಾರ್ವಜನಿಕರ ಸಭೆಯನ್ನು ತಾಪಂ ಸಭಾಂಗಣದಲ್ಲಿ 6 ಬಾರಿ ನಡೆಸಿ ರಸ್ತೆ ಮಧ್ಯದಿಂದ 2 ಬದಿಯಲ್ಲೂ ತಲಾ 45 ಅಡಿ, ಒಟ್ಟು 90 ಅಡಿ ರಸ್ತೆ ವಿಸ್ತರಣೆಗೆ ತೀರ್ಮಾನಿಸಿ 67 ಕೋಟಿ ರೂ. ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆಗ ಕೆ.ಎಂ.ರಸ್ತೆಗೆ ಹೊಂದಿಕೊಂಡಂತೆ ಪಟ್ಟಣದ ಉದ್ದಕ್ಕೂ ಕಟ್ಟಡಗಳಿತ್ತು. ರಸ್ತೆ ವಿಸ್ತರಣೆಯಾಗುತ್ತದೆ ಎಂದು ಕಟ್ಟಡಗಳ ಮಾಲೀಕರು ಹಳೆಯ ಕಟ್ಟಡಗಳನ್ನು ತೆರೆವುಗೊಳಿಸಿ ರಸ್ತೆಗೆ ಜಾಗ ಬಿಟ್ಟು ದೂರದಲ್ಲಿ ತಮ್ಮ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. 2012ರಲ್ಲಿ ಜಯಪ್ರಕಾಶ ಹೆಗಡೆ ಸಂಸದರಾಗಿದ್ದಾಗ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿದ ಬಳಿಕ ರಾಷ್ಟ್ರೀಯ ಹೆದ್ದಾರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಪ್ರಕ್ರಿಯೆ ಕೈ ಬಿಡಲಾಗಿತ್ತು.
12 ವರ್ಷ ಕಳೆದರೂ ಈ ಹೆದ್ದಾರಿ ವಿಸ್ತರಣೆಯಾಗಲಿಲ್ಲ. ರಸ್ತೆ ನಿರ್ವಹಣೆಯೂ ಇಲ್ಲದೆ ನನೆಗುದಿಗೆ ಬಿದ್ದಿದೆ. ವಾಹನ ಸವಾರರು ಮಾತ್ರ ರಸ್ತೆ ವಿಸ್ತರಣೆಗೊಳ್ಳದಿರುವ ಕಾರಣ ಸರ್ಕಾರಕ್ಕೆ ನಿರಂತರವಾಗಿ ಹಿಡಿಶಾಪ ಹಾಕುತ್ತಿದ್ದಾರೆ.