ನ್ಯಾಷನಲ್ ಹೆರಾಲ್ಡ್ ಪ್ರಕರಣ, ಬಿಜೆಪಿ ರಾಜಕಾರಣ; ಪಲ್ಲಂ ರಾಜು|National Herald case

palmm
Published on

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣ ಬಿಜೆಪಿಯ ಆವಿಷ್ಕಾರ(National Herald case is an invention of BJP). ಜಾರಿ ನಿರ್ದೇಶನಾಲಯ(ಇಡಿ) ಹೇಳುತ್ತಿರುವುದು ಸತ್ಯವಲ್ಲ. ನಮ್ಮ ನಾಯಕರ ಮೇಲೆ ಸುಳ್ಳು ಕೇಸ್ ದಾಖಲಿಸಿದೆ ಎಂದು ಕೇಂದ್ರದ ಮಾಜಿ ಸಚಿವ ಪಲ್ಲಂ ರಾಜು(Pallam Raju) ಹೇಳಿದರು.

400 ಕೋಟಿ ಭ್ರಷ್ಟಾಚಾರ ಆಗಿದೆ ಎಂದು ಇಡಿ ಹೇಳುತ್ತಿದೆ. ಐಟಿ ಕೂಡ ಈ ಆರೋಪವನ್ನು ಮಾಡಿದೆ. ಇದೆಲ್ಲವೂ ನಿರಾಧಾರ. ಇದರಲ್ಲಿ ನಿರ್ದೇಶಕರಿಗೆ ಯಾವುದೇ ಲಾಭವಿಲ್ಲ. ಒಂದು ಪೈಸೆ ಅಥವಾ ಆಸ್ತಿ ವರ್ಗಾಯಿಸದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯ ಆರೋಪ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ನ್ಯಾಷನಲ್ ಹೆರಾಲ್ಡ್ ಸಂಪೂರ್ಣ ಜನಪರವಾಗಿ ಕೆಲಸ ಮಾಡ್ತಿರುವ ಸಂಸ್ಥೆ. ಬಿಜೆಪಿ ಈ ವಿಚಾರದಲ್ಲಿ ರಾಜಕಾರಣಮಾಡುತ್ತಿದೆ. ಅಸೋಸಿಯೇಟೆಡ್ ಜನರಲ್ಗೆ ಇತಿಹಾಸವಿದೆ. 1937-38 ರಲ್ಲಿ ಪ್ರಾರಂಭವಾದ ಪತ್ರಿಕೆ. ಸ್ವಾತಂತ್ರ್ಯ ಹೋರಾಟ ಕುರಿತಂತೆ ಹುಟ್ಟಿಕೊಂಡ ಪತ್ರಿಕೆ. ಬ್ರಿಟೀಷರ ವಿರುದ್ಧ ಹೋರಾಟ ರೂಪಿಸಲು ಸಹಾಯಕವಾಗಿತ್ತು. ಯಂಗ್ ಇಂಡಿಯಾದಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನಿರ್ದೇಶಕರು. ಮೋತಿಲಾಲ್ ವೋರಾ ಅವರು ನಿರ್ದೇಶಕರಾಗಿದ್ದರು. 90 ಕೋಟಿ ಮೌಲ್ಯದ ಆಸ್ತಿ 50 ಲಕ್ಷಕ್ಕೆ ಖರೀದಿ ಮಾಡಿದ್ದಾರೆಂಬ ಆರೋಪದಲ್ಲಿ ಹುರುಳಿಲ್ಲ ಎಂದರು.

ಎಜೆಎಲ್ ಗೆ ಸೇರಿದ ಆರು ಆಸ್ತಿಗಳು ಇವೆ. ಲೀಸ್ ಆಧಾರದ ಮೇಲೆ ಈ ಸಂಸ್ಥೆಗಳು ನಡೆಯುತ್ತಿವೆ. ಕಂಪನಿಯಿಂದ ಯಾವ ಲಾಭ ಇಲ್ಲ. ನಿರ್ದೇಶಕರು ಲಾಭವನ್ನು ಪಡೆಯುತ್ತಿಲ್ಲ. ಆದರೆ, ಬಿಜೆಪಿ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.

ಇಡಿ ಕೇಸ್ ದಾಖಲಿಸಿ ತನಿಖೆ ನಡೆಸಿದೆ. ಚಾರ್ಜ್‌ಶೀಟ್ ಕೂಡ ಸಲ್ಲಿಸಿದೆ. ದೊಡ್ಡ ಭ್ರಷ್ಟಾಚಾರ ನಡೆದಿದೆ ಅಂತ ಹೇಳಿದೆ. ಇಡಿ ಹೇಳುತ್ತಿರುವುದು ಸತ್ಯವಲ್ಲ. ಸೋನಿಯಾ, ರಾಹುಲ್ ಗಾಂಧಿ ಮೇಲೆ ಬಿಜೆಪಿ ರಾಜಕೀಯ ದ್ವೇಷ ಮಾಡುತ್ತಿದೆ. ಇಡಿಯವರು ಚಾರ್ಜ್‌ಶೀಟ್ ಹಾಕಲು ಏನಿದೆ? ಎಂದು ಪ್ರಶ್ನಿಸಿದರು.

ರಾಷ್ಟ್ರ ಎದುರಿಸುತ್ತಿರುವ ನಿರ್ಣಾಯಕ ಸಮಸ್ಯೆಗಳಿಂದ ಸಾರ್ವಜನಿಕ ಗಮನವನ್ನು ಬೇರೆಡೆಗೆ ತಿರುಗಿಸಲು ಈ ಪ್ರಕರಣ ಎಳೆ ತರಲಾಗಿದೆ. ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಪ್ರತಿಪಕ್ಷಗಳನ್ನು ಗುರಿಯಾಗಿಸಿದೆ. ಸ್ವಾತಂತ್ರ್ಯ ಹೋರಾಟವನ್ನು ವಿರೂಪ ಮಾಡುವುದರ ಜತೆಗೆ ಅದರ ಪರಂಪರೆಯನ್ನು ಅವಹೇಳನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಜೋಡಿಯು ಕಾಂಗ್ರೆಸ್ ಮೇಲೆ ಸುಲಿಗೆ ಯಂತ್ರವಾದ ಇಡಿಯನ್ನು ಅಸವಾಗಿ ಬಳಕೆ ಮಾಡುತ್ತಿದೆ. ಮೋದಿ ಸರ್ಕಾರ ಇಡಿಯನ್ನು ತನ್ನ ವಿರೋಧಿಗಳನ್ನು ಹಣಿಯಲು ಬಳಕೆ ಮಾಡಿಕೊಳ್ಳುತ್ತಿದೆ. ಪದೇ ಪದೇ ಸೇಡಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಡಿ ಪ್ರಕರಣಗಳ ಶಿಕ್ಷೆಯ ಪ್ರಮಾಣ ಕೇವಲ ಶೇ.1 ಆಗಿದೆ. ಇದಲ್ಲದೆ, ಇಡಿ ದಾಖಲಿಸಿದ ಶೇ.98 ಪ್ರಕರಣಗಳು ರಾಜಕೀಯ ಪ್ರೇರಿತ ಪ್ರಕರಣಗಳಾಗಿವೆ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರದ ಎಲ್ಲ ಕುತಂತ್ರ, ರಾಜಕೀಯ ಸೇಡನ್ನು ಕಾಂಗ್ರೆಸ್ ದಿಟ್ಟವಾಗಿ ಎದುರಿಸಲಿದೆ. ಸತ್ಯಕ್ಕೆ ಜಯ ಸಿಗುತ್ತದೆ ಎಂದು ಪಲ್ಲಂ ರಾಜು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮ್ಮಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಬಾಲರಾಜ್, ಸತ್ಯನಾರಾಯಣ, ರುಕ್ಸಾನಾ, ಹುಚ್ಚಪ್ಪ, ಶ್ರೀನಿವಾಸಮೂರ್ತಿ, ವಕ್ತಾರ ನಂದನ್ ಕಶ್ಯಪ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net