

ಶಿವಮೊಗ್ಗ: ರೈಲ್ವೆ ನಿಲ್ದಾಣದ ಮುಂಭಾಗವಿದ್ದ ಬೃಹತ್ ರಾಷ್ಟ್ರಧ್ವಜವು ಧ್ವಜಸ್ತಂಭದಿಂದ ಕೆಳಗೆ ಬಿದ್ದಿದ್ದು ತಕ್ಷಣವೇ ನಿಲ್ದಾಣದ ಬಳಿ ಇರುವ ಆಟೋ ಚಾಲಕರು ಧ್ವಜವನ್ನು ಮಡಚಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ರಾತ್ರಿ 7.45ರ ಹೊತ್ತಿಗೆ ಬೃಹತ್ ರಾಷ್ಟ್ರಧ್ವಜ ಧ್ವಜಸ್ತಂಭದಿಂದ ಕೆಳಗೆ ಬಿದ್ದಿದೆ. ಧ್ವಜಸ್ತಂಭದಲ್ಲಿನ ಹುಕ್ ತುಂಡಾಗಿದ್ದರಿಂದ ಘಟನೆ ಸಂಭವಿಸಿದೆ. ಧ್ವಜ ಕೆಳಗೆ ಬಿದ್ದಿರುವುದನ್ನು ಕಂಡ ಆಟೋ ಚಾಲಕರು ತಕ್ಷಣವೇ ಅದನ್ನು ಮೇಲೆತ್ತಿ ಮಡಚಿದ್ದಾರೆ. ಬಳಿಕ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಟೋ ಚಾಲಕರ ಕರ್ತವ್ಯ ಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಧ್ವಜಸ್ತಂಭದಲ್ಲಿ ಕಳಪೆ ಗುಣಮಟ್ಟದ ಹುಕ್ ಬಳಕೆ ಮಾಡಿರುವ ಸಾಧ್ಯತೆ ಇದೆ. ಹಾಗಾಗಿ ಧ್ವಜ ತುಂಡಾಗಿ ಕಳಗೆ ಬಿದ್ದಿದೆ. ಆ ಸಂದರ್ಭ ಪ್ರಯಾಣಿಕರಾರೂ ಇರಲಿಲ್ಲ. ಆಟೋ ಚಾಲಕರು, ಮಾಲೀಕರೇ ಹೋಗಿ ಧ್ವಜವನ್ನು ಗೌರವಯುತವಾಗಿ ಮಡಚಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದೇವೆ ಎಂದು ರೈಲ್ವೆ ನಿಲ್ದಾಣದ ಆಟೋ ಚಾಲಕರ ಸಂಘದ ಅಧ್ಯಕ್ಷ ಸಂತೋಷ್ ತಿಳಿಸಿದರು.
2020ರಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ರಾಷ್ಟ್ರಧ್ವಜ ಉದ್ಘಾಟಿಸಿದ್ದರು. ಅಲ್ಲಿಂದ ಇಲ್ಲಿವರೆಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 12 ಬಾರಿ ರಾಷ್ಟ್ರಧ್ವಜ ಬದಲಿಸಲಾಗಿದೆ. ಈ ರಾಷ್ಟ್ರಧ್ವಜವನ್ನು ಮೈಸೂರಿನಿಂದ ತರಿಸಲಾಗುತ್ತಿದೆ. ಧ್ವಜ ಕಂಬದ ವೀಲುಗಳು ಹಾಳಾಗಿದ್ದು ರಾಷ್ಟ್ರಧ್ವಜ ಬೀಳಲು ಕಾರಣ ಎಂದು ಅಧಿಕಾರಿಗಳು ಸಮರ್ಥನೆ ನೀಡಿದ್ದಾರೆ.