

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ನೂತನ ಶಿಕ್ಷಣ ನೀತಿಯನ್ನು ಪರಿಚಯಿಸಿದೆ. ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ ನಂತರ 2020ರ ಜುಲೈ 29ರಂದು ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಬಿಡುಗಡೆ ಮಾಡಿತು. ಮೂರು ವರ್ಷ ಸಂದ ಸಂದರ್ಭದಲ್ಲಿ ನೂತನ ನೀತಿಯ ಮಹತ್ವ ಸಾರುವ ಲೇಖನ ಇದು.
ಕೋವಿಡ್ ನಮಗೆ ಕಲಿಸಿರುವ ಪಾಠದ ಆಧಾರದ ಮೇಲೆ ಹೊಸ ಆಲೋಚನಾ ಪದ್ಧತಿಯ ಯುವ ಪೀಳಿಗೆಯನ್ನು ಬೆಳೆಸುವುದು ಶಿಕ್ಷಣ ಕ್ಷೇತ್ರದ ಮುಖ್ಯ ಗುರಿ. ಕಳೆದ ಮೂರು ವರ್ಷಗಳಲ್ಲಿ ಶಿಕ್ಷಣ ಜಗತ್ತು, ರಾಷ್ಟ್ರೀಯ ಶಿಕ್ಷಣ ನೀತಿಯ ನೆರಳಿನಲ್ಲಿ ಗುಣಮಟ್ಟದ ಶಿಕ್ಷಣದ ಬಗ್ಗೆ ಒತ್ತು ಕೊಡುತ್ತಿರುವುದು ಗಮನಾರ್ಹ. ಮಕ್ಕಳ ಮೇಲೆ ಇರುವ ಪಠ್ಯ ಪುಸ್ತಕಗಳ ಭಾರ ಕಡಿಮೆ ಮಾಡಬೇಕು, ಆಡುತ್ತಾ ನಲಿಯುತ್ತಾ ಕಲಿಯ ಬೇಕು, ಆಟ, ಯೋಗ, ಚಿತ್ರ ಕಲೆ, ಸಂಗೀತ, ಪಾಕ ಕಲೆ, ಶಿಕ್ಷಣದ ಬಹು ಮುಖ್ಯ ಭಾಗಗಳಾಗಬೇಕು ಎಂಬ ಎನ್ಇಪಿಯ ಆಶಯ ಶಿಕ್ಷಣ ಕ್ಷೇತ್ರದಲ್ಲಿ ಸಂಚಲನವನ್ನು ತಂದಿದೆ. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಮಾತ್ರ ಶಿಕ್ಷಣ ಎಂದು ನಂಬಿದ್ದ ಸಮಾಜದಲ್ಲಿ ದೇಶದ ಹಳ್ಳಿ, ಕೆರೆ ಕುಂಟೆ, ಕೃಷಿ, ಗಿಡ, ಮರ, ಹಸು, ಎಮ್ಮೆ, ಎತ್ತು ಕೂಡ ದೇಶದ ಬಹು ದೊಡ್ಡ ಸಂಪತ್ತು ಎಂಬ ಜಾಗೃತಿ ಮೂಡ ತೊಡಗಿದೆ. ಬಡಿಗ, ಕುಂಬಾರ, ಕಮ್ಮಾರ, ಅಗಸ, ಕ್ಷೌರಿಕ, ಉಪ್ಪಾರ, ನೀರ ಗಂಟಿ ವೃತ್ತಿಗಳು ಹಳ್ಳಿಯ ಆರ್ಥಿಕ ನೆಲೆಗಳನ್ನು ಪೋ›ತ್ಸಾಹಿಸುವುದು, ಬೆಳೆಸುವುದು ದೇಶದ ಆರ್ಥಿಕತೆಯ ಭಾಗವಾಗಬೇಕು ಎಂಬ ಹೊಸ ತಿಳಿವಳಿಕೆ ಸಮಾಜದಲ್ಲಿ ಮೂಡುತ್ತಿರುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧನೆ. ಮಾರುಕಟ್ಟೆಯ ಏರು ಪೇರು, ಹವಾಮಾನ ವೈಪರೀತ್ಯ, ಮಳೆ ನೀರಿನ ಕೊಯ್ಲು, ತ್ಯಾಜ್ಯ ವಿಜ್ಞಾನ - ಗಾರ್ಬೆಲೊಜಿ, ಹೊಸ ಆರ್ಥಿಕ ಅವಕಾಶಗಳಿರುವ ಶೈಕ್ಷಣಿಕ ವಲಯಗಳಾಗಿವೆ ಎಂದು ಶಿಕ್ಷಣ ನೀತಿ ಸಾರಿ ಸಾರಿ ಹೇಳ ತೊಡಗಿದೆ. ಪರಿಸರ ರಕ್ಷಣೆ, ಜಲಮೂಲಗಳ ಸ್ವಚ್ಚತೆ ಮತ್ತು ರಕ್ಷಣೆ, ನೀರಿನ ಮಿತವ್ಯಯ ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು ಎಂದು ಪ್ರತಿಪಾದಿಸುವ ಶಿಕ್ಷಣ ನೀತಿ, ಹೊಸ ಪೀಳಿಗೆಯ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆಯ ತಿಳಿವಳಿಕೆ ನೀಡುವಲ್ಲಿ ಸಮರ್ಥವಾಗಿದೆ.
ಮುಂದಿನ ದಿನಗಳಲ್ಲಿ ನಮ್ಮ ದೇಶ ಅತ್ಯಂತ ದೊಡ್ಡ ಪ್ರಮಾಣದ ಯುವ ಪೀಳಿಗೆಯನ್ನು ಹೊಂದಲಿದೆ ಎಂದು ಅಂಕಿ ಸಂಖ್ಯೆಗಳು ಸಾರಿ ಹೇಳುತ್ತಿವೆ. ಈ ಬಹು ದೊಡ್ಡ ಮಾನವ ಸಂಪನ್ಮೂಲವನ್ನು ಕುಶಲ ಕರ್ವಿುಗಳ ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಮೂಲಕ ಭಾರತ ವಿಶ್ವ ಗುರುವಿನ ಸ್ಥಾನ ಪಡೆಯಬಲ್ಲದು ಎಂಬ ದೇಶದ ಆಶಯಕ್ಕೆ ಅನುಗುಣವಾಗಿ ಶಿಕ್ಷಣ ರೂಪಿಸುವ ಹೊಣೆ ನಮ್ಮೆಲ್ಲರ ಮೇಲೆ ಇದೆ ಎಂಬುದು ಗಮನಾರ್ಹ. ಮುಂದಿನ ದಿನಗಳಲ್ಲಿ ವಿಫುಲ ಅವಕಾಶ ಇರುವ, ಡಿಜಿಟಲ್ ಕಾಮರ್ಸ್, ಡಾಟಾ ಸೈನ್ಸ್, ಡಾಟಾ ವಿಜ್ಞಾನ, ಪ್ರತಿಭಾ ನಿರ್ವಹಣೆ, ಸೇವಾ ಕ್ಷೇತ್ರದ ಉದ್ಯೋಗಗಳು, ಬಳಕೆದಾರರ ಸೇವಾ ನಿರ್ವಹಣೆ, ಸಾಮಾಜಿಕ ಮುಖಂಡತ್ವ ಮುಂತಾದವು ಮುಂದಿನ ದಿನಗಳ ಹೊಸ ಉದ್ಯೋಗಳಾಗಲಿವೆ ಎಂಬ ಶಿಕ್ಷಣ ನೀತಿಯ ಧೋರಣೆ, ಭಾರತೀಯ ಶೈಕ್ಷಣಿಕ ದಿಕ್ಕನ್ನು ಬದಲಿಸಲಿದೆ.
ವೈಫೈ ಹಾಗೂ ಅದರ ವಿರಾಟ ಶಕ್ತಿಯನ್ನು ಶಿಕ್ಷಣದ ಪ್ರತಿಯೊಂದು ವಿಷಯದ ಭಾಗವಾಗಿಸುವ ಮೂಲಕ ಆಧುನಿಕ ಜಗತ್ತಿನ ಈ ಹೊಸ ವ್ಯಾಪಾರಿ ಕೌಶಲವನ್ನು ಕರಗತ ಮಾಡಿ ಕೊಳ್ಳುವ ಕಲೆಯನ್ನ ಹೊಸ ಪೀಳಿಗೆಯವರಿಗೆ ಕಲಿಸುವ ಅವಶ್ಯಕತೆಯನ್ನು ಶಿಕ್ಷಣ ನೀತಿ ಪ್ರತಿಪಾದಿಸುತ್ತದೆ. ಯಾವುದೇ ವಸ್ತುವನ್ನು ಮಾರುವ, ಕೊಳ್ಳುವ ಚಾಕಚಕ್ಯತೆಯನ್ನು ಹೊಂದಿರುವ ವೈಫೈ ಇವತ್ತಿನ ಬಹು ದೊಡ್ಡ ವ್ಯಾಪಾರಿ ಮಾಧ್ಯಮವಾಗಿದೆ. ಇದನ್ನು ಈಗ ಕೇವಲ ಕಂಪ್ಯೂಟರ್ ಸೈನ್ಸ್ ಓದುವ ಮಕ್ಕಳಿಗೆ ಕಲಿಸಲಾಗುತ್ತಿದೆ ಆದರೆ ಮುಂದಿನ ದಿನಗಳಲ್ಲಿ ಬೇಡಿಕೆಯನ್ನು ಪೂರೈಸಲು ಭಾಷೆ, ಸಮಾಜ ವಿಜ್ಞಾನ, ಯೋಗ ವಿಜ್ಞಾನ, ದೈಹಿಕ ಶಿಕ್ಷಣ, ಒಕ್ಕಲುತನ, ವಾಣಿಜ್ಯ ಮುಂತಾದ ಶೈಕ್ಷಣಿಕ ವಲಯದ ವಿವಿಧ ಕ್ಷೇತ್ರಗಳಿಗೂ ವೈಫೈ ಅಧ್ಯಯನವನ್ನು ವಿಸ್ತರಿಸುವುದು - ಸ್ಥಳೀಯ ಉತ್ಪಾದನಾ ಕೇಂದ್ರಗಳಾದ ಹೈನುಗಾರಿಕೆ, ತರಕಾರಿ ಹಣ್ಣು ಹಂಪಲು ಉತ್ಪಾದನೆ , ಕೈ ಕುಸುರಿ ಕೆಲಸ, ದೇಸಿ ತಿಂಡಿ ತಿನಿಸುಗಳನ್ನ ಜಾಗತಿಕ ಮಟ್ಟದಲ್ಲಿ ಮಾರುವ ಜಾಲ ವಿಸ್ತರಿಸುವ ಮೂಲಕ ಹೊಸ ವಾಣಿಜ್ಯ ವಲಯಗಳನ್ನ ಗ್ರಾಮೀಣ ಉತ್ಪಾದನೆಗಳಿಗೆ ತೆರೆಯಲು ಸಾಧ್ಯ ಎಂಬುದನ್ನು ಈ ಮೂರು ವರ್ಷಗಳಲ್ಲಿ ನಾವು ಮನಗಂಡಿದ್ಡೇವೆ. ಲೋಕಲ್ ಪೆ ವೋಕಲ್ ಎನ್ನುವ ಘೊಷಣೆ ಗ್ರಾಮೀಣ ಉತ್ಪಾದನೆ ಮಾರುಕಟ್ಟೆಯನ್ನ ವಿಸ್ತರಿಸುವ ಹೆಬ್ಬಾಗಿಲಾಗಲಿದೆ.
ಸ್ಥಳೀಯ ಉತ್ಪಾದನೆ, ಕುಸುರಿ ಕೆಲಸ, ಕಸೂತಿ, ಹೆಣಿಗೆ, ದೇಶೀ ತಿಂಡಿ ಊಟದ ಉತ್ಪಾದನೆ, ದೇಶೀ ಸಂಗೀತ, ನೃತ್ಯ, ಕಲೆ, ಪೇಂಟಿಂಗ್, ಆಟಗಳು ಪಠ್ಯ ಪುಸ್ತಕಗಳ ಭಾಗವಾಗಬೇಕು. ಸ್ಥಳೀಯ ಕೌಶಲಗಳು, ಕುಶಲಕರ್ವಿುಗಳು, ಶಾಲೆ-ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳಿಗೆ ತರಬೇತಿ ಕೊಡುವಂತಾಗಬೇಕು. ನಾಟಿ ವೈದ್ಯ, ಗಿಡಮೂಲಿಕೆ ಔಷಧಿ, ದೇಶಿ ತಳಿಯ ಬೀಜಗಳ ಸಂರಕ್ಷಣೆ, ಹವಾಮಾನ ವೈಪರೀತ್ಯವನ್ನು ತಡೆಯಬಲ್ಲ ದೇಶೀ ಜ್ಞಾನ ಪರಂಪರೆಯ ಭಾಗವಾಗಿವೆ. ಇಂಥ ಎಂದೂ ಅಳಿಯದ ದೇಶೀ ಪರಂಪರೆ ಶಿಕ್ಷಣದ ಭಾಗವಾಗಬೇಕು. ಶಿಕ್ಷಕರನ್ನು ಈ ಹೊಸ ರೀತಿಯ ಆಲೋಚನಾ ಪದ್ದತಿಯ ಭಾಗವಾಗಿಸಬೇಕು. ಅದಕ್ಕಾಗಿ ಸದಾ ಕಲಿಯಲು ಸಿದ್ಧರಿರುವ, ಅನುಪಯುಕ್ತ ಹಳೆಯದನ್ನು ಮರೆತು ಹೊಸ ತಂತ್ರಜ್ಞಾನ, ತಿಳಿವಳಿಕೆಯ ಮರು ಕಲಿಕೆಗೆ ತಯಾರಿರುವ ಶಿಕ್ಷಕರನ್ನು ತರಬೇತಿಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಂಚಲನವನ್ನು ಉಂಟುಮಾಡುವಲ್ಲಿ ಸಫಲವಾಗಿದೆ.
ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಂತ್ರಜ್ಞಾನ, ಔಷಧ ವಿಜ್ಞಾನ, ವಿಜ್ಞಾನದ ಮುಂದೆ ಬದಲಾಗಲಿರುವ ಜಾಡನ್ನು ಗುರುತಿಸುವುದು, ಆ ಬದಲಾವಣೆಗೆ ತಕ್ಕಂತೆ ಶಿಕ್ಷಕರನ್ನು ಈ ಹೊಸ ಸವಾಲನ್ನು ಸ್ವೀಕರಿಸಲು ತಯಾರುಗೊಳಿಸುವುದು, ಈ ಬದಲಾವಣೆಗೆ ತಕ್ಕ ಪಠ್ಯಕ್ರಮ, ತರಬೇತಿ, ತಮ್ಮನ್ನು ತಾವು ಬದಲಾಯಿಸಿಕೊಳ್ಳುವ, ಮರು ಕಲಿಕೆಗೆ ತಯಾರಾಗುವ ಯುವ ಪೀಳಿಗೆಯನ್ನು ತಯಾರಿಸುವುದು ಶಿಕ್ಷಣ ನೀತಿಯ ಆಶಯಗಳಲ್ಲಿ ಒಂದು.
ಭವಿಷ್ಯದ ಕೌಶಲಗಳು, ಎಂಥ ಬಿಕ್ಕಟ್ಟು ಎದುರಾದರೂ ಅದನ್ನು ಅವಕಾಶವಾಗಿ ಪರಿವರ್ತಿಸುವ ಚಾಕಚಕ್ಯತೆಯನ್ನು ಯುವ ಪೀಳಿಗೆಯಲ್ಲಿ ತುಂಬುವುದು ಹಾಗೂ ದೇಶೀಯ ತಂತ್ರಜ್ಞಾನ, ಸ್ಥಳೀಯ ಜನರ ಶಕ್ತಿಯನ್ನು ಸ್ಥಳೀಕವಾಗಿ ಬಳಸಿಕೊಂಡು ಹೊಟ್ಟೆ ಪಾಡಿಗಾಗಿ ವಲಸೆ ಹೋಗುವುದನ್ನು ತಪ್ಪಿಸುವುದು ಶಿಕ್ಷಣದ ಗುರಿಯಾಗಬೇಕೆಂಬುದು ಆಧುನಿಕ ಶಿಕ್ಷಣ ಪದ್ದತಿಯ ಪ್ರಮುಖ ಕಾಳಜಿ. ಈ ದೇಶೀಯ ಕಾಳಜಿಗೆ ತಕ್ಕಂತ ಶೈಕ್ಷಣಿಕ ವಾತಾವರಣ ನಿರ್ವಿುಸುವಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಫಲವಾಗಿದೆ ಎಂಬುದು ಅತಿಶಯೋಕ್ತಿಯಲ್ಲ.
(ಲೇಖಕರು ಕುಲಪತಿಗಳು, ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯ, ವಿಜಯನಗರಂ, ಆಂಧ್ರಪ್ರದೇಶ)