ನಾಲ್ಕು ವರ್ಷಗಳ ಬಳಿಕ ಕಣಿವೆ ರಾಜ್ಯದಲ್ಲಿ ರಾಜ್ಯಸಭಾ ಚುನಾವಣೆ; National Conferenceಗೆ ಮೂರು, ಬಿಜೆಪಿಗೆ ಮತ್ತೊಂದು

TejYadav14 (1)
Published on

ಶ್ರೀನಗರ: 370 ನೇ ವಿಧಿ ರದ್ದುಪಡಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ರಾಜ್ಯಸಭಾ ಚುನಾವಣೆಯಲ್ಲಿ, ಒಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ (National Conference) ನಾಲ್ಕರಲ್ಲಿ ಮೂರು ಸ್ಥಾನಗಳನ್ನು ಪಡೆದುಕೊಂಡರೆ, ವಿಪಕ್ಷ ಬಿಜೆಪಿ ಒಂದಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಫಲಿತಾಂಶದ ನಂತರ ತಮ್ಮ ಎಕ್ಸ್​ ಖಾತೆಯ ಮೂಲಕ ಪಕ್ಷದ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿರುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್​ನ ಎಲ್ಲಾ ಮತಗಳು ಹಾಗೆಯೇ ಉಳಿದಿದ್ದು, ತಮ್ಮ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಪ್ರತಿಜ್ಞೆ ಮಾಡಿದ ಕೆಲವು ಶಾಸಕರು ಬಿಜೆಪಿಗೆ ಸಹಾಯ ಮಾಡಿರಬಹುದು ಎಂದರು.

ಇದೇ ಸಂದರ್ಭದಲ್ಲಿ ಫರಭವಗೊಂಡಿರುವ ಅಭ್ಯರ್ಥಿಯ ಬಗ್ಗೆಯೂ ಉಲ್ಲೇಖಿಸಿದ ಸಿಎಂ ಅಬ್ದುಲ್ಲಾ, ನನ್ನ ಹೃದಯ ಇಮ್ರಾನ್ ನಬಿ ದಾರ್ ಮಿಡಿಯುತ್ತದೆ, ಅವರನ್ನು ಆಯ್ಕೆ ಮಾಡಲು ನಾವು ನಮ್ಮ ಎ್ಲಲಾ ರೀತಿಯ ಪ್ರಯತ್ನ ಮಾಡಿದೆವು ಆದರೆ ಅದೃಷ್ಟ ಕೈಗೂಡಲಿಲ್ಲ ಎಂದು ನಿರಾಶೆಗೊಂಡರು. ಮುಂದಿನ ದಿನಗಳಲ್ಲಿ ಅವರಿಗೆ ಬೇರೆ ರೀತಿಯ ಅವಕಾಶಗಳು ಸಿಗಲಿವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯನ್ನು ಸೋಲಿಸಲು ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷಕ್ಕೆ ಬೆಂಬಲ ನೀಡಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕೂಡ ಈ ಫಲಿತಾಂಶವನ್ನು ಸ್ವಾಗತಿಸಿದ್ದು. ಅಧ್ಯಕ್ಷೆ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಗೆಲುವು ಸಾಧಿಸಿರುವ ಅಭ್ಯರ್ಥಿಗಳನ್ನು ಅಭಿನಂದಿಸುತ್ತಾ, ಸಂಸತ್ತಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರನ್ನು ಪ್ರತಿನಿಧಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಕುದುರೆ ವ್ಯಾಪಾರ ನಡೆದಿದೆ...

ರಾಜ್ಯಸಭಾ ಚುನಾವಣೆಯಲ್ಲಿ ಸೋತ ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿ ಇಮ್ರಾನ್ ನಬಿ ದಾರ್ ಪ್ರತಿಕ್ರಿಯೆ ನೀಡಿದ್ದು, ಅಗತ್ಯ ಸಂಖ್ಯಾ ಬಲವಿಲ್ಲದ ಬಿಜೆಪಿ ಕುದುರೆ ವ್ಯಾಪಾರದ ಮೂಲಕ ಗೆಲುವು ಸಾಧಿಸಿದೆ, ಈ ಗೆಲುವು ಆಮಿಷಗಳಿಗೆ ದೊರೆತ ಗೆಲುವು, 28 ಶಾಸಕರು ಇದ್ದ ಪಕ್ಷದ ಅಭ್ಯರ್ಥಿ, 32 ಮತ ಪಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾ, ಅಡ್ಡ ಮತದಾನ ಮಾಡಿದವರ ಹೆಸರನ್ನು ಇಷ್ಟರಲ್ಲಿಯೇ ಬಹಿರಂಗಪಡಿಸುವುದಾಗಿ ಪ್ರತಿಜ್ಞೆ ಮಾಡಿದರು. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಸಂಕೀರ್ಣದ ಹೊರಗೆ ನ್ಯಾಷನಲ್​ ಕಾನ್ಫರೆನ್ಸ್​ ಬೆಂಬಲಿಗರು "ವೋಟ್ ಚೋರ್, ಗಡ್ಡಿ ಚೋರ್" ಎಂಬ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಾಚರಣೆ ಆಚರಿಸಿದರು.

ನಾಲ್ಕು ವರ್ಷಗಳ ಕಾಲ ಖಾಲಿ ಇದ್ದ ಜಮ್ಮು ಮತ್ತು ಕಾಶ್ಮೀರದ ಪ್ರಾತಿನಿಧ್ಯದ ರಾಜ್ಯಸಭಾ ಸ್ಥಾನಗಳನ್ನು ಈ ಚುನಾವಣೆಯ ಮೂಲಕ ಭರ್ತಿ ಮಾಡಲಾಗಿದ್ದು, ಮಾಜಿ ಸಂಸದರುಗಳಾದ ಗುಲಾಮ್ ನಬಿ ಆಜಾದ್, ನಜೀರ್ ಅಹ್ಮದ್ ಲಾವೆ, ಫಯಾಜ್ ಅಹ್ಮದ್ ಮಿರ್ ಮತ್ತು ಶಂಶೇರ್ ಸಿಂಗ್ ಮನ್ಹಾಸ್ ಅವರ ಅವಧಿ ಫೆಬ್ರವರಿ 2021 ರಲ್ಲಿಯೇ ಮುಗಿದಿತ್ತು. ಅಲ್ಲಿಯಿಂದ ಇಲ್ಲಿಯವರೆಗೆ ಕೇಂದ್ರಾಡಳಿತ ಪ್ರದೇಶವು ಮೇಲ್ಮನೆಯಲ್ಲಿ ಯಾವುದೇ ಪ್ರಾತಿನಿಧ್ಯ ಹೊಂದಿರಲಿಲ್ಲ.

ಜಮ್ಮು ಕಾಶ್ಮಿರದ ವಿಧಾನಸಭೆಯ ಆವರಣದಲ್ಲಿ ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು, ಮಧ್ಯಾಹ್ನದ ವೇಳೆಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ 70 ಕ್ಕೂ ಹೆಚ್ಚು ಶಾಸಕರು ತಮ್ಮ ಹಕ್ಕು ಚಲಾಯಿಸಿದ್ದರು. ಸಂಜೆ 4 ಗಂಟೆಗೆ ಮತದಾನ ಮುಕ್ತಾಯಾಗಿ, ಕೆಲವೇ ಸಮಯದಲ್ಲಿ ಮತ ಎಣಿಕೆ ಕಾರ್ಯವೂ ಮುಗಿದು, ಫಲಿತಾಂಶಗಳು ಪ್ರಕಟವಾದವು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net