

ನ್ಯೂಯಾರ್ಕ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ರೋವರ್ ‘ಪರ್ಸೆವರೆನ್ಸ್’ ಮಂಗಳ ಗ್ರಹದ ಮೇಲೆ ನೀರಿನಿಂದ ಆಕಾರ ಪಡೆದ ಬಂಡೆಗಳನ್ನು ಶೋಧಿಸಿದೆ.
ಕೆಂಪು ಗ್ರಹದ ಝೆಜೆರೊ ಕುಳಿಯಲ್ಲಿ ಈ ಬಂಡೆಗಳು ಕಂಡು ಬಂದಿದ್ದು ಗ್ರಹದಲ್ಲಿ ಜೀವಿಗಳು ಇರಬಹುದಾದ ಕುರುಹಿನ ಸೂಚನೆಯಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಮಂಗಳ ಗ್ರಹದ ಮೇಲ್ಮೈ ಮೇಲೆ ಒಂದು ಕಾಲದಲ್ಲಿ ನೀರಿತ್ತು ಎನ್ನುವುದು ವಿಜ್ಞಾನಿಗಳ ನಂಬಿಕೆಯಾಗಿದೆ.
ಜಲ ಬಂಡೆಯ ಮಾದರಿ ಯನ್ನು ರೋಬೊ ಸಂಗ್ರಹಿಸಿದ್ದು ಭೂಮಿಗೆ ಮರಳಲು ಸಜ್ಜಾಗುತ್ತಿದೆ. ಪ್ರಾಚೀನ ಸರೋವರ ಮತ್ತು ನದಿ ಸಂಚಯಗಳನ್ನು ಪರಿಶೀಲಿಸುವ ಉದ್ದೇಶದಿಂದ ಪರ್ಸೆವರೆನ್ಸ್ ಇಳಿಯಲು ಝೆಜೆರೊ ಕುಳಿಯನ್ನು ನಾಸಾ ಆಯ್ಕೆ ಮಾಡಿತ್ತು. 45 ಕಿಮೀ (28 ಮೈಲು) ವಿಸ್ತೀರ್ಣದ ಈ ಕ್ರೇಟರ್ (ಕುಳಿ) ಮಂಗಳದ ಸಮಭಾಜಕ ವೃತ್ತದ ಉತ್ತರಕ್ಕಿರುವ ಸಮತಟ್ಟು ಬಯಲು ಪ್ರದೇಶ ಐಸಿಡಿಸ್ ಪ್ಲಾನೇಟಿಯಾದ ಪಶ್ಚಿಮ ಅಂಚಿನಲ್ಲಿದೆ. ಅದು ‘ಕ್ಯೂರಿಯಾಸಿಟಿ’ ಇಳಿದ ಗಾಲೆ ಕ್ರೇಟರ್ನಿಂದ ಸುಮಾರು 3,700 ಕಿ.ಮೀ. (2,300 ಮೈಲು) ದೂರದಲ್ಲಿದೆ. ‘ಸೈನ್ಸ್ ಅಡ್ವಾನ್ಸಸ್’ ಪತ್ರಿಕೆಯಲ್ಲಿ ಈ ಸಂಬಂಧದ ಅಧ್ಯಯನ ವರದಿ ಪ್ರಕಟವಾಗಿದೆ.