

ನ್ಯೂಯಾರ್ಕ್: ಚಂದಿರನ ಅಂಗಳದಲ್ಲಿ 4ಜಿ ಇಂಟರ್ನೆಟ್ ಜಾಲ ಸ್ಥಾಪಿಸಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಿರ್ಧರಿಸಿದೆ. ಈ ಕೆಲಸ ನಿಭಾಯಿಸಲು ಟೆಲಿಕಾಂ ದಿಗ್ಗಜ ನೋಕಿಯಾ ಸಹಿತ ಹಲವು ಕಂಪನಿಗಳು ಗುತ್ತಿಗೆ ಪಡೆದಿವೆ. ಮೊದಲು 4ಜಿ/ಎಲ್ಟಿಇ ಜಾಲ ಸ್ಥಾಪಿಸಿ ನಂತರ ಅದನ್ನು 5ಜಿಗೆ ಪರಿವರ್ತಿಸಲು ನೋಕಿಯಾ ಯೋಜಿಸಿದೆ. ನಾಸಾದ ‘ಟಿಪ್ಪಿಂಗ್ ಪಾಯಿಂಟ್’ ಆಯ್ಕೆ ಪ್ರಕ್ರಿಯೆಯನ್ವಯ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಬಾಹ್ಯಾಕಾಶ ಸಂಶೋಧನೆ ಮತ್ತು ಅಭಿವೃದ್ಧಿ ಈ ಯೋಜನೆಯ ಉದ್ದೇಶವಾಗಿದೆ.
ಗುರಿಯೇನು?: ಚಂದ್ರನ ಮೇಲೆ ಈ ದಶಕದ ಅಂತ್ಯದೊಳಗೆ ಕಾಯಂ ‘ಆರ್ಟೆಮಿಸ್’ ಕಾರ್ಯಕ್ರಮ ಜಾರಿಗೊಳಿಸಲು ಅಗತ್ಯವಾದ ತಂತ್ರಜ್ಞಾನ ಅಭಿವೃದ್ಧಿ ಪಡಿಸುವುದು ನಾಸಾದ ಗುರಿ.
ವೇಗದ ಸಂವಹನ: 4ಜಿ ವ್ಯವಸ್ಥೆ ಚಂದ್ರನ ಮೇಲ್ಮೈ ಮೇಲೆ ಅತಿ ದೂರದ, ಅತಿ ವೇಗದ ಹಾಗೂ ದಕ್ಷ ಸಂವಹನಕ್ಕೆ ನೆರವಾಗುತ್ತದೆ ಎಂದು ನಾಸಾ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ವಲಸೆಗೆ ತಯಾರಿ: ಚಂದ್ರನ ಮೇಲ್ಮೈ ಮೇಲೆ ದೀರ್ಘ ಕಾಲ ಬಾಳುವಂಥ ಇಂಧನ ವ್ಯವಸ್ಥೆ ಅಗತ್ಯವಾಗಿದೆ. ಚಂದ್ರನ ಮೇಲೆ ಮಾನವ ವಲಸೆ ಹೋಗುವ ಸಾಮರ್ಥ್ಯವನ್ನು ಕೂಡ ಅಭಿವೃದ್ಧಿಪಡಿಸಬೇಕಾಗಿದೆ ಎಂದು ನಾಸಾ ಆಡಳಿತಾಧಿಕಾರಿ ಜಿಮ್ ಬ್ರೖೆಡನ್ಸ್ಟೈನ್ ಹೇಳಿದ್ದಾರೆ.
ಈ ಯೋಜನೆಗೆ ನಾಸಾ ಒಟ್ಟು 14 ಅಮೆರಿಕನ್ ಕಂಪನಿಗಳನ್ನು ಆಯ್ಕೆ ಮಾಡಿದೆ. ಅವುಗಳಲ್ಲಿ ನೋಕಿಯಾ ಕೂಡ ಒಂದು. ಸ್ಪೇಸ್ ಎಕ್ಸ್, ಲಾಕ್ಹೀಡ್ ಮಾರ್ಟಿನ್, ಸಿಯೆರಾ ನೆವಾಡಾ, ಎಸ್ಎಸ್ಎಎಲ್ ರೊಬೋಟಿಕ್ಸ್ ಮತ್ತು ಯುನೈಟೆಡ್ ಲಾಂಚ್ ಅಲಯನ್ಸ್ (ಯುಎಲ್ಎ) ಇತರ ಪ್ರಮುಖ ಕಂಪನಿಗಳು.
ಚಂದ್ರನ ಮೇಲೆ ಎಲ್ಟಿಇ ನೆಟ್ವರ್ಕ್ ಸ್ಥಾಪಿಸಲು ನೋಕಿಯಾ 2018ರಲ್ಲೇ ಪ್ರಥಮ ಪ್ರಯತ್ನ ನಡೆಸಿತ್ತು. ಅಪೋಲೊ ಲ್ಯಾಂಡಿಂಗ್ಗಾಗಿ ನೆಟ್ವರ್ಕ್ ಸ್ಥಾಪಿಸಲು ಜರ್ಮನಿಯ ಬಾಹ್ಯಾಕಾಶ ಸಂಸ್ಥೆ ಪಿಟಿಸೈಂಟಿಸ್ಟ್ ್ಸ ಮತ್ತು ಬ್ರಿಟನ್ನ ವೊಡಾಫೋನ್ ಜೊತೆ ಕೈಜೋಡಿಸಿತ್ತು. ಆದರೆ ಆ ಯೋಜನೆ ಕೊನೆಗೂ ಕೈಗೂಡಲೇ ಇಲ್ಲ.
2028ರ ಹೊತ್ತಿಗೆ ನಾಸಾದ ಗಗನಯಾನಿಗಳು ಚಂದ್ರನ ಮೇಲೆ ಕೆಲಸ ಮಾಡುವುದನ್ನು ನೋಡುವುದು ನಮ್ಮ ಗುರಿಯಾಗಿದೆ. ಅದಕ್ಕಾಗಿ ತ್ವರಿತವಾಗಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗುತ್ತದೆ.| ಜಿಮ್ ಬ್ರೖೆಡನ್ಸ್ಟೈನ್, ನಾಸಾ ಆಡಳಿತಾಧಿಕಾರಿ