

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಥೆನ್ಸ್ನಲ್ಲಿ ಗ್ರೀಕ್ ಸಹವರ್ತಿ ಕ್ಯಾರಿಯಾಕೋಸ್ ಮಿಸ್ಟೊಟಾಕಿಸ್ ಜೊತೆ ದ್ವಿಪಕ್ಷೀಯ ಬಾಂಧವ್ಯ ಹೆಚ್ಚಿಸುವ ಕುರಿತು ಮಾತುಕತೆ ನಡೆಸಿದರು. ಮೋದಿ, ಕಳೆದ 40 ವರ್ಷಗಳಲ್ಲಿ ಗ್ರೀಸ್ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ. 1983ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಗ್ರೀಸ್ ದೇಶದಲ್ಲಿ ಪ್ರವಾಸ ಕೈಗೊಂಡಿದ್ದರು.
ದಕ್ಷಿಣ ಆಫ್ರಿಕಾದ ಜೊಹಾನೆಸ್ಬರ್ಗ್ನಲ್ಲಿ ನಡೆದ 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡು ನೇರವಾಗಿ ಗ್ರೀಸ್ ರಾಜಧಾನಿಗೆ ತೆರಳಿದ ಮೋದಿ, ಅಥೆನ್ಸ್ನಲ್ಲಿರುವ ಯುದ್ಧ ಸ್ಮಾರಕ ‘ಅನಾಮಿಕ ಯೋಧನ ಸಮಾಧಿ’ ಮೇಲೆ ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದರು.
ಅಧ್ಯಕ್ಷೆ ಕ್ಯಾತರಿನಾ ಎನ್ ಸ್ಯಾಕೆಲಾರೊಪೌಲೊ ಅವರನ್ನು ಭೇಟಿ ಮಾಡಿದ ನಂತರ ಪ್ರಧಾನಿ ಮಿಟ್ಸೊಟಾಕಿಸ್, ಮೋದಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಉಭಯ ದೇಶಗಳ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಕುರಿತು ಇಬ್ಬರೂ ನಾಯಕರು ರ್ಚಚಿಸಿದರು.
ಚಂದ್ರಯಾನ ಯಶಸ್ಸಿನ ಮಹತ್ವ: ಇದಕ್ಕೂ ಮುನ್ನ ಅಧ್ಯಕ್ಷೆ ಕ್ಯಾತರಿನಾರೊಂದಿಗೆ ನಡೆದ ಮಾತುಕತೆಯಲ್ಲಿ ಭಾರತದ ಚಂದ್ರಯಾನ-3 ಮಿಷನ್ ಯಶಸ್ಸಿನ ಕುರಿತು ಮೋದಿ ರ್ಚಚಿಸಿದರು. ‘ಇದು ಕೇವಲ ಭಾರತದ ವಿಜಯ ಮಾತ್ರವಲ್ಲ, ಇಡೀ ಮನುಕುಲದ ಗೆಲುವು’ ಎಂದು ಮೋದಿ ಬಣ್ಣಿಸಿದರು. ಚಂದ್ರಯಾನ-3 ಮಿಷನ್ನಿಂದ ಸಂಗ್ರಹವಾಗುವ ದತ್ತಾಂಶಗಳಿಂದ ಇಡೀ ವೈಜ್ಞಾನಿಕ ಸಮುದಾಯ ಹಾಗೂ ಮನುಕುಲಕ್ಕೆ ನೆರವಾಗಲಿದೆ ಎಂದು ಮೋದಿ ಹೇಳಿದರು. ಚಂದ್ರಯಾನ ಮಿಷನ್ ಯಶಸ್ವಿಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಗ್ರೀಸ್ ಅಧ್ಯಕ್ಷೆಗೆ ಮೋದಿ ಕೃತಜ್ಞತೆ ಸಲ್ಲಿಸಿದರು.
ಪ್ರಧಾನಿಗೆ ಗೌರವ ಪ್ರದಾನ: ಗ್ರೀಸ್ನ ಎರಡನೇ ಅತ್ಯುನ್ನತ ನಾಗರಿಕ ಗೌರವ ಗ್ರಾ್ಯಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಹಾನರ್’ ಪ್ರಶಸ್ತಿಯನ್ನು ಪ್ರಧಾನಿ ಮೋದಿಗೆ ಪ್ರದಾನ ಮಾಡಲಾಯಿತು. ಅಧ್ಯಕ್ಷೆ ಕ್ಯಾತರಿನಾ ಪ್ರಶಸ್ತಿ ಪ್ರದಾನ ಮಾಡಿದರು. 1975ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು ನಕ್ಷತ್ರದ ಮುಂಭಾಗದಲ್ಲಿ ಅಥೆನಾ ದೇವತೆಯ ತಲೆಯನ್ನು ಚಿತ್ರಿಸಲಾಗಿದೆ. ‘ಸದಾಚಾರಿಗಳನ್ನು ಮಾತ್ರವೇ ಗೌರವಿಸಬೇಕು’ ಎಂಬ ಮಾತನ್ನು ಫಲಕದ ಮೇಲೆ ಕೆತ್ತಲಾಗಿದೆ.
ಮಾಸ್ಕೋ: ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಖುದ್ದಾಗಿ ಹಾಜರಾಗುವ ಯೋಜನೆಯಿಲ್ಲ ಎಂದು ರಷ್ಯಾ ಆಡಳಿತ ಕೇಂದ್ರ ಕ್ರೆಮ್ಲಿನ್ ಶುಕ್ರವಾರ ತಿಳಿಸಿದೆ. ಉಕ್ರೇನ್ನಲ್ಲಿ ಯುದ್ಧಾಪರಾಧ ಎಸಗಿರುವ ಕಾರಣ ಪುತಿನ್ರ ಬಂಧನಕ್ಕೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ವಾರಂಟ್ ಹೊರಡಿಸಿದೆ. ಹೀಗಾಗಿ ಬಂಧನದ ಭೀತಿಯಿಂದ ಪುತಿನ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಯುದ್ಧಾಪರಾಧದ ಆರೋಪವನ್ನು ರಷ್ಯಾ ಬಲವಾಗಿ ತಳ್ಳಿ ಹಾಕಿದೆ.
ಐಸಿಸಿ ವಾರಂಟ್ ಇರುವುದರಿಂದ ಪುತಿನ್ ವಿದೇಶಕ್ಕೆ ತೆರಳಿದ್ದಾಗ ಬಂಧಿಸುವ ಸಾಧ್ಯತೆಗಳಿವೆ. ಈ ವಾರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಸಚಿವರ ಸಭೆಯಲ್ಲೂ ಪುತಿನ್ ಖುದ್ದಾಗಿ ಹಾಜರಾಗದೆ ವಿಡಿಯೋ ಲಿಂಕ್ ಮೂಲಕ ಭಾಷಣ ಮಾಡಿದ್ದರು.