

ಕಲಬುರಗಿ: ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ, ಕೊಪ್ಪಳ, ರಾಯಚೂರು ಜಿಲ್ಲೆಗಳ 51,900 ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಸಾಂಕೇತಿಕವಾಗಿ ಐದು ಕುಟುಂಬಕ್ಕೆ ಹಕ್ಕುಪತ್ರ ವಿತರಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಬಳಿಕ ಬಂಜಾರ ಭಾಷೆಯಲ್ಲೇ ಭಾಷಣ ಶುರು ಮಾಡಿದ ಪ್ರಧಾನಿ, ಕರುನಾಡಿನ ಜನತೆಗೆ ಕನ್ನಡದಲ್ಲೇ ನಮಸ್ಕರಿಸಿದರು. ದೇಶದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುದೇ ನಮ್ಮ ಗುರಿ ಎಂದರು.
ನನ್ನ ಗೋರ ಬಂಜಾರ, ನಾಯಕ್ ಎಲ್ಲರಿಗೂ ನಮಸ್ಕಾರ. ರಾಷ್ಟ್ರಕೂಟದ ರಾಜಧಾನಿಯಾಗಿದ್ದ ಮಳಖೇಡ ಜನರಿಗೆ, ಕನ್ನಡ ನಾಡಿನ ಸಮಸ್ತ ಜನತೆಗೆ ನನ್ನ ನಮಸ್ಕಾರಗಳು. ಜೈ ಸಂತ ಸೇವಲಾಲ್ ಮಹಾರಾಜ್ ಎನ್ನುತ್ತಾ ಗಾಣಾಪುರದ ದತ್ತಾತ್ರೇಯ, ಶರಣ ಬಸವೇಶ್ವರರನ್ನ ಸ್ಮರಿಸಿದರು. 2023ರ ಜನವರಿ ತಿಂಗಳು ಆರಂಭವಾಗಿದೆ. ಜನವರಿಯಲ್ಲಿ ನಮ್ಮ ಸಂವಿಧಾನ ಆರಂಭವಾಗಿತ್ತು. ಇಂತಹ ಪವಿತ್ರ ತಿಂಗಳಲ್ಲಿ ಕರ್ನಾಟಕ ಸರ್ಕಾರ ಸಾಮಾಜಿಕ ನ್ಯಾಯದ ಸಲುವಾಗಿ ದೊಡ್ಡ ಹೆಜ್ಜೆ ಇಟ್ಟಿದೆ. ಸಾಮಾಜಿಕ ನ್ಯಾಯ ಒದಗಿಸಲಾಗುತ್ತಿದೆ. ಅಲೆಮಾರಿ ಜನಾಂಗದವರಿಗೆ ಖಾಯಂ ಸೂರು ಒದಗಿಸಲು ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಲಕ್ಷಾಂತರ ಬಂಜಾರ ಜನರಿಗೆ ಇಂದು ಐತಿಹಾಸಿಕ ದಿನ. ಕರ್ನಾಟಕದಲ್ಲಿ ತಾಂಡಾದಲ್ಲಿರುವ ಸಾವಿರಾರು ಜನರ ಉಜ್ವಲ ಭವಿಷ್ಯ ರೂಪಿಸುವ ಕೆಲಸ ಇದಾಗಿದೆ. ಬಸವರಾಜ ಬೊಮ್ಮಾಯಿ ಮತ್ತು ಅವರ ತಂಡಕ್ಕೆ ಶುಭ ಕೋರುತ್ತೇನೆ ಎಂದರು.
ಬಸವೇಶ್ವರರು ಅನುಭವ ಮಂಟಪದ ಮೂಲಕ ಸಾಮಾಜಿಕ ನ್ಯಾಯ ನೀಡಿದ್ದರು. ಸಮಾಜದ ಎಲ್ಲ ಸಮುದಾಯದ ಜನರಿಗೆ ನ್ಯಾಯ ಕೊಡಿಸುವುದನ್ನ ಬಸವಣ್ಣನವರು ಕಲಿಸಿದ್ದಾರೆ. 'ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಔರ್ ಸಬ್ ವಿಕಾಸ್' ಮಂತ್ರ ಸಾರಿದ್ದಾರೆ. ಇವತ್ತು ಕಲಬುರಗಿಯಲ್ಲಿ ಅಂತಹದ್ದೇ ಸನ್ನಿವೇಶ ನೋಡ್ತಿದ್ದೇವೆ. ಬಂಜಾರ ಸಮುದಾಯದವರು ಗೌರವದಿಂದ ಬದುಕುವ ಸಮಯ ಬಂದಿದೆ. ಈ ಕ್ಷೇತ್ರ ನನಗೆ ಹೊಸದಲ್ಲ ಹಾಗೂ ಬಂಜಾರ ಸಮುದಾಯ ಕೂಡ ಹೊಸದಲ್ಲ. 1994ರ ವಿಧಾನಸಭಾ ಚುನಾವಣಾ ವೇಳೆ ರ್ಯಾಲಿಯಲ್ಲಿ ಪಾಲ್ಗೊಳ್ಳಲು ನನ್ನನ್ನು ಇಲ್ಲಿದೆ ಕರೆದಿದ್ದರು. ನನಗೆ ನೆನಪಿದೆ, ಅಂದು ಕೂಡ ಬಂಜಾರ ಸಮುದಾಯದ ಲಕ್ಷಾಂತರ ಜನರು ಬಂದು ಆಶೀರ್ವಾದ ಮಾಡಿದ್ದರು. ಇಂದು ಕೂಡ ಲಕ್ಷಾಂತರ ಜನ ಸೇರಿದ್ದಾರೆ. ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ವಿಜಯಪುರದ ಬಂಜಾರ ಸಮುದಾಯ ಜನರಿಗೆ ನನ್ನ ಹೃದಯ ಪೂರ್ವಕ ನಮನಗಳು. ಆದಿವಾಸಿ ಜನರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಮಿಡಿಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಸಮಾಜದ ಪ್ರತ್ರಿಯೊಂದು ವರ್ಗಕ್ಕೂ ಅನುಕೂಲವಾಗುವ ಯೋಜನೆ ರೂಪಿಸಲಾಗುತ್ತೆ. ಬಂಜಾರ ಸಮುದಾಯಕ್ಕೆ ಮೂಲ ಸೌಕರ್ಯ ಸಿಗುತ್ತೆ. ಸಮುದಾಯದ ಅಭಿವೃದ್ಧಿಗೆ ಪಣತೊಟ್ಟಿದ್ದೇವೆ. 1993ರಲ್ಲೇ ಹಕ್ಕುಪತ್ರ ವಿತರಣೆ ಯೋಜನೆ ಜಾರಿ ಮಾಡಲಾಗಿತ್ತು. ವಿಪಕ್ಷಗಳು ಹಕ್ಕುಪತ್ರ ವಿತರಣೆ ಬಗ್ಗೆ ಯೋಚಿಸಿರಲಿಲ್ಲ. ಹಿಂದಿನ ಸರ್ಕಾರಗಳು ಬಂಜಾರ ಸಮುದಾಯವನ್ನು ಕೇವಲ ವೋಟ್ಬ್ಯಾಂಕ್ ಮಾಡಿಕೊಂಡಿದ್ದವು. ಈಗಿನ ಡಬಲ್ ಇಂಜಿನ್ ಸರ್ಕಾರ, ಯೋಜನೆಯನ್ನ ಕಾರ್ಯರೂಪಕ್ಕೆ ತಂದಿದೆ. ಹೊಸ ಪರ್ವ ಶುರುವಾಗಿದೆ. ನೀರು, ಗ್ಯಾಸ್, ರಸ್ತೆ... ಎಲ್ಲವನ್ನೂ ನಮ್ಮ ಸರ್ಕಾರ ಕೊಡುತ್ತೆ. ಹಕ್ಕುಪತ್ರ ಸ್ವೀಕರಿಸಲು ವೇದಿಕೆಗೆ ಬಂದ ತಾಯಿಯೊಬ್ಬರು ನನಗೆ ಆಶೀರ್ವಾದ ಮಾಡಿದರು. ನಾನು ಎಲ್ಲರಿಗೂ ಕೋಟಿ ಕೋಟಿ ನಮಸ್ಕಾರಗಳು ಎಂದರು.