

ನವದೆಹಲಿ: 'ನಾವು ಅಧಿಕಾರ ಮತ್ತು ಅವಕಾಶಗಳನ್ನು ಸೃಷ್ಟಿಸುತ್ತೇವೆ ಆದರೆ ಪ್ರತಿಪಕ್ಷಗಳಿಗೆ ಬೇಕಾಗಿರುವುದು 'ಮೋದಿ ಹಟಾವೋ' ಮತ್ತು ಜನರ ಸಂಪತ್ತನ್ನು ಕಸಿದುಕೊಳ್ಳುವುದು' ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರದ ಕಳೆದ 10 ವರ್ಷಗಳ ಅಭಿವೃದ್ಧಿ ಮತ್ತು ದೇಶವನ್ನು ಸಮರ್ಥವಾಗಿ ಮುನ್ನಡೆಸಿರುವ ದಾಖಲೆಯಿಂದಾಗಿ ಲೋಕಸಭೆ ಚುನಾವಣೆಗೆ ಮುನ್ನ ಯಾವುದೇ ಜನಪರ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ.
ಮೋದಿ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಸ್ತಾವಿತ ಸಂಪತ್ತು ಹಂಚಿಕೆ, ಜಾತಿ ಗಣತಿ ಮತ್ತು ಧರ್ಮ ಆಧಾರಿತ ಮೀಸಲಾತಿಯಂತಹ ವಿಷಯಗಳ ಕುರಿತು ಕಾಂಗ್ರೆಸ್ ಮತ್ತು ಭಾರತದ ಉಳಿದ ವಿರೋಧ ಪಕ್ಷಗಳ ಮೇಲೆ ತಮ್ಮ ಬಂದೂಕುಗಳನ್ನು ಗುರಿಯಾಗಿಸಿರುವ ಸಮಯದಲ್ಲಿ ಮೋದಿಯವರ ಈ ಹೇಳಿಕೆಗಳು ಬಂದಿವೆ. .
ತಮ್ಮ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ವ್ಯತ್ಯಾಸ ಕುರಿತು ವಿವರಿಸಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳು ಮೋದಿಯನ್ನು ತೆಗೆದುಹಾಕುವುದು, ಒಂದು ಸಮುದಾಯವನ್ನು ಓಲೈಸಲು ಮೀಸಲಾತಿ ಬದಲಿಸಲು ಬಯಸುತ್ತಿವೆ. ಆದರೆ ನಮ್ಮ ಸರ್ಕಾರವು ಜನರನ್ನು ಸಬಲೀಕರಣಗೊಳಿಸುವ ಮತ್ತು ಅವರಿಗೆ ಅವಕಾಶಗಳನ್ನು ಸೃಷ್ಟಿಸುವತ್ತ ಗಮನಹರಿಸಿದೆ ಎಂದು ಹೇಳಿದರು.
ಈ 10 ವರ್ಷಗಳಲ್ಲಿ ನಿಜವಾದ ಪ್ರಗತಿ ಏನೆಂಬುದನ್ನು ತೋರಿಸಿದ್ದೇವೆ. ಪ್ರತಿಯೊಬ್ಬ ನಾಗರಿಕನನ್ನು ಸಶಕ್ತಗೊಳಿಸುವ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಿ ನಿಜವಾದ ಅಭಿವೃದ್ಧಿ ಏನೆಂಬುದನ್ನು ನಾವು ಜಗತ್ತಿಗೆ ತೋರಿಸಿದ್ದೇವೆ. ನಮ್ಮ ಗಮನವು ಬಡವರನ್ನು ಸಬಲೀಕರಣಗೊಳಿಸುವುದಾಗಿತ್ತು. ಅವರು ಅಭಿವೃದ್ಧಿ ಹೊಂದಲು ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದೇವೆ. ನಮ್ಮ ನೀತಿಗಳು ಬಡವರನ್ನು ಮೇಲಕ್ಕೆತ್ತುವುದರ ಸುತ್ತ ಕೇಂದ್ರೀಕೃತವಾಗಿವೆ. ವಾಸ್ತವವಾಗಿ, ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಮೋದಿ ಹೇಳಿದರು.