Narendra Modi in Assam | ನಾನು ಶಿವನ ಭಕ್ತ, ವಿಷವನ್ನೂ ನುಂಗುತ್ತೇನೆ ಎಂದ ಪ್ರಧಾನಿ ಮೋದಿ!

Narendra Modi in Assam
Published on

Narendra Modi in Assam: ಇತ್ತೀಚೆಗೆ ಬಿಹಾರದಲ್ಲಿ ನಡೆದ ರಾಜಕೀಯ ಸಭೆಯೊಂದರಲ್ಲಿ ತಮ್ಮ ದಿವಂಗತ ತಾಯಿ ಹೀರಾಬೆನ್ ಮೋದಿ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾದ ನಿಂದನೆಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ನಾನು ಶಿವನ ಭಕ್ತನಾಗಿದ್ದು, ನಿಂದನೆಗಳ ರೂಪದ ವಿಷವನ್ನು ನುಂಗುತ್ತೇನೆ ಎಂದು ಹೇಳಿದರು.

ಅಸ್ಸಾಂನ ದರಂಗ್‌ನಲ್ಲಿ ಅನೇಕ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಇಡೀ ಕಾಂಗ್ರೆಸ್ ಪರಿಸರ ವ್ಯವಸ್ಥೆಯು ನನ್ನನ್ನು ಗುರಿಯಾಗಿಸಿಕೊಂಡು ಮೋದಿ ಮತ್ತೆ ಅಳುತ್ತಿದ್ದಾರೆ ಎಂದು ಹೇಳುತ್ತಿದೆ, ಜನರೇ ನನ್ನ ದೇವರು, ಅವರೇ ನನ್ನ ಯಜಮಾನರು, ಅವರೇ ನನ್ನ ರಿಮೋಟ್ ಕಂಟ್ರೋಲ್. ನಾನು ನನ್ನ ನೋವನ್ನು ಅವರ ಮುಂದೆ ವ್ಯಕ್ತಪಡಿಸದೆ ಬೇರೆ ಎಲ್ಲಿ ಹೇಳಿಕೊಳ್ಳಲಿ ಎಂದು ಪ್ರಶ್ನಿಸಿದರು.

ಪ್ರಧಾನಿಯವರ ಮಾತಿನಲ್ಲಿ ಉಲ್ಲೇಖವಾದ ರಿಮೋಟ್​​ ಕಂಟ್ರೋಲ್​​ ಶಬ್ದ ಸದ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಈ ಹಿಂದೆ ಮೋದಿ, ಸೋನಿಯಾ ಗಾಂಧಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಲು ಈ ಪದವನ್ನು ಬಳಸುತ್ತಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗಾಂಧಿ ಕುಟುಂಬ ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸುತ್ತಿದೆ ಎಂದು ಅವರು ಅನೇಕ ಸಲ ಆರೋಪಿಸಿದ್ದಾರೆ, ಈ ಆರೋಪವನ್ನು ಕಾಂಗ್ರೆಸ್ ಪದೇ ಪದೇ ತಳ್ಳಿಹಾಕಿದೆ.

ನರ್ತಕರಿಗೆ ಭಾರತರತ್ನ ಎಂದಿದ್ದ ಕಾಂಗ್ರೆಸ್​​

ಈ ಹಿಂದೆ 2019ರಲ್ಲಿ ಅಸ್ಸಾಂನ ಹೆಮ್ಮೆಯ ಗಾಯಕ ಭೂಪೇನ್ ಹಜಾರಿಕಾ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದಾಗ ಖರ್ಗೆ, ಮೋದಿ ಈ ಪ್ರಶಸ್ತಿಯನ್ನು 'ಗಾಯಕರು ಮತ್ತು ನರ್ತಕರಿಗೆ' ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಇದು ವಿವಾದದ ಸ್ವರೂಪ ಪಡೆದುಕೊಳ್ಳುತಿದ್ದಂತೆ ಡಾ. ಹಜಾರಿಕಾ ನಮ್ಮ ದೇಶದ ಅತ್ಯಂತ ಪ್ರತಿಭಾನ್ವಿತ ಕಲಾವಿದರಲ್ಲಿ ಒಬ್ಬರು, ಅವರ ಅಸಾಧಾರಣ ಸಂಗೀತ ಪ್ರತಿಭೆ, ಅವರ ಕೊಡುಗೆಗಳು ಅಸ್ಸಾಂನ ಸಂಸ್ಕೃತಿ ಮತ್ತು ಕಲೆಯನ್ನು ಪ್ರಪಂಚದ ಗಮನಕ್ಕೆ ತಂದವು ಎಂದು ಸಮಜಾಯಿಸಿ ನೀಡಿದ್ದರು ಎಂದು ವರದಿಯಾಗಿದೆ. ಆರು ದಶಕಗಳ ಕಾಲ ಅಸ್ಸಾಂ ರಾಜ್ಯವಾಳಿದ ಕಾಂಗ್ರೆಸ್, ಬ್ರಹ್ಮಪುತ್ರ ನದಿಗೆ ಕೇವಲ ಮೂರು ಸೇತುವೆಗಳನ್ನು ಮಾತ್ರ ನಿರ್ಮಿಸಿತು. ಆದರೆ ಇಲ್ಲಿನ ಜನತೆ ನಮಗೆ ಅವಕಾಶ ನೀಡಿದ ಹತ್ತು ವರ್ಷದಲ್ಲಿ ಆರು ಹೊಸ ಸೇತುವೆಗಳನ್ನು ನಿರ್ಮಿಸಿದ್ದೇವೆ ಎಂದರು.

ಭಯೋತ್ಪಾದಕರನ್ನು ನುಗ್ಗಿ ಹೊಡೆಯುತ್ತೇವೆ..

ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆ ನಡೆದಾಗ ಮೌನವಾಗಿರುತ್ತಿತ್ತು, ಆದರೆ ಈಗ ನಮ್ಮ ಪಡೆಗಳು ಆಪರೇಷನ್ ಸಿಂದೂರ್ ಅನ್ನು ನಡೆಸುತ್ತವೆ, ಪಾಕಿಸ್ತಾನದ ಪ್ರತಿಯೊಂದು ಮೂಲೆಯಿಂದ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುತ್ತವೆ, ಆದರೆ ಕಾಂಗ್ರೆಸ್ ಜನರು ಪಾಕಿಸ್ತಾನ ಸೇನೆಯೊಂದಿಗೆ ನಿಂತಿದ್ದಾರೆ. ಪಾಕಿಸ್ತಾನದ ಸುಳ್ಳುಗಳೇ ಕಾಂಗ್ರೆಸ್‌ನ ಕಾರ್ಯಸೂಚಿಯಾಗುತ್ತವೆ. ಅದಕ್ಕಾಗಿ ನೀವು ಸದಾ ಕಾಂಗ್ರೆಸ್ ಬಗ್ಗೆ ಎಚ್ಚರದಿಂದಿರಬೇಕು ಎಂದು ಕಿವಿ ಮಾತು ಹೇಳಿದರು.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net