ಮೂರನೇ ಅಲೆ ತಡೆಗೆ ನಮೋ ಸೂತ್ರ; ರಾಜ್ಯದ ಐದಂಶದ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಶ್ಲಾಘನೆ

Modi
Published on

ಬೆಂಗಳೂರು: ದೇಶದಲ್ಲಿ ಅಬ್ಬರಿಸುತ್ತಿರುವ ಕರೊನಾ ಮೂರನೇ ಅಲೆ ಫೆಬ್ರವರಿಯಲ್ಲಿ ತೀವ್ರಗೊಳ್ಳುವುದರಿಂದ ಜನಜೀವನ ಮತ್ತು ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯಾಗದ ಹಾಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ.

ಕರೊನಾ ಸೋಂಕಿನ ಪರಿಣಾಮಕಾರಿ ನಿಯಂತ್ರಣ ಹಾಗೂ ದಕ್ಷ ನಿರ್ವಹಣೆಗೆ ರಾಜ್ಯಸರ್ಕಾರ ಅಳವಡಿಸಿಕೊಂಡಿರುವ ಟೆಸ್ಟ್, ಟ್ರಾ್ಯಕ್, ಟ್ರೇಸ್, ಟ್ರಯಾಜಿಂಗ್ ಮತ್ತು ಟೆಕ್ನಾಲಜಿ (ಐದು ಟಿ) ಸೂತ್ರಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಮೋದಿ ಶ್ಲಾಘಿಸಿದ್ದಾರೆ. ಗುರುವಾರ ವಿವಿಧ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ವಿಡಿಯೋ ಸಂವಾದದ ಬಳಿಕ ಬೊಮ್ಮಾಯಿ ಮಾಧ್ಯಮ ಪ್ರತಿನಿಧಿಗಳಿಗೆ ಮಾತುಕತೆಯ ವಿವರ ನೀಡಿದರು.

ಮೋದಿಯ ಕ್ಷಮೆ ಕೋರಿದ ಚನ್ನಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಈ ತಿಂಗಳ ಆರಂಭದಲ್ಲಿ ಪಂಜಾಬ್​ಗೆ ಭೇಟಿ ನೀಡಿದ ಸಂದರ್ಭದಲ್ಲಾದ ಭದ್ರತಾ ವ್ಯವಸ್ಥೆಯ ಲೋಪಕ್ಕೆ ಸಂಬಂಧಿಸಿದಂತೆ ಅಲ್ಲಿನ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಗುರುವಾರ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸಿದರು. ಕೋವಿಡ್ 19 ಸನ್ನಿವೇಶ ಕುರಿತು ಮುಖ್ಯಮಂತ್ರಿಗಳ ಜತೆಗಿನ ಸಂವಾದದ ಸಂದರ್ಭದಲ್ಲಿ ವಿಷಾದಿಸಿದ ಚನ್ನಿ, ‘ತುಮ್ ಸಲಾಮತ್ ರಹೋ ಖಯಾಮತ್ ತಕ್, ಔರ್ ಖುದಾ ಕರೇ ಖಯಾಮತ್ ನ ಹೋ’ ಎಂಬ ಹಿಂದಿ ಹಾಡಿನ ಸಾಲುಗಳನ್ನು ಉಲ್ಲೇಖಿಸಿ ದೀರ್ಘಾಯುಸ್ಸು ನಿಮ್ಮದಾಗಲಿ’ ಎಂದು ಆಶಿಸಿದರು.

ಮೋದಿ ಸೂಚನೆ:

·ಆರ್ಥಿಕತೆ, ಬದುಕು, ಸಾಮಾನ್ಯರ ಹಿತರಕ್ಷಣೆ ಗಮನದಲ್ಲಿಟ್ಟುಕೊಂಡು ನಿರ್ಬಂಧ ಕ್ರಮಕೈಗೊಳ್ಳಿ

·ತಜ್ಞರ ಪ್ರಕಾರ ರೂಪಾಂತರಿ ವಿರುದ್ಧ ಹೋರಾಟಕ್ಕೆ ಲಸಿಕೆ ಉತ್ತಮ ಅಸ್ತ್ರ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ

·ಶೇ.100 ಲಸಿಕೀಕರಣ ಸಾಧಿಸಲು ಹರ್ ಘರ್ ದಸ್ತಕ್ (ಮನೆ ಮನೆ ಗುರಿ)ಕಾರ್ಯಕ್ರಮವನ್ನು ಇನ್ನಷ್ಟು ವೇಗಗೊಳಿಸಿ

·ಸ್ಥಳೀಯ ಕಂಟೈನ್​ವೆುಂಟ್ ಪ್ರದೇಶಗಳನ್ನು ಕೇಂದ್ರೀಕರಿಸಿ

·ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಮೂಲ ಸೌಕರ್ಯ ಖಚಿತಪಡಿಸಿಕೊಳ್ಳಿ

ಎರಡು ಅಲೆಗಳನ್ನು ನಿಭಾಯಿಸಿದ ಅನುಭವದ ಆಧಾರದಲ್ಲಿ ಮೂರನೇ ಅಲೆಯ ತೀವ್ರತೆ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಮೋದಿಯವರು ಸೂಚಿಸಿದರು. ಇದೇ ವೇಳೆ ಕರೊನಾ ನಿಯಂತ್ರಣ ಮತ್ತು ನಿರ್ವಹಣೆಗೆ ರಾಜ್ಯದಲ್ಲಿ ಕೈಗೊಂಡ ಕ್ರಮಗಳನ್ನು ಅಂಕಿ-ಅಂಶಗಳ ಸಹಿತ ವಿವರಿಸಲಾಗಿದೆ.

ವೇಗ ಕಾಯ್ದುಕೊಳ್ಳಿ: ಮಾದರಿ ಪರೀಕ್ಷೆ ಹಾಗೂ ಲಸಿಕೆ ಹಾಕಿದ ಪ್ರಮಾಣ ದೇಶದ ಸರಾಸರಿಗಿಂತ ರಾಜ್ಯದಲ್ಲಿ ಹೆಚ್ಚಿರುವುದಕ್ಕೆ ಮೋದಿ ಪ್ರಶಂಸಿಸಿದ್ದು, ಇದೇ ವೇಗ ನಿರಂತರವಾಗಿ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಜನರ ಆರೋಗ್ಯ ರಕ್ಷಣೆಗೂ ಆದ್ಯತೆ ನೀಡಿದ್ದು, ಹಾಸಿಗೆಗಳು, ಆಕ್ಸಿಜನ್ ಬೆಡ್​ಗಳು, ಐಸಿಯು, ಮಕ್ಕಳಿಗೆ ವಿಶೇಷ ವಾರ್ಡ್ ಮೀಸಲು, ಬೇಕಾದ ಔಷಧ ಇನ್ನಿತರ ಪರಿಕರಗಳ ದಾಸ್ತಾನಿಗೂ ಕ್ರಮವಹಿಸಿದ್ದರ ಮಾಹಿತಿ ನೀಡಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಬೊಮ್ಮಾಯಿ ಮೊದಲಿಗರು: ಮೋದಿಯವರೊಂದಿಗೆ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿಗಳ ಪೈಕಿ ಬಸವರಾಜ ಬೊಮ್ಮಾಯಿ ಮೊದಲಿಗರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾಷಣ, ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ದೇಶದ ವಸ್ತುಸ್ಥಿತಿ ಬಗ್ಗೆ ಪ್ರಸ್ತುತಿ ಮುಗಿದ ತಕ್ಷಣವೇ ಬೊಮ್ಮಾಯಿ ರಾಜ್ಯದ ವಸ್ತುಸ್ಥಿತಿಯನ್ನು ಅಂಕಿ-ಅಂಶ ಸಹಿತ ಬಿಚ್ಚಿಟ್ಟರು.

ಕೇಂದ್ರದ ಆರ್ಥಿಕ ನೆರವು: ಕರೊನಾ ಎರಡನೇ ಅಲೆಯ ನಂತರ ಆರೋಗ್ಯ ಮೂಲ ಸವಲತ್ತು ಸುಧಾರಣೆಗಾಗಿ ಎಲ್ಲ ರಾಜ್ಯಗಳಿಗೆ ಒಟ್ಟು 32 ಸಾವಿರ ಕೋಟಿ ರೂ. ನೀಡಲಾಗಿದ್ದು, ಇನ್ನೂ ಹಲವು ರಾಜ್ಯಗಳು ಈ ನೆರವಿನ ಪ್ರಯೋಜನ ಪಡೆದಿಲ್ಲ. ಐಸಿಯು, ಆಕ್ಸಿಜನ್ ಬೆಡ್, ಆಮ್ಲಜನಕ ಘಟಕ ಸ್ಥಾಪನೆ, ಅಂಬುಲೆನ್ಸ್ ಇತರ ಸೌಲಭ್ಯಗಳ ಅಭಿವೃದ್ಧಿಪಡಿಸಲು ರಾಜ್ಯಗಳು ತಮ್ಮ ಪಾಲು ಸೇರಿಸಿ, ಯೋಜನೆ ಬಳಕೆ ಮಾಡಿಕೊಳ್ಳಲು ಮೋದಿ ಸಲಹೆ ನೀಡಿರುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net