

ಯಳಂದೂರು: ನರೇಗಾ ಯೋಜನೆ ಸದುಪಯೋಗ ಪಡೆದುಕೊಳ್ಳಿ ಎಂದು ಬಿಳಿಗಿರಿರಂಗನಬೆಟ್ಟದ ಗ್ರಾಪಂ ಅಧ್ಯಕ್ಷ ಸಿ. ಪ್ರತೀಪ್ ಕುಮಾರ್ ಹೇಳಿದರು.
ಶನಿವಾರ ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಲೆಕ್ಕತಪಾಸಣಾ ವಿಶೇಷ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಬೆಟ್ಟ ಪ್ರದೇಶದಲ್ಲಿ ಬುಡಕಟ್ಟು ಸಮುದಾಯದವರು, ಹಿಂದುಳಿದ ವರ್ಗದವರು, ಕೂಲಿ ಕಾರ್ಮಿಕರಿದ್ದಾರೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಇವರೆಲ್ಲರಿಗೆ ವರದಾನವಾಗಿದೆ. ಇಲ್ಲಿನ ಜನರು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಬೆಟ್ಟದಲ್ಲಿ ಗಿರಿಜನರು ಅರಣ್ಯದ ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ತಮ್ಮ ಜೀವವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ಕಾಡಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತದೆ. ಇಲ್ಲಿನ ಗಿರಿಜನರೂ ಸೇರಿದಂತೆ ಅನೇಕರಿಗೆ ಕೃಷಿ ಜಮೀನು ಇದೆ. ನರೇಗಾ ಯೋಜನೆಯಡಿಯಲ್ಲಿ ತಮ್ಮ ಕೃಷಿ ಭೂಮಿಯನ್ನು ಅಭಿವೃದ್ಧಿ ಮಾಡಿಕೊಳ್ಳಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.