

ಕೈಲಾಂಚ : ಗ್ರಾಮೀಣ ಅಭಿವೃದ್ಧಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ತಿಳಿಸಿದರು.
ಹೋಬಳಿಯ ಕೂನಗಲ್ ಪ್ರೌಢಶಾಲೆ ಆವರಣದಲ್ಲಿ ನರೇಗಾದಲ್ಲಿ ಅಭಿವೃದ್ಧಿಪಡಿಸಿರುವ ಆಟದ ಮೈದಾನವನ್ನು ಬುಧವಾರ ವೀಕ್ಷಿಸಿ ಮಾತನಾಡಿ, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವಿಸ್ತಾರವಾದ ಜಾಗಗಳಿದ್ದರೂ, ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಆಟದ ಮೈದಾನಗಳ ಕೊರತೆ ಎದ್ದುಕಾಣುತ್ತಿದೆ. ಶಿಕ್ಷಣಕ್ಕೆ ಒತ್ತು ಕೊಟ್ಟಂತೆ ವಿದ್ಯಾರ್ಥಿಗಳನ್ನು ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಶಾಲೆಗಳಲ್ಲಿ ಆಟದ ಮೈದಾನ ಅಭಿವೃದ್ಧಿ ಪಡಿಸಲು ಸ್ಥಳೀಯ ಗ್ರಾಪಂ ಮೂಲಕ ನರೇಗಾ ಯೋಜನೆ ಬಳಸಿಕೊಂಡು ಸುಸಜ್ಜಿತ ಆಟದ ಮೈದಾನ ಅಭಿವೃಧ್ಧಿ ಮಾಡಲಾಗುತ್ತಿದೆ.
ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಗ್ರಾಮ, ಶಾಲೆಗಳ ಅಭಿವೃದ್ಧಿಯತ್ತ ಗಮನ ನೀಡಿ ನರೇಗಾ ಯೋಜನೆ ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಮುಂದಾಗಬೇಕಿದೆ. ಹುಣಸನಹಳ್ಳಿ ಗ್ರಾಪಂ ನರೇಗಾ ಯೋಜನೆಯಲ್ಲಿ ಜಿಲ್ಲೆಯಲ್ಲೇ ಪ್ರಪ್ರಥಮ ಭಾರಿಗೆ ಶಾಲಾ ಆವರಣದಲ್ಲಿ ಉತ್ತಮ ಆಟದ ಮೈದಾನ ಅಭಿವೃದ್ಧಿಪಡಿಸುವುದು ಮಾದರಿಯಾಗಿದೆ ಎಂದರು.
ಹುಣಸನಹಳ್ಳಿ ಗ್ರಾಪಂ ಪಿಡಿಒ ಕುಮಾರ್ ಮಾತನಾಡಿ, ಗ್ರಾಪಂ ಜನಸ್ನೇಹಿಯಾಗಿದ್ದು, ನರೇಗಾ ಯೋಜನೆಗಳ ಯಶಸ್ಸಿಗೆ ಮುಂದಾಗಿದ್ದು, ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಶಾಲಾ ಆವರಣಕ್ಕೆ ಹೊಂದಿಕೊಂಡಂತೆ ಮಳೆ ನೀರಿನಿಂದ ಕೊಚ್ಚಿಹೋಗಿದ್ದ ಕಾಂಪೌಂಡ್ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ತಿಳಿಸಿದರು.
ಇದೇ ವೇಳೆ ಅಭಿವೃದ್ಧಿ ಕಾರ್ಯಗಳ ಪರಿಶೀಲಿಸಿದ ಇಕ್ರಂ, ನೀರಿನ ತೊಟ್ಟಿಗೆ ಮುಚ್ಚಳವಿಲ್ಲದ್ದನ್ನು ಕಂಡು ಕೂಡಲೇ ಮುಚ್ಚಳ ಅಳವಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮಕ್ಕಳಿಗೆ ಪರಿಸರ, ಶೌಚಗೃಹದಮಹತ್ವ ತಿಳಿಸಿಕೊಡುವ ಕೆಲಸ ಶಿಕ್ಷಕರಿಂದ ಆಗಬೇಕಿದೆ ಎಂದ ಅವರು, ನರೇಗಾದಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ಒತ್ತು ನೀಡುವಂತೆ ತಿಳಿಸಿದರು.ಗ್ರಾಪಂ ಅಧ್ಯಕ್ಷೆ ಎಸ್. ಮಂಜುಳಾ, ಉಪಾಧ್ಯಕ್ಷ ಪುಟ್ಟಸ್ವಾಮಿ, ಸದಸ್ಯರಾದ ಸರೋಜಮ್ಮ, ಸುಕನ್ಯಾ, ಮುತ್ತುರಾಜು, ಕಾಲೇಜು ಪ್ರಾಂಶುಪಾಲ ಎಂ.ವಿ. ವೀರರಾಜು, ಮುಖ್ಯಶಿಕ್ಷಕಿ ಶಶಿಕಲಾ, ತಾಪಂ ಮಾಜಿ ಸದಸ್ಯ ಸಿದ್ದೇಗೌಡ ರವಿ, ಮುಖಂಡರಾದ ಅಪ್ಪಾಜಿ, ಕೆ.ಕೆ. ದಶರಥ, ಮಧು, ಮುಕುಂದರಾವ್, ನರೇಗಾ ತಾಂತ್ರಿಕ ಸಂಯೋಜಕ ಕಾರ್ತಿಕ್ ಮುಂತಾದವರಿದ್ದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ : ರಾಮನಗರ ತಾಪಂ ಇಒ ಶಿವಕುಮಾರ್ ಮಾತನಾಡಿ, ಗ್ರಾಮಸ್ಥರ ಸಹಕಾರದಿಂದ ಕೂನಗಲ್ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಇರುವ ಜಾಗದಲ್ಲೇ ಮಕ್ಕಳಿಗೆ ಆಟ ಆಡಲು ಬೇಕಾಗುವ ಕಬ್ಬಡ್ಡಿ, ವಾಲಿಬಾಲ್, ಖೋಖೋ ಅಂಕಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜತೆಗೆ 5 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮಾದರಿ ಸಮುದಾಯ ಶೌಚಗೃಹ ನಿರ್ಮಿಸಲಾಗಿದೆ. ಹುಣಸನಹಳ್ಳಿ ಗ್ರಾಪಂ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಶೌಚಗೃಹ ನಿರ್ಮಾಣ ಮಾಡಲಾಗಿದೆ. ಶಾಲಾ ಆವರಣದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಆಗಲಿವೆ ಎಂದರು.