ನ್ಯಾನೋ ರಸಗೊಬ್ಬರ ರೈತರಿಗೆ ಆಶಾಕಿರಣ

Agriculture Department programme
ಶಿವಮೊಗ್ಗ ತಾಲೂಕಿನ ರಾಮನಗರ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಆಯೋಜಿಸಿದ್ದ ನ್ಯಾನೋ ರಸಗೊಬ್ಬರಗಳ ತರಬೇತಿ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಕೃಷಿ ಇಲಾಖೆ ಉಪನಿರ್ದೇಶಕಿ ಜಿ.ಮಂಜುಳಾ ಉದ್ಘಾಟಿಸಿದರು. ಎಸ್.ಟಿ.ರಮೇಶ್, ಪ್ರತಿಮಾ, ಸುನಿಲ್ ಇದ್ದರು.
Published on

ಶಿವಮೊಗ್ಗ: ಇತ್ತೀಚಿನ ಯುಗದಲ್ಲಿ ನೂತನ ತಂತ್ರಜ್ಞಾನ ಎಲ್ಲ ಕ್ಷೇತ್ರಗಳಲ್ಲೂ ಹಬ್ಬಿದ್ದು, ಕೃಷಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಇದರಿಂದ ರೈತಾಪಿ ವರ್ಗದವರಿಗೆ ಅನುಕೂಲವಾಗಲಿದೆ ಎಂದು ಕೃಷಿ ಇಲಾಖೆ ಉಪನಿರ್ದೇಶಕಿ ಜಿ.ಮಂಜುಳಾ ಹೇಳಿದರು.

ತಾಲೂಕಿನ ಹಾರನಹಳ್ಳಿ ಹೋಬಳಿಯ ರಾಮನಗರ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಆಯೋಜಿಸಿದ್ದ ನ್ಯಾನೋ ರಸಗೊಬ್ಬರಗಳ ತರಬೇತಿ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡ್ರೋನ್ ಹಾಗೂ ನ್ಯಾನೋ ರಸಗೊಬ್ಬರಗಳ ಬಳಕೆ ರೈತರಿಗೆ ಆಶಾಕಿರಣವಾಗಿವೆ. ಕೃಷಿ ಇಲಾಖೆ ಆತ್ಮ ಯೋಜನೆಯಡಿ ರೈತರಿಗೆ ಕ್ಷೇತ್ರಮಟ್ಟದಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ತರಬೇತಿ, ಕಿಸಾನ್ ಗೋಷ್ಠಿಗಳು ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಗಳ ಮುಖಾಂತರ ರೈತರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ರೈತರಿಗೆ ಹರಳು ರೂಪದ ಯೂರಿಯಾ ಮತ್ತು ಡಿಎಪಿ ರಸಗೊಬ್ಬರವನ್ನು ಕೊಡುವ ಬದಲಾಗಿ ನ್ಯಾನೋ ಯೂರಿಯಾ (ಶೇ.20 ಸಾರಜನಕ)-500 ಮಿಲಿ ಬಾಟಲಿನಲ್ಲಿ ಲಭ್ಯವಿದೆ ಮತ್ತು ನ್ಯಾನೋ ಡಿಎಪಿ (ಶೇ.8 ಸಾರಜನಕ ಮತ್ತು ಶೇ.16 ರಂಜಕ)-500 ಮಿಲಿ ಬಾಟಲಿನಲ್ಲಿ ಲಭ್ಯವಿರುವ ದ್ರವ ರೂಪದ ರಸಗೊಬ್ಬರಗಳನ್ನು ಬೆಳೆಗಳಿಗೆ ಸಿಂಪಡಿಸಬೇಕು ಎಂದು ಹೇಳಿದರು.

ಕೃಷಿ ಅಧಿಕಾರಿ ಪ್ರತಿಮಾ, ಸುನಿಲ್, ವಿವಿ ವಿಜ್ಞಾನಿಗಳು, ಕೃಷಿಕ ಸಮಾಜದ ನಿರ್ದೇಶಕರು ಮತ್ತು ರೈತರು ಹಾಜರಿದ್ದರು.

ಅತಿಯಾದ ಯೂರಿಯಾ ಬಳಕೆಯಿಂದ ಮನುಷ್ಯ ಹಾಗೂ ಮಣ್ಣಿನ ಆರೋಗ್ಯದ ಮೇಲೆ ವಿಪರೀತ ದುಷ್ಪರಿಣಾಮ ಬೀರುತ್ತಿವೆ. ಅತಿಯಾಗಿ ಬಳಕೆಯಾಗುವ ಸಾರಜನಕವು ಅಂರ್ತಜಲ ಸೇರಿ ನೈಟ್ರೇಟ್ ಅಂಶಗಳಿಂದ ನೀರನ್ನು ಕಲುಷಿತಗೊಳಿಸುತ್ತಿದೆ. ಮಣ್ಣು ಸಹ ತನ್ನ ಸತ್ವ ಕಳೆದುಕೊಳ್ಳಲಿದೆ. ಆದ್ದರಿಂದ ರೈತರು ಯೂರಿಯಾ ರಸಗೊಬ್ಬರದ ಬದಲಾಗಿ ನ್ಯಾನೋ ಯೂರಿಯಾ ರಸಗೊಬ್ಬರ ಬಳಸಿ.

- ಎಸ್.ಟಿ.ರಮೇಶ್, ಸಹಾಯಕ ಕೃಷಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net