ಅನಿರ್ದಿಷ್ಟಾವಧಿ ಮುಷ್ಕರ ಆರಂಭ

18NGD1
Published on

ನಂಜನಗೂಡು: ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ವಾಹನ ಚಾಲಕರಿಗೆ 10 ವರ್ಷ ಕಠಿಣ ಶಿಕ್ಷೆ, 7 ಲಕ್ಷ ರೂ.ವರೆಗೆ ದಂಡ ವಿಧಿಸುವ ಕಾನೂನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ, ಗುರುವಾರ ಲಾರಿ ಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ನಂಜನಗೂಡಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಚಾಲನೆ ನೀಡಿದರು.


ನಗರದ ಎಪಿಎಂಸಿ ಮಾರುಕಟ್ಟೆ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು ವಿಶ್ವೇಶ್ವರಯ್ಯ ವೃತ್ತದವರೆಗೆ ಬೃಹತ್ ರ‌್ಯಾಲಿ ನಡೆಸಿ ನಂತರ ಹುಲ್ಲಹಳ್ಳಿ ವೃತ್ತದ ಬಳಿ ಕೆಲ ಸಮಯ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ತಡೆದು ಮಾನವ ಸರಪಳಿ ನಿರ್ಮಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಲಾರಿ ಚಾಲಕರ ಸಂಘದ ತಾಲೂಕು ಅಧ್ಯಕ್ಷ ಸಿದ್ದಪ್ಪ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ಕಾಯ್ದೆ ವಾಹನ ಚಾಲಕರ ಮನೋಸ್ಥೈರ್ಯವನ್ನು ಕುಗ್ಗಿಸುವಂಥದ್ದಾಗಿದೆ. ವಾಹನ ಚಾಲಕರ ಬಳಿ 7 ಲಕ್ಷ ರೂ.ವರೆಗೆ ಹಣವಿದ್ದರೆ ಚಾಲನ ವೃತ್ತಿಯನ್ನೇ ಅವಲಂಬಿಸದೆ ಅನ್ಯ ಉದ್ಯೋಗ ಮಾಡಲಿದ್ದಾರೆ. ಅಪಘಾತ ಉದ್ದೇಶಪೂರ್ವಕವಾಗಿ ನಡೆಯುವುದಿಲ್ಲ. ಅಂತಹ ಸಂದರ್ಭದಲ್ಲಿ ಚಾಲಕರಿಗೆ 10 ವರ್ಷ ಜೈಲು, 7 ಲಕ್ಷ ರೂ.ವರೆಗೆ ದಂಡ ವಿವಿಧಿಸುವ ಕಾನೂನು ಜಾರಿಯಾದರೆ ನಾವು ಚಾಲಕ ವೃತ್ತಿಯನ್ನೇ ತೊರೆಯಲಿದ್ದೇವೆ. ನಮ್ಮ ಚಾಲನಾ ಪರವಾನಗಿಯನ್ನು ಹಿಂಪಡೆದು ಅನ್ಯ ಉದ್ಯೋಗ ದೊರಕಿಸಿಕೊಡಿ ಎಂದು ತಮ್ಮ ಡಿಎಲ್‌ಗಳ ಪ್ರತಿಗಳನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.


ಇನ್ನು ಕೇಂದ್ರ ಗೃಹ ಸಚಿವರು ನೂತನ ಕಾಯ್ದೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸದೆ ಆತುರವಾಗಿ ನಿರ್ಣಯ ಕೈಗೊಂಡಿರುವುದು ಸರಿಯಲ್ಲ. ಚಾಲಕರಿಗೆ ಮಾರಕವಾಗಿರುವ ಕಾಯ್ದೆಯನ್ನು ಜಾರಿ ಮಾಡಬಾರದು. ಹಿಂಪಡೆಯುವವರೆಗೂ ಧರಣಿ ಮುಂದುವರಿಸುತ್ತೇವೆ ಎಂದರು.


ಸಂಘದ ಗೌರವಾಧ್ಯಕ್ಷ ವಿಶ್ವನಾಥ್ ಮಾತನಾಡಿ, ಚಾಲಕರು ನಿರ್ಭೀತಿಯಿಂದ ಚಾಲನೆಯಲ್ಲಿ ತೊಡಗುವಂತಹ ವಾತಾವರಣವನ್ನು ಕೇಂದ್ರ ಸರ್ಕಾರ ಕಲ್ಪಿಸಿಕೊಡಬೇಕು. ಚಾಲಕರಿಗೆ ಹೆದ್ದಾರಿಗಳಲ್ಲಿ ವಿಶ್ರಾಂತಿ ಕೇಂದ್ರ ತೆರೆಯಬೇಕು. ಒಂದು ವೇಳೆ ಕೇಂದ್ರ ಸರ್ಕಾರ ನಿಲುವು ಬದಲಿಸದಿದ್ದಲ್ಲಿ ನಾಳೆಯಿಂದ ಅಗತ್ಯ ವಸ್ತುಗಳ ಸೇವೆ ನಿಲ್ಲಿಸಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.


ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಕೊಂದಂಡರಾಮು, ಲಾರಿ ಚಾಲಕರ ಪರಿಷತ್ ರಾಜ್ಯಾಧ್ಯಕ್ಷ ರಾಜೇಂದ್ರ, ಚಾಲಕರಾದ ಶ್ರೀನಿವಾಸ್, ಸುರೇಶ್, ರಾಜು, ರಫೀಕ್ ಪಾಷ, ಸ್ವಾಮಿ, ಅಭಿ, ನಿಂಗರಾಜು, ಉಮೇಶ, ಬಣ್ಣಾರಿ ಅಮ್ಮನ್ ಶುಗರ್ಸ್‌ ಕಾರ್ಖಾನೆಯ ಲಾರಿ ಚಾಲಕರು, ಲಾರಿ ಚಾಲಕರ ಪರಿಷತ್ ಸದಸ್ಯರು, ಲಾರಿ ಮಾಲೀಕರ ಸಂಘದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net