ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಪೂಜೆ

06NGD6
Published on

ನಂಜನಗೂಡು: ನಗರದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಸೋಮವಾರ ರೂಪಿಸಿದ್ದ ವೈಕುಂಠ ದ್ವಾರ ಹಾಗೂ ಸಪ್ತಗಿರಿ ದರ್ಶನ ಅಲಂಕಾರ ಭಕ್ತರ ಮನಸೂರೆಗೊಂಡಿತು.

ಬಗೆಬಗೆಯ ಹೂ ಹಾಗೂ ಅಲಂಕಾರಿಕ ವಿನ್ಯಾಸಗಳಿಂದ ಸಿಂಗರಿಸಲಾಗಿದ್ದ ದೇವಾಲಯದಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ವೈಕುಂಠ ದ್ವಾರದ ಮೂಲಕ ದರ್ಶನ ಪಡೆದ ಭಕ್ತರು ಪುನೀತರಾದರು. ಇನ್ನು ಸಪ್ತಗಿರಿ ದರ್ಶನವನ್ನು ಕಣ್ತುಂಬಿಕೊಂಡ ಭಕ್ತರು ಪೂಜೆ ಸಲ್ಲಿಸಿದರು.

ತೂಗುಯ್ಯಲೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಉತ್ಸವಮೂರ್ತಿಗೆ ಭಕ್ತರು ನಮಿಸಿದರು. ಭಕ್ತರಿಗಾಗಿ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಭಜನೆ: ಗಾಯಕಿ ಗಾಯತ್ರಿ ಬಾಲಾಜಿ ನೇತೃತ್ವದ ರಾಜರಾಜೇಶ್ವರಿ ಗಾನ ಸಂಘದ ಸದಸ್ಯರು ನಡೆಸಿಕೊಟ್ಟ ಭಜನೆ ಕೇಳುಗರನ್ನು ಭಕ್ತಿರಸದಲ್ಲಿ ತೇಲುವಂತೆ ಮಾಡಿತು. ಸತತ ಎರಡು ಗಂಟೆಗಳ ಕಾಲ ವಿಷ್ಣು ಸಹಸ್ರನಾಮವನ್ನು ಭಜಿಸಿ ಭಕ್ತರ ಮೆಚ್ಚುಗೆಗೆ ಪಾತ್ರರಾದರು.ಗೋವಿಂದ ನಾಮಾವಳಿ ಹಾಗೂ ಅನ್ನಮಯ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಎಲ್ಲರನ್ನು ತಲೆದೂಗುವಂತೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net